Advertisement

ಸರ್ವಿಸ್‌ ರಸ್ತೆ ಸಂಧಿ ಸ್ಥಳದಲ್ಲೇ ಅನಧಿಕೃತ ಬಸ್‌ ನಿಲ್ದಾಣ

10:34 AM Mar 18, 2018 | Team Udayavani |

ಬಂಟ್ವಾಳ : ಬಿ.ಸಿ. ರೋಡ್‌ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಮೇಲ್ಸೇತುವೆಗಿಂತ 20 ಮೀಟರ್‌ ಮುಂದಕ್ಕೆ ಫ್ಲೈಓವರ್‌ ಮತ್ತು ಸರ್ವಿಸ್‌ ರಸ್ತೆ ಸಂಧಿ ಸ್ಥಳ ಅನಧಿಕೃತ ಬಸ್‌ ನಿಲ್ದಾಣವಾಗಿದ್ದು, ಅದನ್ನು ತೆರವು ಮಾಡದಿದ್ದರೆ ಮಾನವ ಪ್ರಾಣಕ್ಕೆ ಎರವಾಗುವ ಸಂಭವ ಇದೆ.

Advertisement

ಇಲ್ಲಿ ನಿಲ್ಲುವ ಬಸ್ಸಿನಿಂದ ಇಳಿಯುವ, ಬಸ್ಸಿಗೆ ಏರಲು ಓಡುವ ಜನರು ಅದೆಷ್ಟೊ ಸಲ ತರಾತುರಿಯಲ್ಲಿ ಪರಸ್ಪರ ಢಿಕ್ಕಿ ಹೊಡೆದು ಕೊಂಡಿದ್ದಾರೆ. ನಿಂತ ಬಸ್ಸಿನ ಹಿಂದುಗಡೆಯಿಂದ ಬಂದ ಲಘು ವಾಹನ, ದ್ವಿಚಕ್ರ ವಾಹನಗಳು ಎದುರಿಗೆ ಬಂದವರಿಗೆ ಸವರಿಕೊಂಡು, ಲಘು ಗಾಯ ಉಂಟು ಮಾಡಿ ಹೋಗಿರುವ ಹಲವು ಘಟನೆಗಳು ನಡೆದಿವೆ.

ಆದರೂ ಖಾಸಗಿ ಮತ್ತು ಸರಕಾರಿ ಬಸ್‌ಗಳು ಇಲ್ಲಿ ನಿಂತು ಪ್ರಯಾಣಿಕರನ್ನು ಇಳಿಸುವ, ಹತ್ತಿಸಿಕೊಳ್ಳುವ ಕ್ರಮವನ್ನು ನಿಲ್ಲಿಸಿಲ್ಲ. ಅನಧಿಕೃತ ಬಸ್‌ ನಿಲುಗಡೆ ಸ್ಥಳದಲ್ಲಿ ಸಂಚಾರ ಪೊಲೀಸರು ಇದ್ದರೂ ಬಸ್ಸು ನಿಲ್ಲುವುದನ್ನು ಕಂಡೂ ಕಾಣದಂತಿದ್ದು ಅಪಘಾತಕ್ಕೆ ಮುಕ್ತ ಅವಕಾಶ ನೀಡಿದಂತಿದೆ.

ಸುಮಾರು ಆರು ತಿಂಗಳಿಂದ ಇಂತಹ ಬೆಳವಣಿಗೆ ನಡೆದಿದೆ. ವಿವಿಧ ಊರುಗಳಿಂದ ಬರುವ ಪ್ರಯಾಣಿಕರು ಬಸ್ಸಿನಿಂದ ಇಳಿಯುವ, ಏರುವ ತರಾತುರಿಯಲ್ಲಿ ಸರ್ವಿಸ್‌ ರಸ್ತೆಯ ಅಂಚಿನಲ್ಲಿ ನಿಲ್ಲುತ್ತಾರೆ. ಆಚೆ-ಈಚೆಯಿಂದ ಬರುವ ವಾಹನಗಳನ್ನು ಗಮನಿಸದೆ ಬಸ್‌ ಹಿಡಿಯುವ ಭರದಲ್ಲಿ ಓಡುತ್ತಾರೆ. ಆಗ ಪ್ರಯಾಣಿಕರು ತಾವೇ ಹೋಗಿ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆಗಳೂ ಸಂಭವಿಸಿವೆ.

