Advertisement

ಅಪ್ರತಿಮ ಕನ್ನಡ ಪ್ರೇಮಿ ಬೆ.ರ. ರಂಗರಾಜು

04:46 PM Feb 25, 2017 | Team Udayavani |

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಅಧ್ಯಕ್ಷ ಬೆ. ರ ರಂಗರಾಜು. ಇತ್ತೀಚೆಗೆ ನಮ್ಮನ್ನು ಅಗಲಿದ ರಂಗರಾಜು ಕನ್ನಡದ ಕಟ್ಟಾಳು. ಕನ್ನಡ ಪರವಾದ ಎಲ್ಲ ಹೋರಾಟಗಳಲ್ಲಿ ಪಾಲ್ಗೊಂಡಿದ್ದುದು, ಕನ್ನಡ ಹೋರಾಟಗಾರರು ಹಾಗೂ ಕಾರ್ಮಿಕರ ಹಿತರಕ್ಷಣೆಗೆ ಶ್ರಮಿಸಿದ್ದು ಇವರ ಹೆಚ್ಚುಗಾರಿಕೆ.

Advertisement

ಇಂಥ ಧೀಮಂತನ ಸ್ಮರಣೆಯ ನೆಪದಲ್ಲಿ ವಿಚಾರ ಸಂಕಿರಣ ಒಂದು ನಡೆಯುತ್ತಿದೆ.
ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್‌ನ ಪಂಪ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಎಂ. ಚಿದಾನಂದ ಮೂರ್ತಿ, ಡಾ. ಸಿ. ವೀರಣ್ಣ, ಎಲ್‌. ಎನ್‌ ಮುಕುಂದರಾಜ್‌, ಎಸ್‌. ಜಿ. ಸಿದ್ದರಾಮಯ್ಯ, ಡಾ. ಪಿ.ವಿ ನಾರಾಯಣ, ಎಲ್‌. ಜಿ ಹಳ್ಳಿ ನಾಗರಾಜ್‌, ರಾ. ನಂ ಚಂದ್ರಶೇಖ, ಇಂದಿರಾ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸರೋಜಿನಿ ಮಹಿಷಿ ವರದಿ ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಅನ್ವಯ ಹಾಗೂ ಕನ್ನಡವನ್ನು ಅನ್ನದ ಭಾಷೆ ಮಾಡುವುದು ಹೇಗೆ ಎಂಬ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ. 

ಬಾಲಕನಾಗಿದ್ದಾಗಲೇ ಅ.ನ.ಕೃ., ಮ. ರಾಮಮೂರ್ತಿ ಅವರು ಆರಂಭಿಸಿದ ಚಳವಳಿಯಲ್ಲಿ ಪಾಲ್ಗೊಂಡಿದ್ದ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಬೆ.ರ. ರಂಗರಾಜು ಇತ್ತೀಚೆಗೆ(19-01-2017) ನಿಧನರಾದರು. ತಮ್ಮ 69ನೆಯ ವಯಸ್ಸಿನಲ್ಲಿ ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದರು. ರಂಗರಾಜು ತಮ್ಮ ದೇಹವನ್ನು, ಕಣ್ಣನ್ನು ದಾನ ಮಾಡುವಂತೆ ಬರೆದಿಟ್ಟಿದ್ದರು. ಕುಟುಂಬದವರು ಖಾಸಗಿ ಆಸ್ಪತ್ರೆಗೆ ಅವರ ದೇಹವನ್ನು ದಾನ ಮಾಡಿದರು.

ಶಾಲಾ ದಿನಗಳಿಂದಲೇ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ರಂಗರಾಜು ಬೆಂಗಳೂರಿನಲ್ಲಿ 1962ರಿಂದ ನಡೆದ‌ ಕನ್ನಡ ಹೋರಾಟಗಳ ಪ್ರತ್ಯಕ್ಷದರ್ಶಿ ಆಗಿದ್ದರು. ಕೈಗಾರಿಕೆಗಳಲ್ಲಿ ಕನ್ನಡಪರ ಚಟುವಟಿಕೆಗಳಿಗೆ ಸ್ಪಷ್ಟ ಹಾದಿ ನಿರ್ಮಿಸಿದ “ಬಿ.ಇ.ಎಲ್‌. ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಮಿತಿ’ಯ ಸ್ಥಾಪಕ ಸಂಘಟನಾ ಕಾರ್ಯದರ್ಶಿಯಾಗಿ, ನಂತರ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಅಖೀಲ ಕರ್ನಾಟಕ ಕೈಗಾರಿಕಾ ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸ್ಥಾಪಕ ಉಪಾಧ್ಯಕ್ಷರಾಗಿ, 1986-89ರ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ(ಪ್ರಥಮ), ಇತ್ತೀಚಿನ ವರ್ಷಗಳಲ್ಲಿ ಡಾ.ಸಿ. ವೀರಣ್ಣ ನೇತೃತ್ವದ “ಕರ್ನಾಟಕ ಸಾಹಿತ್ಯ ಪರಿಷತ್ತಿ’ನ ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾಶೀಲರಾಗಿದ್ದರು.

