Advertisement

ಸ್ಪಂದಿಸದ ಅಧಿಕಾರಿಗಳು: ವಿದ್ಯಾರ್ಥಿಗಳಿಗೆ ಉಭಯಸಂಕಟ

11:48 AM May 29, 2017 | Team Udayavani |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಸ್ಕ್ಯಾನ್‌ ಪ್ರತಿಗೆ ಅರ್ಜಿ ಸಲ್ಲಿಸಿದ ಬಹುತೇಕ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ದ್ವಿತೀಯ ಪಿಯು ಸ್ಕ್ಯಾನ್‌ ಪ್ರತಿಯ ಸಮಸ್ಯೆ ಹೊತ್ತು ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಇಲಾಖೆಯ ಕೇಂದ್ರ ಕಚೇರಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಪಂದಿಸುವವರೂ ಗತಿ ಇಲ್ಲ. ದೂರವಾಣಿ ಕರೆಗಳನ್ನೂ ಸ್ವೀಕರಿಸುತ್ತಿಲ್ಲ.

Advertisement

ಇಲಾಖೆ ನೀಡಿರುವ ಫ‌ಲಿತಾಂಶದಲ್ಲಿ ತೃಪ್ತಿ ಕಾಣದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಫೋಟೋ ಪ್ರತಿ ಬಯಸಿ ಅರ್ಜಿ ಸಲ್ಲಿಸಿದವರಲ್ಲಿ ಅನೇಕರು ನಿರಾಸೆ ಅನುಭವಿಸಿದ್ದಾರೆ. ವಿದ್ಯಾರ್ಥಿಗಳು ಒಂದೊಂದು ವಿಷಯದ ಫೋಟೋ ಪ್ರತಿಗೆ 400 ರೂ. ಪ್ರತ್ಯೇಕವಾಗಿ ಪಾವತಿಸಿದರೂ, ನಿಗದಿತ ಸಮಯದಲ್ಲಿ ಫೋಟೋ ಪ್ರತಿ ತಲುಪುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ, ಯಾರಧ್ದೋ ಉತ್ತರ ಪ್ರತಿ ಇನ್ಯಾರಿಗೋ ಕಳುಹಿಸುತ್ತಿದ್ದಾರೆ ಎನ್ನುವುದು ಇನ್ನೊಂದೆಡೆ. ಇಷ್ಟು ಮಾತ್ರವಲ್ಲದೆ ಅಸ್ಪಷ್ಟ ಮಾಹಿತಿ, ಪುಟಗಳನ್ನು ಸರಿಯಾಗಿ ಸ್ಕ್ಯಾನ್‌ ಮಾಡದಿರುವುದು ಹೀಗೆ ಅನೇಕ ಲೋಪದೋಷ ಸ್ಕ್ಯಾನ್‌ ಪ್ರತಿಯಲ್ಲಿ ಕಂಡುಬರುತ್ತಿದೆ. ಆದರೆ, ಇಲಾಖೆಯ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

ಫೋಟೋ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇ-ಮೇಲ್‌ ಗೆ ಫೋಟೋ ಪ್ರತಿ ಕಳುಹಿಸಲಾಗುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಅಂಕದ ಪರಿಶೀಲನೆ ನಡೆಸಬೇಕು. ಆದರೆ, ಇಲಾಖೆಯ ಅಧಿಕಾರಿಗಳು ಬೇಜಾವಾಬ್ದಾರಿಯಿಂದಾಗಿ ಉತ್ತರ ಪತ್ರಿಕೆಯ ಕೆಲವು ಪ್ರತಿಯನ್ನು ಸ್ಕ್ಯಾನ್‌ ಮಾಡದೇ ಅರ್ಧಂಬರ್ಧ ಕಳುಹಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಖಾಸಗಿ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಫೋಟೋ ಪ್ರತಿಗೆ ಅರ್ಜಿ
ಸಲ್ಲಿಸಿದ್ದು, ಉತ್ತರ ಪತ್ರಿಕೆಯಲ್ಲಿ 24 ಪುಟ ಇರಬೇಕಿತ್ತು. ಆದರೆ, ಪಿಯು ಇಲಾಖೆಯ ಅಧಿಕಾರಿಗಳು ಉತ್ತರ ಪ್ರತಿಯ ಮಧ್ಯದ ಐದು ಪುಟ ಸ್ಕ್ಯಾನ್‌ ಮಾಡದೇ ಕೇವಲ 19 ಪುಟ ಮಾತ್ರ ಕಳುಹಿಸಿದ್ದಾರೆ. ಇದೊಂದು ನಿದರ್ಶನವಾದರೆ, ಹೀಗೆ ಇಲಾಖೆಯ ಅಧಿಕಾರಿಗಳು ನಾನಾ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಮಸ್ಯೆಗೆ ಸಿಲುಕಿಸಿದ್ದಾರೆ.

