Advertisement

ಸಮರ್ಪಕ ಚಿಕಿತ್ಸೆ ನೀಡದ ಸಿಬ್ಬಂದಿ ಮೇಲೆ ನಿರ್ದಾಕ್ಷಣ್ಯ ಕ್ರಮ

03:54 PM Jun 05, 2017 | Team Udayavani |

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದ ಸಿಬ್ಬಂದಿ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Advertisement

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಡೆದ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಒಂದೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾದರೆ ಎಲ್ಲ ಆಸ್ಪತ್ರೆಗಳಲ್ಲೂ ಕೆಟ್ಟ ಪರಿಸ್ಥಿತಿ ಇದೆ ಎಂದು ಹೇಳುವುದು ಸರಿಯಲ್ಲ. ಎಲ್ಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯನ್ನು ಮನೆಗೆ ಕಳಿಸಲಾಗುವುದಿಲ್ಲ. 

ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತ ಓಡಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರಿಗಾಗಿ ಮಂಜೂರಾದ 1675 ಕೋಟಿ ರೂ. ಬರ ಪರಿಹಾರ ನಿಧಿಯನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಆಧಾರ ಲಿಂಕ್‌ ಆಗದಿದ್ದರಿಂದ ಕೆಲ ರೈತರ ಖಾತೆಗೆ ಹಣ ಜಮಾ ಆಗಿಲ್ಲ.

ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು. ಸಾಲ ಮನ್ನಾ ಮಾಡಲು ನಾನು ಸದಾ ಸಿದ್ಧ. ಕೇವಲ ಶೇ.22ರಷ್ಟು ರೈತರು ಮಾತ್ರ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಉಳಿದವರು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ವಾಣಿಜ್ಯ ಬ್ಯಾಂಕ್‌ ಗಳಿಂದ ಸಾಲ ಪಡೆದಿದ್ದು, ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ನಾವು ಕೂಡ ಸಾಲ ಮನ್ನಾ ಮಾಡುತ್ತೇವೆ ಎಂದರು. 

ಎಸ್‌ಸಿ./ಎಸ್‌ಟಿ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಹಣವನ್ನು ಸರ್ಕಾರದಿಂದ ಭರಿಸಿದರೆ ಯಾವುದೇ ತಪ್ಪಿಲ್ಲ. ವಿದ್ಯಾರ್ಥಿಗಳ ಬಸ್‌ ಪಾಸ್‌ನ ಶೇ.25ರಷ್ಟು ವಿದ್ಯಾರ್ಥಿಗಳು ಭರಿಸುವ ಹಣವನ್ನು ಸರ್ಕಾರದ ಟಿಸಿಎಸ್‌ ಸಿಪಿ ಅನುದಾನದಿಂದ ಭರಿಸಲಾಗುವುದು. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕೆಂದು ಸಂವಿಧಾನದಲ್ಲೇ ಹೇಳಲಾಗಿದೆ.

Advertisement

ಅವರಿಗೆ ಬಸ್‌ ಪಾಸ್‌ನ ಹಣವನ್ನು ಸರ್ಕಾರದಿಂದ ಭರಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯವಾಗುತ್ತದೆ ಎಂದು ಹೇಳುವುದು ಸೂಕ್ತವಲ್ಲ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವಂತೆ ಬಸ್‌ ಪಾಸ್‌ ಮೊತ್ತವನ್ನು ಭರಿಸಲಾಗುವುದು ಎಂದರು. ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸುವ ಕುರಿತು ಇನ್ನೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ  ಚರ್ಚಿಸಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ಮೋಡ ಬಿತ್ತನೆ ಕುರಿತು ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ಮೋಡ ಬಿತ್ತನೆ  ಕಾರ್ಯ ಆರಂಭಿಸಿ ರೈತರು ಬಿತ್ತನೆ ಮಾಡಲು ಅನುಕೂಲ ಕಲ್ಪಿಸಲಾಗುವುದು ಎಂದರು. ಸಚಿವರಾದ ಯು.ಟಿ.ಖಾದರ, ವಿನಯ ಕುಲಕರ್ಣಿ, ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next