Advertisement

ಕನ್ನಡ ಚಳವಳಿಯ ನಾಯಕ, ದಿವಂಗತ ಜಿ. ನಾರಾಯಣಕುಮಾರ್‌ ಅವರ ಅಪ್ತರಾಗಿದ್ದ ರಂಗರಾಜು ಅವರು ದಶಕಗಳ ಕಾಲ ನಾರಾಯಣಕುಮಾರ್‌ ನಡೆಸಿದ ಎಲ್ಲ ಹೋರಾಟಗಳಲ್ಲೂ ಸಕ್ರಿಯರಾಗಿದ್ದರು. ಅರಳೆಪೇಟೆಯವರಾದ ರಂಗರಾಜು  ಹಿರಿಯ ಕನ್ನಡ ಹೋರಾಟಗಾರರ ಸಂಪರ್ಕ ಇಟ್ಟುಕೊಂಡಿದ್ದರು. ಕನ್ನಡ ಚಳವಳಿಯ ಆರಂಭದ ದಿನಗಳಿಂದ ಎಲ್ಲ ಹೋರಾಟಗಳ ವಿವರಗಳನ್ನು ಬಹಳ ಆಪ್ತವಾಗಿ ವಿಚಾರಿಸುತ್ತಿ¨ª‌ರು. 1960-70ರ ದಶಕದಲ್ಲಿ ಕನ್ನಡ ಕಾರ್ಯಕರ್ತರಿಗೆ, ವಿಶೇಷವಾಗಿ ಕನ್ನಡ ಕಾರ್ಮಿಕರಿಗೆ ಸೇರುದಾಣವಾಗಿದ್ದ ಕೆಂಪೇಗೌಡ ರಸ್ತೆಯ ಸ್ಟೇಟ್ಸ್‌ ಟಾಕೀಸಿನ(ಈಗಿನ ಭೂಮಿಕ) ಪಕ್ಕದ ವಸಂತ ವಿಹಾರದ ಕಾಯಂ ಸದಸ್ಯರಾಗಿ ಕನ್ನಡ ಹೋರಾಟದ ಎಲ್ಲ ಮಜಲುಗಳನ್ನು ಬಲ್ಲವರಾಗಿದ್ದರು(ವಸಂತ ವಿಹಾರದಲ್ಲಿ ಜ್ಯೂಕ್‌ ಬಾಕ್ಸ್‌ ಇತ್ತು. ನಾಲ್ಕಾಣೆ ಹಾಕಿದರೆ 1 ಹಾಡು ಬರುತ್ತಿತ್ತು. ಅಲ್ಲಿ ಕನ್ನಡ ಮತ್ತು ತಮಿಳರ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಕನ್ನಡ ಹೋರಾಟಗಾರರು ಸರದಿಯ ಸಾಲಿನಲ್ಲಿ ನಿಂತು ನಾಲ್ಕಾಣೆ ಹಾಕಿ ನಿರಂತರವಾಗಿ ಕನ್ನಡ ಹಾಡು ಬರುವಂತೆ ಮಾಡುತ್ತಿದ್ದರು. ಆ ದಿನಗಳಲ್ಲಿ ಅದೂ ಕೂಡ ಕನ್ನಡವನ್ನು ಮೆರೆಸುವ ಮಾರ್ಗವಾಗಿತ್ತು). ರಂಗರಾಜು ಅವರು ಕೆಲಸ ಮಾಡುತ್ತಲೇ ಕನ್ನಡ ಎಂ.ಎ. ಮಾಡಿದರು. ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದರು, ಬರೆಯುತ್ತಿದ್ದರು. “ಪರಸ್ಪರ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಒಂದೆರಡು ದಶಕಗಳಿಂದ ಕನ್ನಡ ಹೋರಾಟಕ್ಕಿಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದರು. ರಂಗರಾಜು ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗುವಂತಹ ಸಂಗತಿಯೊಂದನ್ನು ಇಲ್ಲಿ ಹೇಳಿಬಿಡಬೇಕು. ಕೆಲವು ವರ್ಷಗಳ ಹಿಂದೆ ಕನ್ನಡ ಬಾವುಟ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಬೆ.ನಿ. ಈಶ್ವರಪ್ಪ ಅವರು ತೀರಾ ಕಷ್ಟದಲ್ಲಿದ್ದಾರೆ ಎಂಬ ವಿಚಾರ ತಿಳಿಯಿತು. ಯಾರಿಗೂ ಅವರ ಮನೆ ತಿಳಿದಿರಲಿಲ್ಲ. ಕೊನೆಗೆ ರಂಗರಾಜು ಅವರನ್ನು ಸಂಪರ್ಕಿಸಿದಾಗ ಅವರ ಮನೆಗೆ ಕರೆದುಕೊಂಡು ಹೋದರು. ಈಶ್ವರಪ್ಪನವರ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಆಗ ಅವರಿಗೆ ಕನ್ನಡ ಗೆಳೆಯರ ಬಳಗ 51 ಸಾವಿರ ರು. ಸಂಗ್ರಹಿಸಿ ಕೊಟ್ಟಿತು. 

– ರಾ.ನಂ. ಚಂದ್ರಶೇಖರ

Advertisement

Udayavani is now on Telegram. Click here to join our channel and stay updated with the latest news.

Next