ಸಾಗರ: ಇತ್ತೀಚಿನ ದಿನಗಳಲ್ಲಿ ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಅನವಶ್ಯಕ ನಿಂದಿಸುವುದು, ಸುಳ್ಳು ಆಪಾದನೆ ಮಾಡುತ್ತಿರುವುದರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಆ.26ರ ಗುರುವಾರ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ ಮಾತನಾಡಿ, ಅ. 10 ರಂದು ತಾಲೂಕು ಕಚೇರಿಯಲ್ಲಿ ಲೋಕಾಯುಕ್ತರು ಅಹವಾಲು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ವಿಶ್ವನಾಥ ಗೌಡ ಅದರಂತೆ, ನಾಗರಾಜ ಚೌಡಿಮನೆ ಇನ್ನಿತರರು ಕರ್ತವ್ಯನಿರತ ತಹಶೀಲ್ದಾರ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ, ಭ್ರಷ್ಟಾಚಾರದ ಆರೋಪ ಮಾಡಿ ಸಾರ್ವಜನಿಕರ ಎದುರು ಅವಮಾನಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ತಮ್ಮ ಯಾವುದೇ ಅಹವಾಲು ಇಲ್ಲದೆ ಇದ್ದಾಗ್ಯೂ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿ ನೌಕರರ ತೇಜೋವಧೆ ಮಾಡಿರುವ ಕೃತ್ಯವನ್ನು ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಒಂದೊಮ್ಮೆ ಅಧಿಕಾರಿ ನೌಕರರು ತಪ್ಪು ಮಾಡಿದ್ದಾರೆ. ಅದನ್ನು ಪ್ರಶ್ನಿಸುವ ರೀತಿಯಲ್ಲಿ ಪ್ರಶ್ನೆ ಮಾಡಲು ಸರ್ಕಾರಿ ನೌಕರರ ಸಂಘ ಅಡ್ಡಿಪಡಿಸುವುದಿಲ್ಲ. ಜೊತೆಗೆ ಭ್ರಷ್ಟ ಅಧಿಕಾರಿ ನೌಕರರ ಬೆಂಬಲಕ್ಕೆ ಸಂಘವು ಯಾವತ್ತೂ ನಿಲ್ಲುವುದಿಲ್ಲ. ಆದರೆ ಅನಗತ್ಯವಾಗಿ ಅಧಿಕಾರಿ ನೌಕರರನ್ನು ಅವಮಾನಿಸುವ ಕೆಲಸವನ್ನು ಸಂಘ ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ತಾಲೂಕಿನಲ್ಲಿ ಎಲ್ಲ ಇಲಾಖೆಯಲ್ಲೂ ಅಧಿಕಾರಿ ನೌಕರರ ಕೊರತೆ ಇದೆ. ಇರುವ ಅಧಿಕಾರಿ ನೌಕರರೇ ತಮ್ಮ ಇಲಾಖೆಯ ಕೆಲಸವನ್ನು ಮುತುವರ್ಜಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಸರ್ಕಾರಿ ನೌಕರರ ಮೇಲೆ ಅನಗತ್ಯ ಆರೋಪ ಹೊರೆಸಿ ತೊಂದರೆ ಕೊಡುವುದು ಸರಿಯಲ್ಲ. ತಕ್ಷಣ ತಹಶೀಲ್ದಾರ್ ವಿರುದ್ಧ ಸುಳ್ಳು ಆರೋಪ ಮಾಡಿ ಅವರ ತೇಜೋವಧೆಗೆ ಪ್ರಯತ್ನ ನಡೆಸಿದವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಜಿ.ಬಸವರಾಜ್, ಕಾರ್ಯದರ್ಶಿ ರಾಘವೇಂದ್ರ ಕುಮಾರ್, ಖಜಾಂಚಿ ಚಂದ್ರಶೇಖರ್ ವಿ., ಪ್ರಮುಖರಾದ ಸಂತೋಷ್ ಕುಮಾರ್, ಪ್ರಸನ್ನ, ಡಾ. ಭರತ್, ಎಲ್.ಎಂ.ಹೆಗಡೆ, ಮಾಲತೇಶ್, ಸಂತೋಷ್, ಕಲ್ಲಪ್ಪ ಮೆಣಸಿನಾಳ್, ಪ್ರಭು ಇ.ಎನ್., ಕೋದಂಡ, ನಾಗರಾಜ್ ಇನ್ನಿತರರು ಹಾಜರಿದ್ದರು.