ಬೆಂಗಳೂರು: ನಗರದಲ್ಲಿ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಅಳವಡಿಕೆ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆಗೆ ಮುಂದಾಗಿದ್ದು, ಶುಕ್ರವಾರ ಹಲವು ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
ಒಎಫ್ಸಿ ಕೇಬಲ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು.
ಗುಣಶೇಖರ್ ಅವರ ನೇತೃತ್ವದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣಗೊಂಡಿರುವ ಹಲವು ರಸ್ತೆಗಳಲ್ಲಿನ ಕೇಬಲ್‌ಗಳ ತೆರವುಗೊಳಿಸಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಅದರಂತೆ ರಿಚ್‌ಮಂಡ್ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆಗಳಲ್ಲಿ ಅಧಿಕಾರಿಗಳು ಮರದ ಕೊಂಬೆಗಳು, ವಿದ್ಯುತ್ ಕಂಬಗಳ ಮೇಲೆ ಅಳವಡಿಕೆ ಮಾಡಲಾಗಿದ್ದ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಯಿತು.
ಈ ಹಿಂದೆ ಒಎಫ್ಸಿ ಕೇಬಲ್ ಸಂಸ್ಥೆಗಳೊಂದಿಗೆ ಸಚಿವರು, ಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಲವಾರು ಬಾರಿ ಸಭೆ ನಡೆಸಿದಾಗ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಕೇಬಲ್ ಅಳವಡಿಕೆಗೆ ಪಾಲಿಕೆಗೆ ಶುಲ್ಕ ಪಾವತಿಸುವಂತೆ ಸೂಚಿಸಲಾಗಿತ್ತು. ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವ ಮೂಲಕ ಬಿಸಿ ಮುಟ್ಟಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳು ಶುಲ್ಕ ಪಾವತಿಸಿದ್ದವು.
ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಣಶೇಖರ್, ಒಎಫ್ಸಿ ಅಳವಡಿಕೆದಾರರಿಗೆ ಕಾನೂನು ಪಾಲಿಸಲು ಹಲವು ಬಾರಿ ಅವಕಾಶ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೆ.4ರಂದು ವಿಶೇಷ ಆಯುಕ್ತರು (ಯೋಜನೆ), ವಲಯ ಜಂಟಿ ಆಯುಕ್ತ ಹಾಗೂ ಮುಖ್ಯ ಅಭಿಯಂತರರೊಂದಿಗೆ ಸಭೆ ನಡೆಸಿ, ಎಲ್ಲ ವಲಯಗಳಲ್ಲಿನ ಕೇಬಲ್ ತೆರವು ಕಾರ್ಯಾಚರಣೆ ಮುಂದುವರಿಸಲಾಗು ವುದು ಎಂದು ತಿಳಿಸಿದರು.