Advertisement

ಕೋಲಾಹಲ ಸೃಷ್ಟಿಸಿದ “ಅನರ್ಹತೆ ವೈರಸ್‌’!

11:27 PM Feb 19, 2020 | Team Udayavani |

ವಿಧಾನ ಪರಿಷತ್ತು: ಸದನದಲ್ಲಿ ಬುಧವಾರ “ಅನರ್ಹತೆ ವೈರಸ್‌’ ಕುರಿತ ಚರ್ಚೆ ಸಮಚಿತ್ತರಾಗಿ ಕುಳಿತಿದ್ದ ನೂತನ ಸಚಿವರನ್ನೂ ಕೆಣಕಿತು. ಅದು ತಾರಕಕ್ಕೇರಿದಾಗ ಗದ್ದಲ ಉಂಟಾಯಿತು. ಆರ್‌.ಬಿ.ತಿಮ್ಮಾಪುರ, ಗೋಲಿಬಾರ್‌ ಮಾಡಿದ ಸರ್ಕಾರ ತುಂಬಾ ದಿನ ಉಳಿಯುವುದಿಲ್ಲ. ಬೇಕಿದ್ದರೆ ಇತಿಹಾಸದ ಪುಟ ತಿರುವಿ ನೋಡಬಹುದು ಎಂದು ವಾಗ್ವಾದಕ್ಕೆ ಪೀಠಿಕೆ ಇಟ್ಟರು. ಇದಕ್ಕೆ ದನಿಗೂಡಿಸಿದ ಐವನ್‌ ಡಿಸೋಜ, “ಈಗಾಗಲೇ ಸರ್ಕಾರ ಬೀಳಿಸಲು ಮೀಟಿಂಗ್‌ಗಳು ನಡೆಯುತ್ತಿವೆ. ಅದರಲ್ಲಿ ಹಳಬರನ್ನು ಸೇರಿಸಿಲ್ಲ. ಹೊಸಬರು ಮಾತ್ರ ಇದ್ದಾರೆ’ ಎಂದರು.

Advertisement

ಆಗ ಸದಸ್ಯ ನಾರಾಯಣಸ್ವಾಮಿ, “ಇದು ಅನರ್ಹರ ಸರ್ಕಾರ. ಹಾಗಾಗಿ, ಬಹಳ ದಿನ ಉಳಿಯುವುದಿಲ್ಲ’ ಎಂದು ಟೀಕಿಸಿದರು. ಸದಸ್ಯ ಪಿ.ಆರ್‌.ರಮೇಶ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಅನರ್ಹರು ವೈರಸ್‌. ಅದರಲ್ಲೂ ಕೊರೊನಾ ವೈರಸ್‌ ಇದ್ದಂತೆ’ ಎಂದು ಚುಚ್ಚಿದರು. ಇದು ಸದನದಲ್ಲಿ ಕಿಡಿ ಹೊತ್ತಿಸಿತು. “ನಾವು ಅನರ್ಹರಲ್ಲ. ಹೈಕೋರ್ಟ್‌ ಕೂಡ ಇದನ್ನು ಸ್ಪಷ್ಟಪಡಿಸಿದ್ದು, ಜನಾದೇಶದಿಂದ ಗೆದ್ದು ಬಂದಿದ್ದೇವೆ’ ಎಂದು ಸಚಿವ ಬಿ.ಸಿ.ಪಾಟೀಲ್‌ ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ,

“ಅನರ್ಹರನ್ನು ಗಂಗಾನದಿ ನೀರಿನಲ್ಲಿ ಅದ್ದಿ ತೆಗೆದರೂ ಪವಿತ್ರರಾಗುವುದಿಲ್ಲ’ ಎಂದು ಮೂದಲಿಸಿದರು. ಕೆಂಡಾಮಂಡಲರಾದ ಸಚಿವ ಎಸ್‌.ಟಿ.ಸೋಮಶೇಖರ್‌, “ಬಾಯಿಗೆ ಬಂದಂತೆ ಮಾತನಾಡಬೇಡಿ. ವೈರಸ್‌ ಇರುವುದು ಅಲ್ಲಿ (ಪ್ರತಿಪಕ್ಷದಲ್ಲಿ). ಅಷ್ಟಕ್ಕೂ ನಮ್ಮ ಕತೆ ನಿಮಗ್ಯಾಕೆ? ತಾಕತ್ತಿದ್ದರೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ’ ಎಂದು ಸವಾಲು ಹಾಕಿದರು. ಬಿ.ಸಿ.ಪಾಟೀಲ್‌, “ವಾಸ್ತವವಾಗಿ ಕೊರೊನಾ ವೈರಸ್‌ ಇರುವುದು ಅಲ್ಲಿ. ಹಾಗಾಗಿಯೇ ಅದನ್ನು ಬಿಟ್ಟು ಬಂದೆವು. ಎಲ್ಲಕ್ಕಿಂತ ದೊಡ್ಡದಾದ ಜನಾದೇಶ ಇರುವುದರಿಂದಲೇ ನಾವು ಇಲ್ಲಿದ್ದೇವೆ (ಅಧಿಕಾರದಲ್ಲಿ). ನೀವು ಅಲ್ಲಿದ್ದೀರಿ (ಪ್ರತಿಪಕ್ಷದಲ್ಲಿ) ಎಂಬುದು ನೆನಪಿರಲಿ’ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next