ಸಮಸ್ಯೆ ಹೊತ್ತು ಪಿಯು ಇಲಾಖೆಯ ಕಚೇರಿಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಯಾರೂ ಕೂಡ
ಸರಿಯಾಗಿ ಸ್ಪಂದಿಸುತ್ತಿಲ್ಲ. ಇ- ಮೇಲ್‌ ಮೂಲಕವೇ ದೂರು ನೀಡಬೇಕು. ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಕಾಮೆಡ್‌-ಕೆ ಫ‌ಲಿತಾಂಶ ಪ್ರಕಟ
ಬೆಂಗಳೂರು
: ರಾಜ್ಯದ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಹಂಚಿಕೆಗೆ ನಡೆದ ಕಾಮೆಡ್‌-ಕೆ ಪರೀಕ್ಷೆ ಫ‌ಲಿತಾಂಶ ಪ್ರಕಟವಾಗಿದ್ದು, ಮೊದಲ 10 ರ್‍ಯಾಂಕ್‌ ಕರ್ನಾಟಕದ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಮೇ 14ರಂದು ನಡೆದ ಕಾಮೆಡ್‌-ಕೆ ಪರೀಕ್ಷೆಯಲ್ಲಿ 19,601 ಕರ್ನಾಟಕದ ವಿದ್ಯಾರ್ಥಿಗಳು ಸೇರಿ 58,932 ವಿದ್ಯಾರ್ಥಿಗಳು ಹಾಜರಾಗಿದ್ದರು. 

ಮೊದಲ 2,000 ರ್‍ಯಾಂಕ್‌ ಪಡೆದವರಲ್ಲಿ 1,423 ವಿದ್ಯಾರ್ಥಿಗಳು ಶೇ.70ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 577 ವಿದ್ಯಾರ್ಥಿಗಳು ಶೇ.67ರಿಂದ ಶೇ.70ರಷ್ಟು ಅಂಕ ಪಡೆದಿದ್ದಾರೆ. 7,427 ವಿದ್ಯಾರ್ಥಿಗಳು ಶೇ. 50ರಿಂದ ಶೇ.60ರಷ್ಟು ಅಂಕ ಪಡೆದಿದ್ದು, ಮೊದಲ 100 ರ್‍ಯಾಂಕ್‌ ಗಳಲ್ಲಿ ಕರ್ನಾಟಕದ 70 ವಿದ್ಯಾರ್ಥಿಗಳು ಸೇರಿದ್ದಾರೆ. ಮೊದಲ 1,000 ರ್‍ಯಾಂಕ್‌ನಲ್ಲಿ ಕರ್ನಾಟಕದ 398 ವಿದ್ಯಾರ್ಥಿಗಳು ಇದ್ದಾರೆ.

ಕಾಮೆಡ್‌-ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಂಕ ಮತ್ತು ಹೆಚ್ಚಿನ ವಿವರಗಳಿಗಾಗಿ www.comedk.org ಸಂಪರ್ಕಿಸುವಂತೆ ಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್‌. ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರ್‍ಯಾಂಕ್‌ ವಿಜೇತರು: ಜೆ.ಪಿ. ನಗರದ ಮಾಯಾಂಕ್‌ ಬರನ್ವಾಲ… 180 ಅಂಕಗಳಿಗೆ 165 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಶಿರಸಿಯ ವಿಶ್ವಜಿತ್‌ ಪ್ರಕಾಶ್‌ ಹೆಗಡೆ 164 ಅಂಕ ಪಡೆದು ಎರಡನೇ ರ್‍ಯಾಂಕ್‌, ಬನ್ನೇರುಘಟ್ಟ ರಸ್ತೆ ಸೋಮೇಶ್ವರ ಲೇಔಟ್‌ನ ರುದ್ರಪಟ್ಟಣ ವಲ್ಲಭ್‌ ರಮಾಕಾಂತ್‌, ಸಹಕಾರ ನಗರದ ಸಿ.ವಿ. ಸಿದ್ಧಾರ್ಥ ಮತ್ತು ವಿಜಯ ಬ್ಯಾಂಕ್‌ ಲೇಔಟ್‌ನ ಎನ್‌. ಸಹನಾ ತಲಾ 163 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next