Advertisement

ಅತೃಪ್ತರ ಅನರ್ಹತೆ: ಬಿಜೆಪಿ ಸದ್ಯ ನಿರಾಳ

08:50 AM Jul 30, 2019 | Sriram |

ಬೆಂಗಳೂರು: ಅತೃಪ್ತ 17 ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಚರ್ಚೆ ಆರಂಭವಾಗಿದೆ. ಅತೃಪ್ತರ ಭವಿಷ್ಯ ಡೋಲಾಯಮಾನವಾಗಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿರುವ ಅನರ್ಹ ಶಾಸಕರಿಗೆ ಪರೋಕ್ಷವಾಗಿ ಸಹಾಯ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

Advertisement

ಅನರ್ಹಗೊಂಡ ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಂಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದ 17 ಶಾಸಕರನ್ನು ಪರೋಕ್ಷ ವಾಗಿಯಾದರೂ ರಕ್ಷಣೆ ಮಾಡಬೇಕೆಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಮೈತ್ರಿ ಸರ್ಕಾರದ ಬಹುಮತ ಸಾಬೀತಿನ ಸಂದರ್ಭ ದಲ್ಲಿ ಅತೃಪ್ತ ಶಾಸಕರಲ್ಲಿ ಬಹುತೇಕರು ಮುಂಬೈನ ಸ್ಟಾರ್‌ ಹೋಟೆಲ್ ಒಂದರಲ್ಲಿ ವಾಸವಾಗಿದ್ದು, ಅಲ್ಲಿಂದಲೇ ವಿಡಿಯೋ ಸಂದೇಶಗಳನ್ನು ಹರಿಬಿಡುತ್ತಿದ್ದರು. ಬಹುಮತ ಸಾಬೀತು ಸಂದರ್ಭದಲ್ಲಿ ಮೈತ್ರಿ ಸರ್ಕಾರಕ್ಕೆ ಸಂಖ್ಯಾ ಬಲ ಇಲ್ಲದ ಕಾರಣ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಮಾರನೇ ದಿನವೇ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿದರು.

ಇದಾದ ಬೆನ್ನಲ್ಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆ ರಾಜಭವನಕ್ಕೆ ತೆರಳಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕೋರಿಕೊಂಡರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಂಜೆ 6ರ ನಂತರ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟರು.

ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಎರಡನೇ ದಿನಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌ ಉಳಿದ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದರು. ಈ ಎಲ್ಲ ಶಾಸಕರಿಗೂ ಸುಪ್ರೀಂಕೋರ್ಟ್‌ ಒಂದೇ ದಿಕ್ಕಾಗಿದೆ. ಬೇರೆ ಅವಕಾಶ ಗಳೇ ಇಲ್ಲದಾಗಿದೆ. ಒಂದೊಮ್ಮೆ ಸುಪ್ರೀಂಕೋರ್ಟ್‌ ಕೂಡ ಸ್ಪೀಕರ್‌ ಆದೇಶವನ್ನು ಎತ್ತಿಹಿಡಿದರೆ, ಈ ವಿಧಾನ ಸಭೆ ಮುಗಿಯುವವರೆಗೂ ಅನರ್ಹ ಶಾಸಕರು ಎಲ್ಲ ರೀತಿಯ ಅಧಿಕಾರದಿಂದ ಹೊರಗೆ ಉಳಿಯಬೇಕಾ ಗುತ್ತದೆ.

