ಕಡೂರು: ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಎರಡು ವಿದ್ಯಾರ್ಥಿ ನಿಲಯಗಳ ಮುಂದೆ ಕಳೆದ 20 ದಿನಗಳಿಂದ ಶೌಚಾಲಯದ ನೀರು ಕೊಳಚೆ ನಿಂತು ದುರ್ವಾಸನೆ ಬೀರುತ್ತಿದೆ. ಆದರೆ, ಅಧಿಕಾರಿಗಳ ಮಧ್ಯೆ ಗೊಂದಲ ಉಂಟಾಗಿ ಚರಂಡಿ ದುರಸ್ತಿ ಮಾಡಿಸಲು ಸಾಧ್ಯವಾಗದ ಕಾರಣ ಹಾಸ್ಟೆಲ್ ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮೆಟ್ರಿಕ್ ನಂತರದ 2 ವಿದ್ಯಾರ್ಥಿ ನಿಲಯಗಳಿಂದ ಸುಮಾರು 250ಕ್ಕೂ ಹೆಚ್ಚಿನ ಮಕ್ಕಳು ನಿಲಯದಲ್ಲಿದ್ದಾರೆ. ಶೌಚಾಲಯದ ನೀರು ಮತ್ತು ಕಸ ಹೊರ ಹೋಗುವ ಪೈಪ್ ಲೈನ್ ಇಲ್ಲದ ಕಾರಣ ಮುಂದಿನ ರಸ್ತೆಗೆ ಬಿಡಲಾಗುತ್ತಿದೆ. ಇದರಿಂದ ಬಿಆರ್‌ಸಿ ಕಚೇರಿ, ಶಿಕ್ಷಕರ ಸಂಘ ಮತ್ತು ವಿದ್ಯಾರ್ಥಿ ನಿಲಯದೊಳಗೆ ತೆರಳಲು ಸಮಸ್ಯೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಬಿಸಿಎಂ ಅಧಿಕಾರಿ ದುರಸ್ತಿಗೆ ಮುಂದಾದಾಗ ಕ್ಷೇತ್ರ ಶಿಕ್ಷಾಣಾಧಿಕಾರಿ ನಮ್ಮ ಕಚೇರಿಯ ಮುಂದೆ, ಹಿಂದೆ ಪೈಪ್‌ಲೈನ್ ತೆಗೆದುಕೊಂಡು ಹೋಗಬೇಡಿ ಎಂದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಸಂಬಂಧಿಸಿದ ವಾರ್ಡ್ ಸದಸ್ಯರು ಕೆಲಸ ಮಾಡಬೇಡಿ. ಪುರಸಭೆಯಿಂದ ಮಾಡಿಸುತ್ತೇವೆ ಎಂದು ಹೇಳಿದ್ದರಿಂದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಇಲ್ಲಿಯವರೆಗೂ ಅನೇಕ ಬಾರಿ ಮನವಿ ಮಾಡಿದರೂ ಯಾರೊಬ್ಬರು ಸಹ ಸ್ಪಂದಿಸುತ್ತಿಲ್ಲ ಎಂದು ಬಿಸಿಎಂ ಅಧಿಕಾರಿ ನಾಗವಲ್ಲಿ ತಿಳಿಸಿದರು. ಅಲ್ಲದೇ, ಒಂದೆರಡು ದಿನಗಳು ಕಳೆದರೆ ಇಲಾಖೆಯಿಂದಲೇ ಗುಂಡಿಯನ್ನು ಮುಚ್ಚಿಸುವುದಾಗಿ ನಾಗವಲ್ಲಿ ಹೇಳಿದರು. ಕಳೆದ 20 ದಿನಗಳ ಹಿಂದೆ ದುರಸ್ತಿಗೆ ಗುಂಡಿ ತೆಗೆಯಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಮತ್ತೂಂದು ವಿದ್ಯಾರ್ಥಿ ನಿಲಯ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಬಾಲಕಿಯರು ಪ್ರತಿ ದಿನ ಚರಂಡಿ ದಾಟುವುದೇ ಕಷ್ಟವಾಗಿದೆ. ಗ್ಯಾಸ್ ಸಿಲಿಂಡರ್ ತರುವುದು, ತರಕಾರಿ, ರೇಷನ್ ಒಳಗೆ ತರುವುದು ಸಮಸ್ಯೆಯಾಗಿದೆ. ನೀರು ದುರ್ವಾಸನೆ ಬೀರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಮಸ್ಯೆಯಾಗಿದೆ ಎಂಬ ಅಳಲನ್ನು ಬಾಲಕಿಯರು ತೋಡಿಕೊಂಡರು.
ಬಿಆರ್‌ಸಿ ಕಚೇರಿಗೆ ತೆರಳುವ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಶಿಕ್ಷಕ ವೃಂದ ಅಧಿಕಾರಿಗಳಿಗೆ ಮನವಿ ಮಾಡಿದೆ. ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಬಾಲಕಿಯರಿಗೆ ನಿತ್ಯ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸುವವರೇ ಇಲ್ಲವೇ ಎಂಬ ಪ್ರಶ್ನೆ ಪೋಷಕರಿಂದ ಕೇಳಿ ಬರುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಇಲಾಖೆಯ ಮುಖ್ಯಸ್ಥರು ಗುಂಡಿ ಮುಚ್ಚಿಸಿ ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಲಿ ಎಂಬ ಮಾತು ಕೇಳಿ ಬರುತ್ತಿದೆ.
-ಏ.ಜೆ.ಪ್ರಕಾಶ್ ಮೂರ್ತಿ