ಹುಬ್ಬಳ್ಳಿ; ರಾಷ್ಟ್ರಧ್ವಜ ವಿಚಾರದಲ್ಲಿ ಖಾದಿ ಮಹತ್ವ ಕುಗ್ಗಿಸುವ ಯಾವ ಯತ್ನವನ್ನು ಕೇಂದ್ರ ಸರಕಾರ ಮಾಡಿಲ್ಲ. ಕಾಂಗ್ರೆಸ್ ವಿನಾಕಾರಣ ರಾಜಕೀಯ ಮಾಡಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮೇಲೆ ಧ್ವಜಾರೋಹಣಕ್ಕೆ ಸುಮಾರು 10 ಕೋಟಿ ಧ್ವಜಗಳು ಬೇಕು. ಅಷ್ಟು ಧ್ವಜ ಖಾದಿಯಿಂದ ಪೂರೈಸಲು ಸಾಧ್ಯವಾಗದು ಎಂಬ ಕಾರಣಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆಯಷ್ಟೇ. ಖಾದಿ ಸಂಸ್ಥೆಗಳು ಎಷ್ಟೇ ರಾಷ್ಟ್ರಧ್ವಜ ತಯಾರಿಸಿದರೂ ಅವುಗಳನ್ನು ಖರೀದಿಸಲು ಸಿದ್ದರಿದ್ದೇವೆ ಎಂದರು.
ಖಾದಿ ವಿಚಾರವಾಗಿ ಕಾಂಗ್ರೆಸ್ ಹೋರಾಟ ರಾಹುಲ್ ಗಾಂಧಿ ಹುಬ್ಬಳ್ಳಿ ಆಗಮನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಎಂದೂ ದೇಶದ ಜನರನ್ನು ಒಗ್ಗೂಡಿಸುವ, ಪ್ರತಿ ಮನೆ ಮೇಲೆ ಧ್ವಜಾರೋಹಣದ ಭಾವನೆ ಮೂಡಿಸುವ ಕೆಲಸ ಮಾಡಲಿಲ್ಲ. ಆದರೆ ಪ್ರಧಾನಿ ಮೋದಿಯವರು ಕೈಗೊಳ್ಳುವ ಉತ್ತಮ ಕಾರ್ಯಗಳನ್ನು ಮಾತ್ರ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ ವಿಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ ವಿಚಾರದಲ್ಲಿ ಹುಬ್ಬಳ್ಳಿ ಗೆ ರಾಹುಲ್ ಗಾಂಧಿಯಲ್ಲ ಸೋನಿಯಾ ಗಾಂಧಿಯೇ ಬರಲಿ ಬೇಡ ಎನ್ನುವವರು ಯಾರು ಎಂದರು.
ಖಾದಿಯಿಂದ ತಯಾರಿಸಿದ ಧ್ವಜ ಬೇಡಿಕೆಯಷ್ಟು ದೊರೆಯದು, ಸಿಕ್ಕರೂ ದುಬಾರಿಯಾಗಲ್ಲಿದ್ದು, ಎಲ್ಲ ವರ್ಗದವರಿಗೂ ಖರೀದಿ ಸಾಧ್ಯವಾಗದು. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನನಗಿರುವ ಮಾಹಿತಿಯಂತೆ ಈ ವ್ಯವಸ್ಥೆ ಅಮೃತ ಮಹೋತ್ಸವ ಮಾತ್ರ ಸೀಮಿತವಾಗಿರಲಿದೆ ಎಂದರು.
ಇದನ್ನೂ ಓದಿ:ಫೇಸ್‌ಬುಕ್‌ನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಖಾತೆ: 19 ಲಕ್ಷ ಬಾಚಿದ್ದ ಖದೀಮ ಅರೆಸ್ಟ್!
ರಾಜ್ಯದ ಕರಾವಳಿ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೊಲೆಗೆ ಕೊಲೆ ಪರಿಹಾರವಲ್ಲ. ಶಾಂತಿ ಸ್ಥಿತಿ ನೆಲೆಸಬೇಕು ಮುಖ್ಯಮಂತ್ರಿ ಯವರು ಈ ನಿಟ್ಟಿನಲ್ಲಿ ಸಮರ್ಥ ಕ್ರಮ ಕೈಗೊಂಡಿದ್ದಾರೆ. ಇಸ್ಲಾಂ ಹಿಂಸಾಚಾರ ಹೆಚ್ಚುತ್ತಿದೆ. ಇದನ್ನು ಹೇಳಿದರೆ ವಿಪಕ್ಷಗಳು ನಮಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ ಎಂದರು.
ರಾಷ್ಟ್ರಪತಿ ಅವರ ವಿಚಾರದಲ್ಲಿ ಕಾಂಗ್ರೆಸ್ ನವರ ಹೇಳಿಕೆ ಅವರ ವರ್ತನೆ ತೋರಿಸುತ್ತದೆ ಎಂದು ಸಚಿವ ಜೋಶಿ ತಿಳಿಸಿದರು.