ರಾಯಚೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ವಾರಕ್ಕೆರಡು ದಿನ ಜಿಲ್ಲಾಡಳಿತ ವಿನಾಯಿತಿ ನೀಡಿದರೆ, ಅಗತ್ಯ ವಸ್ತುಗಳ ಜತೆಗೆ ಅನಗತ್ಯ ವಸ್ತುಗಳ ವ್ಯಾಪಾರವೂ ಎಗ್ಗಿಲ್ಲದೇ ಸಾಗಿತು. ಖುದ್ದು ಡಿಸಿಯೇ ನಗರ ಪ್ರದಕ್ಷಿಣೆ ಮಾಡುವ ಮೂಲಕ ವರ್ತಕರಿಗೆ ಎಚ್ಚರಿಕೆ ನೀಡುವ ಮೂಲಕ ಬಿಸಿ ಮುಟ್ಟಿಸಿದ ಪ್ರಸಂಗ ನಡೆಯಿತು.
ಗುರುವಾರ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ಇತ್ತು. ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅನುಮತಿ ನೀಡಿದ್ದಾಗ್ಯೂ ನಗರದಲ್ಲಿ ಬಹುತೇಕ ವರ್ತಕರು ಅಂಗಡಿ ತೆರೆದುಕೊಂಡು ಕುಳಿತಿದ್ದರು. ಅಷ್ಟು ಮಾತ್ರವಲ್ಲದೇ, ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯಿತು. ಅಗತ್ಯ ವಸ್ತುಗಳು ಮಾತ್ರವಲ್ಲದೇ, ಚಪ್ಪಲಿ, ಸ್ಟೇಶನರಿ, ಬುಕ್ ಸ್ಟಾಲ್‌ಗಳು, ಪೂಜಾ ಸಾಮಗ್ರಿ, ಡ್ರೈ ಫೂÅಟ್ಸ್ ಸೇರಿದಂತೆ ಅನೇಕ ಅಂಗಡಿಗಳನ್ನು ತೆಗೆಯಲಾಗಿತ್ತು. ಮಾರುಕಟ್ಟೆಯಲ್ಲಿ ಕೋವಿಡ್ ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿತ್ತು. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಕೂಡ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸಿದರು. ಅಂಗಡಿಗಳಲ್ಲಿ, ಮಾರುಕಟ್ಟೆಯಲ್ಲಿ ಮುಗಿ ಬಿದ್ದು ವ್ಯಾಪಾರ ಮಾಡುತ್ತಿದ್ದ ಸಾಮಾನ್ಯವಾಗಿತ್ತು.
ಇನ್ನೂ ಸೂಪರ್ ಮಾರ್ಕೆಟ್‌ಗಳಲ್ಲೂ ಜನಸಂದಣಿ ಮಿಕ್ಕಿ ಹೋಗಿತ್ತು. ನಗರದ ಬಸವೇಶ್ವರ ವೃತ್ತದ ಸಮೀಪದ ಮಾಲ್ ನಲ್ಲಿ ಮುಂಭಾಗ ಪಾರ್ಕಿಂಗ್ ಮಾಡಲು ಸ್ಥಳವಿಲ್ಲದಷ್ಟು ವಾಹನಗಳು ಜಮಾಗೊಂಡಿದ್ದವು. ಜನರ ಅಸಡ್ಡೆ ವರ್ತನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೈಚೆಲ್ಲಿ ಕುಳಿತಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬರುವ ಜನ ಬೈಕ್ ಹೊರತಾಗಿಸಿ ಬೇರೆ ವಾಹನ ತಂದಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಮಾರುಕಟ್ಟೆ ಪ್ರದೇಶಕ್ಕೆ ನಿರ್ಬಂ ಧಿಸಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಏಕ್ ಮಿನಾರ್ ಬಳಿ ಸಂಚಾರ ನಿರ್ಬಂಧ ಹೇರಲಾಗಿತ್ತು. ವಿನಾಯಿತಿ ಇದ್ದರೂ ಯಾಕೆ ಬ್ಯಾರಿಕೇಡ್ ಹಾಕಿದ್ದೀರಿ? ಎಂದು ಜನ ಪೊಲೀಸರ ಜತೆ ವಾಗ್ವಾದ ನಡೆಸಿದ್ದು ಕಂಡುಬಂತು.