Advertisement

ಸಿಗದ ವೇತನ; ಪ್ರತಿಭಟನೆ

06:23 PM Apr 29, 2022 | Team Udayavani |

ಕಾಗವಾಡ: ಕಾಗವಾಡ ಪಟ್ಟಣ ಪಂಚಾಯಿತಿಯ ದಿನಗೂಲಿ ಕಾರ್ಮಿಕರಿಗೆ ಕಳೆದ 16 ತಿಂಗಳಿಂದ ವೇತನ ನೀಡಿಲ್ಲ ಎಂದು ನೌಕರರು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡು ಪ್ರತಿಭಟಿಸಿದರು. ತಹಶೀಲ್ದಾರ್‌ ರಾಜೇಶ್‌ ಬುರ್ಲಿ ಅವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸದ್ಯ 3 ತಿಂಗಳ ಸಂಬಳ ನೀಡುವ ಭರವಸೆ ನೀಡಿ ಪ್ರತಿಭಟನಾ ನಿರತ ಕಾರ್ಮಿಕರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಸಫಲರಾದರು.

Advertisement

ಕಾಗವಾಡ ಪಟ್ಟಣ ಪಂಚಾಯಿತಿ ಕಚೇರಿ ಎದುರು ಗುರುವಾರ ಬೆಳಗ್ಗೆ ಗಟರ್‌ ಮನ್‌, ವಾಟರ್‌ಮನ್‌, ಸ್ವಚ್ಛತಾಗಾರ, ಪಂಪ್‌ ಆಪರೇಟರ್‌, ಡಾಟಾಎಂಟ್ರಿ
ಆಪರೇಟರ್‌ ಮೊದಲಾದ 11 ದಿನಗೂಲಿ ನೌಕರರು ಹಾಗೂ 8 ಜನ ಪೂರ್ಣಾವಧಿ ಕಾರ್ಮಿಕರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಕಳೆದ 16 ತಿಂಗಳುಗಳಿಂದ ನಮಗೆ ವೇತನ ನೀಡಿಲ್ಲ. ನಮ್ಮ ಸಂಸಾರ ಬೀದಿಗೆ ಬಂದಿದ್ದು ಗ್ರಾಮದಲ್ಲಿ ಸಾಲ ಸೋಲ ಮಾಡಿ ಬದುಕುತ್ತಿದ್ದೇವೆ. ಇಷ್ಟೇ ಅಲ್ಲದೆ ನಾವು ದಿನನಿತ್ಯ ಸೇವೆ ನೀಡಿದರೂ ಪಂಚಾಯತಿಯಲ್ಲಿ ಕಾರ್ಮಿಕರೆಂದು ನಮ್ಮನ್ನು ಗುರುತಿಸಿಲ್ಲ. ಇದು ಅನ್ಯಾಯ ಎಂದು ತಹಶೀಲ್ದಾರ್‌ ರಾಜೇಶ್‌ ಬುರ್ಲಿ
ಎದುರು ತಮ್ಮ ಅಳಲು ತೋಡಿಕೊಂಡರು.

ಕಾಗವಾಡ ಪಿಕೆಪಿಎಸ್‌ ಅಧ್ಯಕ್ಷ ಜ್ಯೋತಿಕುಮಾರ್‌ ಪಾಟೀಲ್‌, ಗ್ರಾಪಂ ಮಾಜಿ ಸದಸ್ಯ ರಮೇಶ್‌ ಚೌಗುಲೆ, ಪವನ ಪಾಟೀಲ್‌, ಕಾಕಾಸಾಹೇಬ್‌ ಪಾಟೀಲ್‌, ರಾಜು ಕುಸನಾಳ, ಪಿಎಸ್‌ಐ ರಬಕವಿ ಕಾರ್ಮಿಕರೊಂದಿಗೆ ಚರ್ಚಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು.

ಕಾರ್ಮಿಕರಿಗೆ ನ್ಯಾಯ ಒದಗಿಸಲು ದಲಿತ ಮುಖಂಡ ಅಶೋಕ್‌ ಕಾಂಬಳೆ, ಆಕಾಶ ಧೊಂಡಾರೆ, ದಿಲೀಪ್‌ ಕಾಂಬಳೆ, ಮಧುಕರ್‌ ಕಾಂಬಳೆ, ಶಂಕರ್‌ ಕಾಂಬಳೆ,
ಶಕುಂತಲಾ ದೇವರೆ, ಶೋಭಾ ಘೊರ್ಡೆ, ಜಯಪಾಲ ಬಡಿಗೇರ್‌, ವಿದ್ಯಾಬಾಯಿ ಘೊರ್ಡೆ ಮೊದಲಾದವರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next