Advertisement

ಕೋಮುವಾದಿ ಬಿಜೆಪಿಯಿಂದ ದೇಶದಲ್ಲಿ ಅಶಾಂತಿ

01:06 PM Mar 29, 2019 | Lakshmi GovindaRaju |

ತಿಪಟೂರು: ಕೋಮುವಾದಿ ಬಿಜೆಪಿ ಪಕ್ಷದಿಂದ ದೇಶದಲ್ಲಿ ಅಶಾಂತಿ, ಅಭದ್ರತೆ ಉಂಟಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಆಶ್ವಾಸನೆಗಳು, ಭರವಸೆಗಳಿಂದ ದೇಶದ ಜನತೆ ರೋಸಿಹೋಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಕೆಳಗಿಳಿಸಿ ಜಾತ್ಯತೀತ ಯುವನಾಯಕ ರಾಹುಲ್‌ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಜೆಡಿಎಸ್‌ ಮುಖಂಡ ಲೋಕೇಶ್ವರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರಿಗೆ ಸಲಹೆ ನೀಡಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಜೆಡಿಎಸ್‌-ಕಾಂಗ್ರೆಸ್‌ನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟಾಗುವ ಮೂಲಕ ದೇವೇಗೌಡರನ್ನು ಗೆಲ್ಲಿಸಲಿದ್ದೇವೆ. ಗೌಡರು ಸಂಸದರಾಗಿ ಆಯ್ಕೆಯಾದ ನಂತರ ಅವರ ಮೊಟ್ಟಮೊದಲ ಆದ್ಯತೆ ಜಿಲ್ಲೆಯ ನೀರಾವರಿಗೆ ಹಾಗೂ ಹೋಬಳಿಗೊಂದರಂತೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ತಿಪಟೂರನ್ನು ಜಿಲ್ಲೆಯನ್ನಾಗಿಸುವ ಬಗ್ಗೆ ದೇವೇಗೌಡರ ಬಳಿ ಚರ್ಚಿಸಲಾಗಿದೆ ಎಂದರು.

ಮೈತ್ರಿ ಸಮಾವೇಶ: ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಕಾರ್ಯಕರ್ತರ ಮೈತ್ರಿ ಸಮಾವೇಶ ಏ.1ರಂದು ಬೆಳಗ್ಗೆ 11ಗಂಟೆಗೆ ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್‌, ಸಣ್ಣಕೈಗಾರಿಕಾ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಸೇರಿದಂತೆ ರಾಜ್ಯದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಬಹಿರಂಗ ಸಭೆ: ಏ.4ರಂದು ನಗರದ ವಿನೋದ ಟಾಕೀಸ್‌ ಮುಂಭಾಗದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರು ಆಗಮಿಸಲಿದ್ದಾರೆ. ತುರುವೇಕೆರೆ ಸಭೆ ಮುಗಿಸಿಕೊಂಡು ಮಧ್ಯಾಹ್ನ 1ಗಂಟೆಗೆ ತಿಪಟೂರಿಗೆ ಭೇಟಿ ನೀಡಲಿದ್ದು, ಅವರೊಂದಿಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಸೇರಿದಂತೆ ರಾಜ್ಯ ಮುಖಂಡರು ಆಗಮಿಸಲಿದ್ದಾರೆ ಎಂದರು.

ಹೊನ್ನವಳ್ಳಿ ಭಾಗದವರು ಅಲ್ಲಿನ ಕೆರೆಗಳಿಗೆ ನೀರು ಬಿಡುವಲ್ಲಿ ಯಾವ ಪಕ್ಷದ ನಾಯಕರು ವಿಫ‌ಲರಾಗಿದ್ದಾರೊ ಅವರೊಟ್ಟಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಮತದಾನ ಬಹಿಷ್ಕರಿಸಬೇಡಿ. ದೇವೇಗೌಡರು ಗೆದ್ದ ನಂತರ ಹೊನ್ನವಳ್ಳಿ ಕೆರೆ ತುಂಬಿಸಲು ವಿಶೇಷ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಎಂದರು.

Advertisement

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಡೇನೂರು ಕಾಂತರಾಜು ಮಾತನಾಡಿ, ಬೂತ್‌ಮಟ್ಟದಲ್ಲಿ ಭೇಟಿ ನೀಡಿ ಅಭ್ಯರ್ಥಿ ಎಚ್‌.ಡಿ. ದೇವೇಗೌಡ ಪರ ಮತ ಯಾಚನೆ ಮಾಡಲಾಗುವುದು ಎಂದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಸೊಪ್ಪುಗಣೇಶ್‌ ಮಾತನಾಡಿ, ತುಮಕೂರು ಜಿಲ್ಲೆಗೆ ನೀರಾವರಿ ಸೌಲಭ್ಯ ದೊರಕಬೇಕಾದರೆ ಎಚ್‌.ಡಿ.ದೇವೇಗೌಡರು ಜಯಶೀಲರಾಗಬೇಕಿದ್ದು, ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾಗಿ ಮತಯಾಚಿಸಿ ಅವರ ಗೆಲುವಿಗೆ ಶ್ರಮಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಜಿ.ಎಸ್‌.ಶಿವಸ್ವಾಮಿ, ಮಾಜಿ ಅಧ್ಯಕ್ಷ ಎಂ.ಎನ್‌.ಸುರೇಶ್‌, ನಗರಸಭಾ ಮಾಜಿ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌, ಎಪಿಎಂಸಿ ಅಧ್ಯಕ್ಷ ಲಿಂಗರಾಜು, ನಗರಸಭಾ ಮಾಜಿ ಸದಸ್ಯರಾದ ರೇಖಾ, ನಿಜಗುಣ, ಕೆಪಿಸಿಸಿ ಸದಸ್ಯ ಯೋಗೀಶ್‌, ತಾಪಂ ಸದಸ್ಯ ನಾಗರಾಜು, ಜೆಡಿಎಸ್‌ ಅಲ್ಪಸಂಖ್ಯಾತ ಘಟಕದ ತಾ. ಅಧ್ಯಕ್ಷ ಫೈರೋಜ್‌, ಮುಖಂಡರಾದ ಗೋಪಿನಾಥ್‌, ಅಣ್ಣಯಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next