ಸಂಚಾರ ಅಡಚಣೆ
ಸರ್ವಿಸ್‌ ರಸ್ತೆ ಮತ್ತು ಫ್ಲೈ ಓವರ್‌ ವಿಭಾಗ ಆಗುವಲ್ಲಿ ಮುಖ್ಯವಾಗಿ ಬಸ್‌ ಚಾಲಕರು ವಾಹನ ನಿಲ್ಲಿಸುವುದರಿಂದ ಸಂಚಾರ ಅಡಚಣೆ ಆಗುತ್ತದೆ. ಅನಿವಾರ್ಯವಾಗಿ ನಿಲ್ಲಿಸಲೇ ಬೇಕು ಎಂಬುದಾಗಿದ್ದರೆ ಫ್ಲೈ ಓವರ್‌ನಲ್ಲಿ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡರೆ ಸಮಸ್ಯೆ ಇಲ್ಲ.

Advertisement

ಪ್ರಯಾಣಿಕರನ್ನು ಇಳಿಸಲು ಚಾಲಕರು ಸರ್ವಿಸ್‌ ರಸ್ತೆಗೆ ಇಳಿಯುವ ರಸ್ತೆಯ ಅಂಚಿಗೆ ಬಸ್‌ಗಳನ್ನು ನಿಲ್ಲಿಸುವ ಮೂಲಕ ಹಿಂದಿನಿಂದ ಬರುವ ವಾಹನಕ್ಕೂ ಮುಂದಕ್ಕೆ ಹೋಗಲು ಅಡ್ಡಿ ಮಾಡುತ್ತಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ಲಘು ವಾಹನಗಳ, ಅಟೋರಿಕ್ಷಾಗಳ ಚಾಲಕರು ಕರ್ಕಶವಾಗಿ ಹಾರ್ನ್ ಬಾರಿಸಲು ಆರಂಭಿಸಿ, ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತಿದ್ದಾರೆ.

ಫ್ಲೈ ಓವರ್‌ ಸಂದಿ ಸ್ಥಳದಿಂದ ಬಿ.ಸಿ. ರೋಡ್‌ ಪೇಟೆಗೆ ನಡೆದುಕೊಂಡು ಹೋಗುವಾಗಲೂ ಜಾಗ್ರತೆ ವಹಿಸಬೇಕು. ರಸ್ತೆ ಕಾಂಕ್ರೀಟ್‌ ಆಗಿದೆ. ಆದರೆ, ಜನ ಸಂಚಾರಕ್ಕೆ ಯೋಗ್ಯವಾದ ಸುರಕ್ಷಿತ ಫುಟ್‌ ಪಾತ್‌ ನಿರ್ಮಾಣ ಆಗಬೇಕು.

ಬಿ.ಸಿ. ರೋಡ್‌ಗೆ ಬರುವ ಬಸ್‌ ಗಳು ಫ್ಲೈ ಓವರ್‌ ಅಂಚಿನಲ್ಲಿ ನಿಲ್ಲಲು ಸರ್ವಿಸ್‌ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಉದ್ದೇಶಕ್ಕೆ ಕಳೆದ ಆಗಸ್ಟ್‌ನಲ್ಲಿ ಸಂಚಾರ ನಿರ್ಬಂಧಿಸಿದ್ದು ಮುಖ್ಯ ಕಾರಣವಾಗಿದೆ. ಈಗ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿ ಸಂಚಾರ ಮುಕ್ತವಾದರೂ ಮಂಗಳೂರಿಗೆ ಹೋಗುವ ಸರ್ವಿಸ್‌ ಬಸ್‌ಗಳಾಗಲಿ, ಸರಕಾರಿ ಬಸ್‌ಗಳಾಗಲೀ ಸರ್ವಿಸ್‌ ರಸ್ತೆಗೆ ಬಾರದೆ ಫ್ಲೈ ಓವರ್‌ನಿಂದ ಸಂಚರಿಸುತ್ತಿದ್ದು, ಪ್ರಯಾಣಿಕರನ್ನು ಅಲ್ಲಿಯೇ ಹತ್ತಿಸಿ ಇಳಿಸಿ ಅಭ್ಯಾಸವಾದಂತೆ ವರ್ತಿಸುತ್ತಿವೆ.

ನಿಖರವಾಗಿ ಹೇಳಲಾಗದು
ಸರ್ವಿಸ್‌ ರಸ್ತೆಯಲ್ಲಿ ಬಸ್‌ ಬರಬೇಕಾದರೆ ಇನ್ನೆಷ್ಟು ಸಮಯ ಹೊದೀತು ಎನ್ನಲಾಗದು. ಬಿ.ಸಿ.ರೋಡ್‌ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ನಿರ್ಮಾಣವಾಗಿ ಅದು ಲೋಕಾರ್ಪಣೆ ಆದ ಬಳಿಕ ಪರಿಸ್ಥಿತಿ ಸುಧಾರಿಸಬಹುದು.
– ಪಿ. ರಾಮಕೃಷ್ಣ ಆಳ್ವ
ಅಧ್ಯಕ್ಷರು ಬಂಟ್ವಾಳ ಪುರಸಭೆ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next