Advertisement

ಅನರ್ಹ ಶಾಸಕ ಸುಧಾಕರ್‌ ಹೈಟೆಕ್‌ ಬ್ರೋಕರ್‌

09:11 PM Aug 10, 2019 | Team Udayavani |

ಗೌರಿಬಿದನೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇಂತಹ ಹೈಟೆಕ್‌ ಬ್ರೋಕರ್‌ ಅನರ್ಹ ಶಾಸಕರಿಂದ ನಾನು ನೀತಿಪಾಠ ಕಲಿಯಬೇಕಾಗಿಲ್ಲ ಎಂದು ಶಾಸಕ ಎನ್‌.ಹೆಚ್‌. ಶಿವಶಂಕರ್‌ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮತಾನಾಡಿದ ಅವರು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 150 ಜೆಲ್ಲಿ ಕ್ರಷರ್‌ ನಡೆಯುತ್ತಿದ್ದು, ಪ್ರತಿ ಕ್ರಷರ್‌ಗೆ ತಿಂಗಳಿಗೆ 2 ಲಕ್ಷ ವಸೂಲಿ ಮಾಡುತ್ತಿದ್ದಾರೆ. ಈ ದಂಧೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಪೊಲೀಸರು ಶಾಮೀಲಾಗಿದ್ದಾರೆ. ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷರಾದ ಇವರ ಸ್ವಗ್ರಾಮದಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಇದರ ಬಗ್ಗೆ ಪರಿವೇ ಇಲ್ಲದ ವರು ಬೇರೆ ತಾಲೂಕಿನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇವರಿಗಿಲ್ಲ ಎಂದರು.

ನಿಮ್ಮಿಂದ ಎಷ್ಟು ಕಾರ್ಖಾನೆ ಪ್ರಾರಂಭಗೊಂಡಿವೆ?: ಗೌರಿಬಿದನೂರು ತಾಲೂಕಿನಲ್ಲಿ ಸುಮಾರು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾರ್ಮೆಂಟ್ಸ್‌ ಕಾರ್ಖಾನೆ ಪ್ರಾರಂಭವಾಗಿದ್ದು, 10ಸಾವಿರ ಸ್ಥಳೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಿಮ್ಮಿಂದ ಎಷ್ಟು ಕಾರ್ಖಾನೆಗಳು ಪ್ರಾರಂಭಗೊಂಡಿವೆ ? ಎಷ್ಟು ಜನ ಸ್ಥಳೀಯರು ಕೆಲಸ ಮಾಡುತ್ತಿದ್ದಾರೆ ಎಂದು ಸುಧಾಕರ್‌ ಅವರನ್ನು ಪ್ರಶ್ನಿಸಿದರು.

ಗುತ್ತಿಗೆದಾರರು ಬೀದಿಪಾಲು: ನಿಮ್ಮ ಫೈವ್‌ ಸ್ವಾರ್‌ ಹೋಟೆಲ್‌ ಬ್ರೋಕರ್‌ ಕಸುಬಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಗುತ್ತಿಗೆ ನೀವೇ ನಿರ್ವಹಿಸುತ್ತಿದ್ದೀರಿ. ಇದರಿಂದ 200ಕ್ಕೂ ಹೆಚ್ಚು ಗುತ್ತಿಗೆದಾರರು ಬೀದಿಪಾಲಾಗಿದ್ದಾರೆ ಎಂದು ಆರೋಪಿಸಿದರು.

ಡೀಸಿ, ಜಿಪಂ ಸಿಇಒ ವರ್ಗಾವಣೆ: ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಹಾಗೂ ಜಿಪಂ ಸಿಇಒ ಗುರುದತ್‌ ಹೆಗಡೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂತಹ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯುಡಿಯೂರಪ್ಪ ಅವರಲ್ಲಿ ಒತ್ತಡ ತಂದು ವರ್ಗಾವಣೆ ಮಾಡಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದೀರಿ ಎಂದು ದೂರಿದರು. ಮುಂಬರುವ ಉಪಚುಣಾವಣೆಯಲ್ಲಿ ಮತದಾರರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ದುಡ್ಡಿನಿಂದ ಗೆಲ್ಲುತ್ತೇನೆ ಎಂಬ ಅಹಂನಿಂದ ಬೀಗುತ್ತಿರುವ ಸುಧಾಕರ್‌ಗೆ ತಕ್ಕಪಾಠ ಕಲಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

