ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 1.50 ಕೋಟಿ ಜನರು ಕನ್ನಡದ ಹಾಡಿಗೆ ಧ್ವನಿಯಾಗಿದ್ದಾರೆ.
50 ದೇಶ, 29 ರಾಜ್ಯಗಳು ಸೇರಿದಂತೆ ವಿಶ್ವದ ಉದ್ದಗಲದಿಂದ ಸ್ಪಂದನೆ ವ್ಯಕ್ತ ವಾಗಿದ್ದು ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 50 ಸಾವಿರ ನಾಗರಿಕರು, ವಿದ್ಯಾರ್ಥಿಗಳು, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸುನಿಲ್ ಕುಮಾರ್, ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ನೆಲ, ಜಲ, ಆಕಾಶದಲ್ಲೂ ಗೀತ ಗಾಯನ ನಡೆದಿದ್ದು, ಬೆಂಗಳೂರಿನಿಂದ ಗ್ವಾಲಿಯರ್ ಗೆ ತೆರಳುವ ಸ್ಪೈಸ್ ಜೆಟ್ ವಿಮಾನದಲ್ಲಿ, ಮಲ್ಪೆ ಬೀಚ್, ಕೇಂದ್ರ ಕಾರಾಗೃಹಗಳು, ಮೈಸೂರು ಅರಮನೆ ಮುಂಭಾಗ ಸೇರಿದಂತೆ ಹತ್ತು ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.
ಆರು ಗೀತೆ: ಅಕ್ಟೋಬರ್ 28ರಂದು ಬೆಳಗ್ಗೆ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ“, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ “ , ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ“ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು“ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗಿತ್ತು. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗವಹಿಸಿದ್ದರು.
ಬಾರದ ಚಿತ್ರರಂಗ: ಇಷ್ಟೆಲ್ಲ ಅದ್ದೂರಿಯಾಗಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆದರೂ ಕನ್ನಡ ಚಲನಚಿತ್ರ ರಂಗ ಮಾತ್ರ ಇಂದೂ ಭಾಗಿಯಾಗಿರಲಿಲ್ಲ. ಈ ಬಗ್ಗೆ ಸರ್ಕಾರದಿಂದ ವ್ಯಾಪಕ ಬೇಸರ ವ್ಯಕ್ತವಾಗಿದೆ.