Advertisement

ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಪರೋಕ್ಷವಾಗಿ ಸಹಕರಿಸಿ ಅನರ್ಹಗೊಂಡಿರುವ ಶಾಸಕರಿಗೆ ಬಿಜೆಪಿ ಕಾನೂನಾತ್ಮಕವಾಗಿ ಪರೋಕ್ಷ ಸಹಾಯ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕಾನೂನು ಹೋರಾಟ ರೂಪಿಸುವುದು, ವಾದ ಮಂಡಿಸುವುದು, ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪು ಇತ್ಯಾದಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯಾವ ರೀತಿಯಲ್ಲಿ ಅನರ್ಹ ಶಾಸಕರಿಗೆ ಸಹಾಯ ಮಾಡ ಬಹುದು ಎಂಬುದರ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೀಕರ್‌ ತೀರ್ಪು ಸಂವಿಧಾನದ ಘನತೆ ಎತ್ತಿಹಿಡಿದಿದೆ: ನಾಣಯ್ಯ
ಬೆಂಗಳೂರು: ‘ಪಕ್ಷಾಂತರ ನಿಷೇಧ ಕಾಯ್ದೆಯಡಿ 17 ಶಾಸಕರನ್ನು ಅನರ್ಹಹೊಳಿಸಿ ಸ್ಪೀಕರ್‌ ರಮೇಶ್‌ ಕುಮಾರ್‌ ಪ್ರಕಟಿಸಿದ ತೀರ್ಪು ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ತಂದು ಕೊಟ್ಟಿದೆ’ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷಾಂತರ ನಿಷೇಧ ಕಾಯ್ದೆಗಿರುವ ನಿಜವಾದ ಶಕ್ತಿಯನ್ನು ತೋರಿಸಿಕೊಟ್ಟ ಸ್ಪೀಕರ್‌, ಈ ದೇಶದ ಗೌರವ ಕಾಪಾಡಿದ್ದಾರೆ. ಅವರ ಈ ಐತಿಹಾಸಿಕ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಬೇಕು’ ಎಂದಿದ್ದಾರೆ.

ಸದುದ್ದೇಶದಿಂದ ಜಾರಿಗೆ ತರಲಾದ ಪಕ್ಷಾಂತರ ನಿಷೇಧ ಕಾಯ್ದೆಗೆ ವ್ಯತಿರಿಕ್ತವಾಗಿ ಶಾಸಕರನ್ನು ತಮಗೆ ಬೇಕಾದಂತೆ ಖರೀದಿಸುವ ಮತ್ತು ತಮಗಿಷ್ಟ ಬಂದಂತೆ ಸರ್ಕಾರಗಳನ್ನು ಬದಲಿಸುವ ಪ್ರಕ್ರಿಯೆ ಮನಸೋಇಚ್ಛೆ ನಡೆಯುತ್ತಿತ್ತು. ಇದರಿಂದಾಗಿ ಸಂವಿಧಾನಕ್ಕೆ ತದ್ವಿರುದ್ಧವಾಗಿ ಜನವಿರೋಧಿ ಸರ್ಕಾರಗಳನ್ನು ರಚಿಸುವ ಕೆಟ್ಟ ಪ್ರವೃತ್ತಿ ದೇಶದೆಲ್ಲೆಡೆ ವ್ಯಾಪಕವಾಗಿತ್ತು. ಇದಕ್ಕೆ ಕಡಿವಾಣ ಹಾಕುವ ದಿಸೆಯಲ್ಲಿ ಸ್ಪೀಕರ್‌ ತೀರ್ಪು ಮಹತ್ವದ್ದಾಗಲಿದೆ ಎಂದು ನಾಣಯ್ಯ ಹೇಳಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಸೇರಿ ಹಲವು ಪ್ರಾದೇಶಿಕ ಪಕ್ಷಗಳು ಇಂತಹ ಕೆಲಸವನ್ನು ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾ ಬಂದಿದ್ದವು. ಇಂತಹ ಸಂದರ್ಭದಲ್ಲಿ ಜನ ಪ್ರಜಾಸತ್ತಾತ್ಮಕ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು. ಇಂತಹ ಸ್ಥಿತಿಯಲ್ಲಿ 17 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಈ ದೇಶವನ್ನು ಕಾಪಾಡುವ ಶಕ್ತಿಗಳು ಇವೆ ಎಂದು ಸ್ಪೀಕರ್‌ ಸಾಬೀತುಪಡಿಸಿದ್ದಾರೆ ಎಂದರು.

