Advertisement

ಸರ್ವೆ ಹೊಳೆ ಬದಿಯಲ್ಲಿ ಅನಧಿಕೃತ ಡಂಪಿಂಗ್‌ಯಾರ್ಡ್‌!

11:51 AM Jul 28, 2018 | Team Udayavani |

ಸವಣೂರು : ಸವಣೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಹೊಳೆ ಬದಿಯಲ್ಲಿ ಅನಧಿಕೃತ ಡಂಪಿಂಗ್‌ ಯಾರ್ಡ್‌ ನಿರ್ಮಾಣವಾದಂತಿದೆ. ಹೊಳೆ ಬದಿಯಲ್ಲಿರುವ ಸಮತಟ್ಟಾದ ಜಾಗದಲ್ಲಿ ಕಸದ ರಾಶಿ ಬಿದ್ದಿದ್ದು, ಇದನ್ನು ಈಗಲೇ ತಡೆ ಹಿಡಿಯದಿದ್ದರೆ ಕಸದ ರಾಶಿ ಹೆಚ್ಚಳವಾಗಿ ಮುಂದಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಲ್ಲಿ ಹೆಚ್ಚಾಗಿ ಸಿಮೆಂಟಿನ ಪ್ಲಾಸ್ಟಿಕ್‌ ಗೋಣಿಗಳು ಹಾಗೂ ಕಾರ್ಯಕ್ರಮಗಳಲ್ಲಿ ಊಟೋಪಚಾರಕ್ಕಾಗಿ ಬಳಸಿ ಎಸೆಯುವ ಪ್ಲಾಸ್ಟಿಕ್‌ ತಟ್ಟೆಗಳು ಹೆಚ್ಚು ಕಾಣುತ್ತಿದೆ. ಜತೆಗೆ ಕಪ್ಪು ಬಣ್ಣದ ದೊಡ್ಡ ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿ ಇಲ್ಲಿ ರಾಶಿ ಹಾಕಲಾಗಿದೆ.

Advertisement

ಹೊಳೆ ನೀರು ಮಲಿನ
ಜೋರಾಗಿ ಮಳೆ ಸುರಿದಾಗ ಕಸದ ರಾಶಿಗಳ ತ್ಯಾಜ್ಯಗಳಿಂದ ಗೌರಿ ಹೊಳೆಗೆ ಮಲಿನ ನೀರು ಹರಿಯುವ ಸಾಧ್ಯತೆ ಇದೆ. ಹೊಳೆಯ ನೀರನ್ನು ಹಲವು ಭಾಗಗಳಲ್ಲಿ ಜನರು ಉಪಯೋಗಿಸುತ್ತಿದ್ದು, ಜಲಚರ ಸಹಿತ ಮನುಷ್ಯರಿಗೂ ತೊಂದರೆ ತಪ್ಪಿದ್ದಲ್ಲ. ಸರ್ವೆ ಹೊಳೆಯ ಪ್ರದೇಶವು ನರಿಮೊಗರು, ಸವಣೂರು, ಮುಂಡೂರು ಗ್ರಾ.ಪಂ.ವ್ಯಾಪ್ತಿಗೆ ಸೇರಿದೆ. ಕಸ ಹಾಕಿರುವ ಪ್ರದೇಶ ಸವಣೂರು ವ್ಯಾಪ್ತಿಯಲ್ಲಿದೆ. ಗೌರಿ ಹೊಳೆಯ ಬದಿಯಲ್ಲಿ ಕಸ ಹಾಕಿರುವುದರಿಂದ ಅದರ ನೀರು ಬಳಸುತ್ತಿರುವವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಕೂಡಲೇ ಕಸ ತೆರವು ಮಾಡಬೇಕಿದೆ ಎಂದು ಗಂಗಾಧರ ಸರ್ವೆ ಅವರು ಹೇಳಿದ್ದಾರೆ.

ತೆರವಿಗೆ ಕ್ರಮ
ಗೌರಿ ಹೊಳೆಯ ಬದಿಯಲ್ಲಿರುವ ತ್ಯಾಜ್ಯ ರಾಶಿಯನ್ನು ತೆರವು ಮಾಡಲು ಕ್ರಮ ಕೈಗೊಂಡು, ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಇಂದಿರಾ ಬಿ.ಕೆ.,
ಸವಣೂರು ಗ್ರಾ.ಪಂ. ಅಧ್ಯಕ್ಷೆ 

 ಪರಿಶೀಲಿಸಲಾಗಿದೆ
ಸವಣೂರು ಗ್ರಾ.ಪಂ.ನ ವಾರ್ಡ್‌ 2ರ ವ್ಯಾಪ್ತಿಯಲ್ಲಿರುವ ಸರ್ವೆ ಹೊಳೆ ತಟದಲ್ಲಿ ಅನಧಿಕೃತವಾಗಿ ಕಸ ಸುರಿಯುತ್ತಿರುವ ವಿಚಾರದ ಕುರಿತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇದರಲ್ಲಿ ಹೆಚ್ಚಿನವು ಸಿಮೆಂಟ್‌ನ ಗೋಣಿಗಳಿದೆ. ಯಾವುದೋ ಕಾಮಗಾರಿ ನಡೆಸಿದವರು ಇಲ್ಲಿ ರಾಶಿ ಹಾಕಿರುವ ಸಾಧ್ಯತೆ ಇದೆ. ಈ ರಾಶಿಯಿಂದಾಗಿ ಇತರರೂ ಕಸ ಹಾಕಿರಬಹುದು.
– ಎಂ.ಎ. ರಫೀಕ್‌
ಗ್ರಾ.ಪಂ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next