ಬೆಂಗಳೂರು: ಪಕ್ಷದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹರಾಗಿರುವ 17 ಶಾಸಕರು, ಈಗ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಳಂಬವಾಗುತ್ತಿರುವುದ ರಿಂದ ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಶಾಸಕರು ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿ ಬೆಂಬಲಿಸಿ, ಬಿಜೆಪಿ ಸರ್ಕಾರ ಬರಲು ಕಾರಣೀಕರ್ತ ರಾಗಿದ್ದರು. ತಮಗೆ ಬೆಂಬಲ ನೀಡಿದರೆ ಸರ್ಕಾರ ಬಂದ ತಕ್ಷಣ ಕೋರ್ಟ್ ಪ್ರಕರಣ ಇತ್ಯರ್ಥಗೊಳ್ಳುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಬಿಜೆಪಿ ನಾಯಕರು, ಈಗ ಅನರ್ಹ ಶಾಸಕರ ಬೇಡಿಕೆಗೆ ಸರಿಯಾಗಿ ಸ್ಪಂದಿಸದಿರುವುದು ಬಿಜೆಪಿ ನಾಯಕರ ಮೇಲೆ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರವೂ ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಪ್ರಕರಣದ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿರು ವುದರಿಂದ ರಮೇಶ್ ಜಾರಕಿಹೊಳಿ ನೇತೃತ್ವದ ಅನರ್ಹ ಶಾಸಕರು, ತಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಗರಂ ಆಗಿದ್ದಾರೆಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಕೋರ್ಟ್‌ನಲ್ಲಿ ಪ್ರಕರಣ ಮುಂದೂಡುತ್ತಿದ್ದಂತೆ ಅನರ್ಹ ಶಾಸಕರು, ನಿಮ್ಮನ್ನು ನಂಬಿ ನಾವು ಹಾಳಾಗಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿ ಎಂದರೂ ಭೇಟಿ ಮಾಡಿಸುತ್ತಿಲ್ಲ. ನಮ್ಮ ರಾಜೀನಾಮೆ ಕೊಡಿಸುವಾಗ ಇದ್ದ ಪರಿಸ್ಥಿತಿ ಈಗಿಲ್ಲ. ಅವರನ್ನು ಏಕೆ ಭೇಟಿ ಮಾಡಿಸುತ್ತಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ನಂತರ, ಸಿ.ಪಿ.ಯೋಗೇಶ್ವರ್ ಅವರನ್ನು ಸಮಾಧಾನ ಪಡಿಸಿ ಶೀಘ್ರವೇ ಅಮಿತ್ ಶಾರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಅಶೋಕ್ ಮೇಲೂ ಒತ್ತಡ: ಇದಕ್ಕೂ ಮೊದಲು ಸೋಮವಾರ ಕೆಲವು ಅನರ್ಹ ಶಾಸಕರು ಕಂದಾಯ ಸಚಿವ ಆರ್.ಅಶೋಕ್ ಅವರನ್ನೂ ಭೇಟಿ ಮಾಡಿ, ಬಿಜೆಪಿಯವರು ತಮಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ನಾವು ರಾಜೀನಾಮೆ ನೀಡಿದ್ದರಿಂದ ನೀವು ಸಚಿವರಾಗಿದ್ದೀರಿ. ಆದರೆ, ನಮ್ಮನ್ನು ಕರೆದುಕೊಂಡು ಹೋಗುವಾಗ ನೀವು ನೀಡಿರುವ ಯಾವ ಭರವಸೆಗಳೂ ಈಡೇರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಅನರ್ಹಗೊಂಡಿರುವ ಶಾಸಕರ ಜತೆ ನಾವಿದ್ದೇವೆ. ಅವರ ಭಾವನೆಗಳಿಗೆ ನಮ್ಮ ಸಹಮತ ಇದೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ನಾವು ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿಲ್ಲ.
-ಆರ್. ಅಶೋಕ್, ಸಚಿವ
ಕೋರ್ಟ್ ವಿಚಾರದಲ್ಲಿ ನಾವೇನೂ ಹೇಳಲು ಆಗುವುದಿಲ್ಲ. ನಾವು ಅಮಿತ್ ಶಾ ಭೇಟಿಗೆ ಅವಕಾಶ ಕೇಳಿಲ್ಲ. ಪ್ರಕರಣ ಇತ್ಯರ್ಥವಾಗದಿದ್ದರೂ, ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶವಿದೆ. ನಮಗೆ ಯಾವುದೇ ಭಯ ಇಲ್ಲ.
-ಬಿ.ಸಿ.ಪಾಟೀಲ್, ಅನರ್ಹ ಶಾಸಕ
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಿದೆ. ಕೋರ್ಟ್ ವಿಚಾರ ಯಾವಾಗ ಮುಗಿಯುತ್ತದೆ ಎಂದು ಹೇಗೆ ಹೇಳುವುದು?. ಇವತ್ತು ವಿಚಾರಣೆಗೆ ಬಂದಿದ್ದು, ಸ್ವಲ್ಪ ಸಮಾಧಾನ ತಂದಿದೆ. ಜಡ್ಜ್ ಹಿಂದೆ ಸರಿದಿರುವುದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಇತ್ಯರ್ಥವಾಗುವ ಆಶಾಭಾವನೆ ಹೊಂದಿದ್ದೇವೆ.
-ಪ್ರತಾಪ್‌ಗೌಡ ಪಾಟೀಲ್, ಅನರ್ಹ ಶಾಸಕ