ಶಾಸಕರ ಅನರ್ಹತೆ ಸರಿಯಲ್ಲ: ಜೋಶಿ
ಧಾರವಾಡ: ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡದೆ ಅನರ್ಹತೆ ಮಾಡಿರುವ ಸ್ಪೀಕರ್‌ ರಮೇಶ ಕುಮಾರ ಅವರ ಕ್ರಮ ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್‌ ಎನ್ನುವುದು ಸಾಂವಿಧಾನಿಕ ಸಂಸ್ಥೆ ಇದ್ದಂತೆ. ಅದಕ್ಕೆ ಧಕ್ಕೆ ಬರುವಂತೆ ಯಾರೂ ನಡೆದುಕೊಳ್ಳಬಾರದು. ಆದರೆ, ರಮೇಶ ಕುಮಾರ ಶಾಸಕರನ್ನು ಅನರ್ಹ ಮಾಡಿದ್ದು, ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆ ವ್ಯವಸ್ಥೆಗೆ ಆತಂಕಕಾರಿ ಬೆಳವಣಿಗೆ ಆಗಿದೆ. ಸುಪ್ರೀಂ ಕೋರ್ಟ್‌ ಸೂಚನೆ ಅನ್ವಯ ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ಸಲ್ಲಿಸಿದರೂ ಅಂಗೀಕಾರ ಮಾಡದೆ ಇರುವುದು ಸರಿಯಾದ ನಡೆಯಲ್ಲ. ಅವರ ಈ ವರ್ತನೆ ವೈಯಕ್ತಿಕವಾಗಿ ನೋವು ತಂದಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಅನರ್ಹಗೊಂಡ ಶಾಸಕರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ತೀರ್ಪು ನ್ಯಾಯ ಸಮ್ಮತವಲ್ಲ
ಹಾವೇರಿ:
ತಮ್ಮ ಶಾಸಕ ಸ್ಥಾನವನ್ನು ಸ್ಪೀಕರ್‌ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು, ಕಾರ್ಯಕರ್ತರಿಗೆ ಸಂದೇಶ ನೀಡಿರುವ ಬಿ.ಸಿ. ಪಾಟೀಲ್, ‘ಸ್ಪೀಕರ್‌ ತೀರ್ಪು ನ್ಯಾಯ ಸಮ್ಮತವಾಗಿಲ್ಲ. ಯಾರೂ ಧೃತಿಗೆಡಬಾರದು. ಚುನಾವಣೆಗೆ ಸಿದ್ಧರಾಗಬೇಕು’ ಎಂದು ಕೋರಿದ್ದಾರೆ. ಸ್ಪೀಕರ್‌ ತೀರ್ಪಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯದ ಪರ ತೀರ್ಪು ಪಡೆಯೋಣ. ಯಾವುದೇ ಕಾರಣಕ್ಕೂ ಧೃತಿಗೆಡದೆ ಮುಂದಿನ ನಡೆ ಬಗ್ಗೆ ದೃಢ ನಿರ್ಧಾರ ಕೈಗೊಳ್ಳೋಣ. ಮತ್ತೂಮ್ಮೆ ಚುನಾವಣೆ ಎದುರಿಸಲು ಸಿದ್ಧರಿರೋಣ’ ಎಂದು ಬಿ.ಸಿ.ಪಾಟೀಲ್ ಸಂದೇಶ ನೀಡಿದ್ದಾರೆ.