Advertisement

ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಮಾತನಾಡಿ, ಸುಧಾಕರ್‌ ಅವರ ತಂದೆ ಕೇಶವರೆಡ್ಡಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಎಷ್ಟು ಆಟವಾಡಿ ರಾಜೀನಾಮೆ ಕೊಟ್ಟಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ನಾನು ರಾಜೀನಾಮೆ ನೀಡುವಾಗ ನಿಗದಿತ ನಮೂನೆಯಲ್ಲಿಯೇ ರಾಜೀನಾಮೆ ಪತ್ರವನ್ನು ಪಂಚಾಯಿತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಿದ್ದೆ ಎಂದರು.ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 38 ಸಾವಿರ ಮತ ಬಹುಮತ ತಂದುಕೊಟ್ಟ ನಿಮಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಹಾಗೆ ಬ್ಲಾಕ್‌ವೆುಲ್‌ ಮಾಡಿ ಅಧಿಕಾರ ಪಡೆಯಲು ನಮಗೆ ಬರುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಜಿಪಂ ಸದಸ್ಯ ನರಸಿಂಹಮೂರ್ತಿ, ಅರುಂಧತಿ, ಸರಸ್ವತಿ, ಅಶ್ವತ್ಥನಾರಾಯಣ ಗೌಡ, ಟಿಎಪಿಸಿಎಂ ಅಧ್ಯಕ್ಷ ಮರಳೂರು ಹನುಮಂತರೆಡ್ಡಿ, ಆರ್‌ಎಂಸಿ ಅಧ್ಯಕ್ಷ ಶಿವಶಂಕರ್‌ರೆಡ್ಡಿ, ಕೋಚಿಮುಲ್‌ ಮಾಜಿ ಅಧ್ಯಕ್ಷ ಜೆ.ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ಖಲೀಮ್‌, ಮುಖಂಡರಾದ ಎಚ್‌.ಎನ್‌.ಪ್ರಕಾಶ್‌ರೆಡ್ಡಿ, ಡಿ.ಎಸ್‌.ಬಾಬು, ರಾಘವೇಂದ್ರ ಹನುಮಾನ್‌, ರೇಣುಕಮ್ಮ, ನಾನಾ, ವೇದಲವೇಣಿ ವೇಣು, ವೆಂಕಟರಮಣ ಭಾಗವಹಿಸಿದ್ದರು.

ಎಸಿಸಿ ಕಾರ್ಖಾನೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಕಾನೂನು ಪ್ರಕಾರ ವ್ಯವಹಾರ ನಡೆಯುತ್ತಿದೆ. ಎಸಿಸಿ ಕಾರ್ಖಾನೆಗೂ ನನಗೂ ಅಕ್ರಮ ಅವ್ಯವಹಾರ, ಒಳ ಒಪ್ಪಂದವಾಗಲಿ ಆಗಿಲ್ಲ. ಮಗನ ವ್ಯಾಪಾರಕ್ಕೆ ಬ್ಯಾಂಕ್‌ನಲ್ಲಿ 15 ಕೋಟಿ ರೂ. ಸಾಲ ತೆಗೆದುಕೊಂಡು ಚೀಲ ತಯಾರಿಸಿ ಸರಬರಾಜು ಮಾಡುವ ಕಾರ್ಖಾನೆ ಮಾಡಲಾಗಿದೆ. ವ್ಯಾಪಾರ ಮಾಡುವುದು ತಪ್ಪೇ ?
-ಎನ್‌.ಹೆಚ್‌.ಶಿವಶಂಕರ್‌ರೆಡ್ಡಿ, ಗೌರಿಬಿದನೂರು ಕ್ಷೇತ್ರದ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next