Advertisement

ಮಾನ್ಯತೆ ಇಲ್ಲದ ಕಾಲೇಜುಗಳಿಗೆ ಸೌಲಭ್ಯವಿಲ್ಲ

09:31 PM Apr 23, 2019 | Lakshmi GovindaRaju |

ಮೈಸೂರು: ನ್ಯಾಕ್‌ ಮಾನ್ಯತೆ ಇಲ್ಲದ ಕಾಲೇಜುಗಳಿಗೆ ಯುಜಿಸಿಯಿಂದ ಸಿಗುವ ಸೌಲಭ್ಯ ಕಡಿತವಾಗುತ್ತದೆ ಎಂದು ಮೈಸೂರು ವಲಯ ಪ್ರದೇಶಿಕ ಕಚೇರಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಆರ್‌. ಮುಗೇಶ್‌ ತಿಳಿಸಿದರು.

Advertisement

ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಮೈಸೂರು ವಿಭಾಗ ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ಜಂಟಿ ನಿರ್ದೇಶಕರ ಕಚೇರಿ ವಲಯದ ಸರ್ಕಾರಿ ಕಾಲೇಜು ಪ್ರಾಂಶುಪಾಲರು ಮತ್ತು ಐಕ್ಯೂಎಸಿ/ನ್ಯಾಕ್‌ ಸಂಯೋಜಕರ ನ್ಯಾಕ್‌ ಸಂಬಂಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ವಲಯಕ್ಕೆ 75 ಕಾಲೇಜುಗಳು ಒಳಪಟ್ಟಿದ್ದು, ಅವುಗಳಲ್ಲಿ 53 ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದಿದ್ದರೆ, ವಿವಿಧ ಕಾರಣಗಳಿಗೆ 22 ಕಾಲೇಜುಗಳಿಗೆ ಇನ್ನೂ ಮಾನ್ಯತೆ ದೊರೆತಿಲ್ಲ. ಆದರೆ, ಪ್ರತಿ ಕಾಲೇಜು ನ್ಯಾಕ್‌ ಮಾನ್ಯತೆಗೆ ಒಳಪಡುವುದು ಕಡ್ಡಾಯ.

ಈ 22 ಕಾಲೇಜುಗಳ ಪ್ರಾಂಶುಪಾಲರು, ನ್ಯಾಕ್‌ ಸಂಯೋಜಕರು ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಇವರು ನ್ಯಾಕ್‌ ಮಾನ್ಯತೆಗೆ ಒಳಪಡಲು ಹೆದರುತ್ತಿದ್ದು, ಯುಜಿಸಿಯಿಂದ ಹೆಚ್ಚಿನ ಸೌಲಭ್ಯ ಪಡೆಯಲು ನ್ಯಾಕ್‌ ಮಾನ್ಯತೆ ಮುಖ್ಯ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ ಎಂದು ಹೇಳಿದರು.

ಹಣ ವ್ಯರ್ಥ: ಬಹಳಷ್ಟು ಕಾಲೇಜುಗಳಲ್ಲಿ ನೆಪಮಾತ್ರಕ್ಕೆ ಕಾರ್ಯಕ್ರಮ ಮಾಡಿ ಐಕ್ಯೂಎಸಿ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ. ಹಣವನ್ನು ಖರ್ಚು ಮಾಡಲು ಕಾರ್ಯಕ್ರಮ ಮಾಡಬಾರದು. ವಿದ್ಯಾರ್ಥಿಗಳಿಗೆ ಅದರ ಪ್ರಯೋಜನವಾಗಬೇಕು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯಿಂದ ಸುಲಭವಾಗಿ ನ್ಯಾಕ್‌ ಪ್ರಕ್ರಿಯೆಗೆ ಒಳಪಡಲು ಸಾಧ್ಯವಾಗುತ್ತದೆ ಎಂದು ನುಡಿದರು.

Advertisement

ಗುಣಮಟ್ಟದ ಶಿಕ್ಷಣ: ಗುಣಮಟ್ಟದ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಮುಖ್ಯ. ಕಾಲೇಜಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ನ್ಯಾಕ್‌ ಮಾನ್ಯತೆಗೆ ಒಳಪಡಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಎಸ್‌ಕ್ಯೂಎಸಿ ಸಂಚಾಲಕ ಡಾ.ಸಿದ್ಧಲಿಂಗಸ್ವಾಮಿ ಮಾತನಾಡಿ, 6ನೇ ವೇತನ ಆಯೋಗದಿಂದ ಎಲ್ಲರಿಗೂ ಖುಷಿ ಆಗಿರಬಹುದು. ಆದರೆ, ಅದರಲ್ಲೂ ಒಂದು ವಿಘ್ನ ಇದೆ. ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ. ನ್ಯಾಕ್‌ ಮಾನ್ಯತೆ ಪಡೆಯದ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸುವುದೂ ಕಷ್ಟ ಎಂದು ಎಚ್ಚರಿಸಿದರು.

ಉದ್ಧಟತನ: ಗುಣಮಟ್ಟದ ಶಿಕ್ಷಣ ದೃಷ್ಟಿಯಿಂದ ಈಗಲೂ ಶೇ.90 ರಷ್ಟು ಕೆಳಸ್ತರದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಸೇರುತ್ತಾರೆ. ನಮ್ಮ ಉದ್ಧಟತನದಿಂದ ಯುಜಿಸಿ ಅನುದಾನ ಪಡೆಯದಿದ್ದರೆ ಆ ವಿದ್ಯಾರ್ಥಿಗಳಿಗೆ ಬರುವ ಸೌಲಭ್ಯ ತಪ್ಪಿಸಿದಂತಾಗುತ್ತದೆ.

ಅವರನ್ನು ಸೌಲಭ್ಯದಿಂದ ವಂಚಿಸುವುದು ಸರಿಯಲ್ಲ. ಹೀಗಾಗಿ, ಎಲ್ಲರೂ ಕಾರ್ಯೋನ್ಮುಖರಾಗಿ ಕೆಲಸ ಮಾಡಬೇಕು. ಮುಂದಿನ ಶೈಕ್ಷಣಿಕ ಸಂದರ್ಭದಲ್ಲಿ ನ್ಯಾಕ್‌ ಮಾನ್ಯತೆ ಪಡೆಯಲು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಐಕ್ಯೂಎಸಿ ಸಂಯೋಜಕಿ ಜಿ.ಸವಿತಾ, ಕಾಲೇಜು ಪ್ರಾಂಶುಪಾಲ ಪ್ರೊ.ಎಸ್‌.ಬಿ.ಶಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next