ಸ್ಪೀಕರ್‌ ಕ್ರಮ ಸ್ವಾಗತಾರ್ಹ
ಧಾರವಾಡ: ಒಂದು ಪಕ್ಷದಿಂದ ಸ್ಪರ್ಧಿಸಿ ತಮಗೆ ಬೇಕಾದಾಗ ರಾಜೀನಾಮೆ ನೀಡುವುದು ಸರಿಯಲ್ಲ. ಈ ವಿಚಾರವಾಗಿ ಸ್ಪೀಕರ್‌ ಒಳ್ಳೆಯ ನಿರ್ಣಯ ಪ್ರಕಟಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರು ರಾಜೀನಾಮೆ ಕೊಟ್ಟು ಸದನದಲ್ಲೇ ಇರಬೇಕಿತ್ತು. ಅದನ್ನು ಬಿಟ್ಟು ಅವರು ಮುಂಬೈನ ರೆಸಾರ್ಟ್‌ನಲ್ಲಿ ಕಾಲ ಕಳೆದ ಕಾರಣಕ್ಕೆ ರಾಜೀನಾಮೆ ಅಂಗೀಕಾರ ಮಾಡುವ ಬದಲಾಗಿ ಅನರ್ಹ ಮಾಡಿದ್ದಾರೆ. ಅನರ್ಹರು ಸುಪ್ರೀಂ ಕೋರ್ಟ್‌ಗೆ ಹೋದರೆ ಅಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯಲಿದೆ. ಸದ್ಯ ಸ್ಪೀಕರ್‌ ಅವರು ಅತೃಪ್ತ ಶಾಸಕರನ್ನು ಅನರ್ಹ ಮಾಡಿರುವುದು ಬಿಜೆಪಿಯವರಿಗೆ ಒಳಗೊಳಗೆ ಖುಷಿಯಾಗಿದ್ದು, ಅವರ ಕಾಟ ತಪ್ಪಿದಂತಾಗಿದೆ. ಸ್ಪೀಕರ್‌ ತಮ್ಮ ಇತಿಮಿತಿಯಲ್ಲಿ ಕಾಯ್ದೆ, ಕಾನೂನು ನೋಡಿಯೇ ಅನರ್ಹತೆ ಮಾಡಿದ್ದಾರೆ ಎಂದು ಹೇಳಿದರು. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಬಳಿ ಅಲ್ಪ ಬಹುಮತ ಇರುವ ಕಾರಣ ಬಿಎಸ್‌ವೈ ಸರ್ಕಾರ ಸಹ ಕುಂಟುತ್ತಲೇ ಸಾಗಲಿದೆ. ಒಮ್ಮೆ ಆಯ್ಕೆಯಾದ ಶಾಸಕರು ರಾಜೀನಾಮೆ ನೀಡಿದರೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತಹ ಕಾನೂನು ರಾಜಕಾರಣದಲ್ಲಿ ಬರಬೇಕು. ಹೀಗಾಗಿ ದೇಶದ ಬಗ್ಗೆ ಬಹಳವಾಗಿ ಮಾತನಾಡುವ ಪ್ರಧಾನಿ ಮೋದಿ ಅವರೇ ಒಂದು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ಶಾಸಕರ ಕುದುರೆ ವ್ಯಾಪಾರ ಕುರಿತು ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಹೊತ್ತು ಬಂದಂತೆ ಕೊಡೆ ಹಿಡಿಯೋದು ಸರಿಯಲ್ಲ. ಜಿ.ಟಿ.ದೇವೇಗೌಡರು ಬಿಜೆಪಿಗೆ ನೈತಿಕ ಬೆಂಬಲ ಕೊಡುವ ವಿಚಾರವಾಗಿ ಹೇಳಿಕೆ ನೀಡಿದ್ದು ಸರಿಯಲ್ಲ.
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯಸ್ಪೀಕರ್‌ ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ
ಗಂಗಾವತಿ: ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್‌ ಕ್ರಮ ಸೂಕ್ತವಾಗಿದೆ. ಇದನ್ನು ಟೀಕಿಸುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಮಾಜಿ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಾಂತರ ಮಾಡಿ ಆಸೆ-ಆಮಿಷಗಳಿಗೆ ಒಳಗಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸ್ಪೀಕರ್‌ ಅನರ್ಹ ಮಾಡಿದ್ದು ಸರಿಯಿದೆ. ಪಕ್ಷದ ವಿಪ್‌ ಉಲ್ಲಂಘನೆ ಮಾಡಿದವರಿಗೆ ಮತ್ತು ರಾಜೀನಾಮೆ ನೀಡಿದವರಿಗೆ ನೋಟಿಸ್‌ ನೀಡಿ ಅಹವಾಲು ಕೇಳಲು ಆಹ್ವಾನಿಸಿದರೂ ಶಾಸಕರು ಬಂದಿಲ್ಲ. ಹೀಗಾಗಿ, ಸ್ಪೀಕರ್‌ ನಿರ್ಣಯ ಕ್ರಮಬದ್ಧವಾಗಿದೆ ಎಂದರು. ಈ ಹಿಂದೆ ನನ್ನನ್ನು ಸೇರಿ 11 ಶಾಸಕರನ್ನು ಅಂದಿನ ಸ್ಪೀಕರ್‌ ಯಾವುದೇ ನೋಟಿಸ್‌ ನೀಡದೆ, ಮನೆಗಳಿಗೆ ನೋಟಿಸ್‌ ಅಂಟಿಸಿ, ವಿಚಾರಣೆಗೂ ಕರೆಯದೆ, 24 ಗಂಟೆಯೊಳಗೆ ಅನರ್ಹಗೊಳಿಸಿದ್ದರು. ನಾವು ಪಕ್ಷೇತರ ಶಾಸಕರಾಗಿದ್ದರೂ ಲೆಕ್ಕಿಸದೆ ಅನರ್ಹ ಮಾಡಿದ್ದರು. ಇದನ್ನು ಸುಪ್ರೀಂಕೋರ್ಟ್‌ ತಡೆ ಹಿಡಿದಿತ್ತು ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next