Advertisement

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

12:25 AM Feb 26, 2024 | Team Udayavani |

ಬಂಟ್ವಾಳ: ಕಾರ್ಯಕರ್ತರ ಪ್ರೀತಿ, ನೈತಿಕ ಬೆಂಬಲ ಶಕ್ತಿಯನ್ನು ನೀಡಿದ್ದು, ಸ್ಪರ್ಧೆಗೆ ಅವಕಾಶ ಕೇಳುವ ಆಗ್ರಹದಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಪರಿವಾರದ ತತ್ವ ಸಿದ್ಧಾಂತಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಒಳ ಒಪ್ಪಂದದ ರಾಜಕೀಯ ಮಾಡದೆ ಸರ್ವರ ನಂಬಿಕೆ, ಪ್ರೀತಿ, ವಿಶ್ವಾಸ ಉಳಿಸುವ ಕಾರ್ಯ ಮಾಡಲಿದ್ದೇನೆ ಎಂದು ಹಿಂದೂ ಮುಖಂಡ ಸತ್ಯಜಿತ್‌ ಸುರತ್ಕಲ್‌ ಹೇಳಿದರು.

Advertisement

ಅವರು ರವಿವಾರ ಬಿ.ಸಿ. ರೋಡು ಬಳಿಯ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ಟೀಮ್‌ ಸತ್ಯಜಿತ್‌ ಸುರತ್ಕಲ್‌ (ದ.ಕ. ಜಿಲ್ಲೆ) ವತಿಯಿಂದ ನಡೆದ ಜನಾಗ್ರಹ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ನಾನು ಇಂದು ಯಾವುದೇ ಸ್ಥಾನಕ್ಕೆ ಏರಿದ್ದರೂ ಅದು ಕಾರ್ಯಕರ್ತರು ಕೊಟ್ಟ ಜವಾಬ್ದಾರಿ. ಕಾರ್ಯಕರ್ತರ ಅಪೇಕ್ಷೆಗೆ ಮಣಿದು ಸ್ಪರ್ಧೆಯ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಈ ಹಿಂದೆ ಪ್ರತೀ ಬಾರಿ ಅವಕಾಶ ನಿರಾಕರಣೆ ಮಾಡಿದರೂ ನಮ್ಮಿಂದ ತಪ್ಪಾಗಿದೆ, ಕ್ಷಮಿಸು ಎಂಬ ಮಾತನ್ನು ಕೂಡ ಯಾರೂ ಹೇಳಿಲ್ಲ. ಕಳೆದ ಬಾರಿ ಅವರೇ ಪಕ್ಷದ ಕಚೇರಿಯಿಂದ ಕರೆ ಮಾಡಿ ಬಳಿಕ ನೀವು ಸಭೆಗೆ ಅಪೇಕ್ಷಿತರಲ್ಲ ಎಂದ ಕಾರಣ ಕಳೆದ 6 ವರ್ಷಗಳಿಂದ ದ.ಕ. ಜಿಲ್ಲಾ ಬಿಜೆಪಿ ಕಚೇರಿಗೆ ಹೋಗಿಲ್ಲ. ಕಳೆದ ಬಾರಿ ಸ್ವತಃ ಯಡಿಯೂರಪ್ಪನವರೇ ಮನೆಗೆ ಕರೆಸಿ ಅವಕಾಶ ನೀಡುತ್ತೇನೆ ಎಂದಿದ್ದರು. ಬಳಿಕ ಅವರು ಕೂಡ ಕರೆಸಿ ಮಾತಾಡಿಲ್ಲ. ಕೆಲವು ದಿನಗಳ ಹಿಂದೆ ಡಾ| ಪ್ರಭಾಕರ ಭಟ್‌ ಕರೆಯಿಸಿ ಬೇಡಿಕೆ ಏನು ಎಂದು ಕೇಳಿದಾಗಲೂ ಲೋಕಸಭಾ ಸೀಟಿನ ಕುರಿತು ಪ್ರಸ್ತಾವಿಸಿದ್ದೇನೆ ಎಂದರು.

ವಿವಿಧ ಜಿಲ್ಲೆಗಳ ಹಲವು ಸಂಘಟನೆಗಳ ಪ್ರಮುಖರು ಮಾತ ನಾಡಿದರು. ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಧನಂಜಯ ಕುಂದಾ ಪುರ ಸ್ವಾಗತಿಸಿದರು. ಯಶ್‌ಪಾಲ್‌ ಸಾಲ್ಯಾನ್‌ ವಂದಿಸಿದರು. ದಿನೇಶ್‌ ಸುವರ್ಣ ರಾಯಿ ನಿರ್ವಹಿಸಿದರು.

“ಟಿಕೆಟ್‌ ಸಿಗುವ ವಿಶ್ವಾಸ’
ಬಂಟ್ವಾಳ: ದ.ಕ. ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಟಿಕೆಟ್‌ ಘೋಷಣೆಯಾಗುವವರೆಗೆ ಬಲವಾಗಿ ಹೋರಾಟ ಮಾಡಲಿದ್ದು, ಟಿಕೆಟ್‌ ಸಿಗುವ ಪೂರ್ತಿ ವಿಶ್ವಾಸವಿದೆ. ಸ್ವತಂತ್ರ ಸ್ಪರ್ಧೆಯ ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ. ಅಕಸ್ಮಾತ್‌ ಅಂತಹ ಸ್ಥಿತಿ ಬಂದರೆ ಕಾರ್ಯಕರ್ತರ ಯೋಚನೆಯಂತೆ ನಾವೆಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹಿಂದೂ ಮುಖಂಡ ಸತ್ಯಜಿತ್‌ ಸುರತ್ಕಲ್‌ ಹೇಳಿದರು.

Advertisement

ಅವರು ಬಿ.ಸಿ. ರೋಡಿನಲ್ಲಿ ಜನಾಗ್ರಹ ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರು ನನ್ನ ಜತೆ ನಿಂತಿದ್ದಾರೆ ಎಂದರು.

ಜನಾಗ್ರಹ ಸಭೆ ಕಾರ್ಯಕರ್ತರು ಹಮ್ಮಿಕೊಂಡ ಕಾರ್ಯಕ್ರಮ. ಸಭೆಗೆ ನನ್ನನ್ನೂ ಆಹ್ವಾನಿಸಿ ಮನದಾಳದ ಮಾತನ್ನು ಹೇಳುವಂತೆ ವಿನಂತಿಸಿದ್ದರು. ಅದರಂತೆ ಎಲ್ಲವನ್ನೂ ಹೇಳಿದ್ದೇನೆ. ನಮ್ಮ ಜತೆ ಯಾರು ಸೇರಿಕೊಳ್ಳುವುದಿದ್ದರೂ ಬರಬಹುದು ಎಂದರು.

ಪಕ್ಷದ ಪ್ರಮುಖರು ಮಾತುಕತೆಗೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಮಾತುಕತೆಗೆ ಹೋಗಿಯೇ ಹೋಗುತ್ತೇನೆ. ಆದರೆ ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ಯಾವುದಕ್ಕೂ ಬಗ್ಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next