Advertisement

ಮಾಸಾಂತ್ಯಕ್ಕೆ ಬರಲಿದೆ ಉನ್ನತಿ ಅನುದಾನ

12:30 AM Jan 10, 2019 | |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿ, ಪಂಗಡದವರ ಮಾಲೀಕತ್ವದ ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್‌) ಅನುದಾನ ನೀಡುವ “ಉನ್ನತಿ’ ಯೋಜನೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಮಾಸಾಂತ್ಯದ ವೇಳೆಗೆ ಅರ್ಹ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ಹಂಚಿಕೆಗೆ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಪರಿಶಿಷ್ಟ ಜಾತಿ, ಪಂಗಡದವರು ಉದ್ಯಮಿಗಳಾಗಿ ರೂಪುಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯು “ಉನ್ನತಿ’ ಯೋಜನೆಯನ್ನು ರೂಪಿಸಿದೆ. ಪರಿಶಿಷ್ಟ ಜಾತಿ, ಪಂಗಡದವರ ಮಾಲೀಕತ್ವದ ಸ್ಟಾರ್ಟ್‌ಅಪ್‌ಗ್ಳಿಗೆ ನಾನಾ ಹಂತದಲ್ಲಿ ಪರಿಶೀಲನೆಗೆ ಒಳಪಡಿಸಿ ಆಯ್ಕೆಯಾದರೆ ಗರಿಷ್ಠ 50 ಲಕ್ಷ ರೂ.ವರೆಗೆ ಅನುದಾನ ನೀಡಲಿದೆ.

ವ್ಯಾವಹಾರಿಕ, ವಾಣಿಜ್ಯ, ಆರೋಗ್ಯ, ತಾಂತ್ರಿಕ ಇತರೆ ವಲಯ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ಸಾಮಾಜಿಕ ಪರಿಣಾಮ ಬೀರುವ ಸ್ಟಾರ್ಟ್‌ಅಪ್‌ ಪ್ರಯತ್ನಗಳ ಬಗ್ಗೆ ಮಂಗಳವಾರ ಹಾಗೂ ಬುಧವಾರ ಯುವ ಉದ್ಯಮಿಗಳು ಪ್ರಾತ್ಯಕ್ಷಿಕೆ ನೀಡಿದ್ದು, ಎರಡು ಹಂತದ ಪರಿಶೀಲನೆ ಪೂರ್ಣಗೊಂಡಿದೆ. ಅಂತಿಮವಾಗಿ ಸಚಿವರ ಅಧ್ಯಕ್ಷತೆಯ ಸಮಿತಿ ಪರಿಶೀಲನೆ ನಡೆಸಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಿದೆ.

ಯೋಜನೆಯಡಿ 307 ಸ್ಟಾರ್ಟ್‌ಅಪ್‌ಗ್ಳು ಅರ್ಜಿ ಸಲ್ಲಿಸಿದ್ದವು. ಪ್ರಾಥಮಿಕ ಹಂತದ ಪರಿಶೀಲನೆ ಬಳಿಕ 188 ಸ್ಟಾರ್ಟ್‌ಅಪ್‌ಗ್ಳು ಎರಡನೇ ಹಂತಕ್ಕೆ ಆಯ್ಕೆಯಾಗಿದ್ದವು. ಪರಿಶಿಷ್ಟರ ಮಾಲೀಕತ್ವದ ಸ್ಟಾರ್ಟ್‌ಅಪ್‌ಗ್ಳ ಜತೆಗೆ ಈ ಸಮುದಾಯದವರ ಕಲ್ಯಾಣಕ್ಕೆ ನೆರವಾಗಲು ಸಾಮಾನ್ಯ ವರ್ಗದವರು ಆರಂಭಿಸಿರುವ ಸ್ಟಾರ್ಟ್‌ಅಪ್‌ಗ್ಳು ಸೇರಿ ಒಟ್ಟು 150ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳ ಪ್ರಾತ್ಯಕ್ಷಿಕೆ ನೀಡಿವೆ.

ತಜ್ಞರು ಹೇಳುವುದೇನು?: ತಜ್ಞರ ಪೈಕಿ ಒಬ್ಬರಾದ ಉದ್ಯಮಿ ಶ್ರೀನಿವಾಸ್‌ ಗರುಡಾಚಾರ್‌, ಹಲವು ಕ್ರಿಯಾಶೀಲ ಹಾಗೂ ಗಮನ ಸೆಳೆಯುವ ಪರಿಕಲ್ಪನೆಯ ಪ್ರಾತ್ಯಕ್ಷಿಕೆಗಳನ್ನು ನೀಡಿರುವುದು ಸ್ವಾಗತಾರ್ಹ. ಆರ್ಥಿಕವಾಗಿ ಹಿಂದುಳಿದವರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ “ಉನ್ನತಿ’ ಉತ್ತಮ ಪ್ರಯತ್ನ. ನಗರ ಕೇಂದ್ರಿತ ಸ್ಟಾರ್ಟ್‌ಅಪ್‌ಗ್ಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದ ಇನ್ನಷ್ಟು ಸ್ಟಾರ್ಟ್‌ಅಪ್‌ಗ್ಳು ಅನುದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯತ್ನಿಸುವಂತಾಗಬೇಕು ಎಂದರು.

Advertisement

ಮಾರ್ಗದರ್ಶನ ಅಗತ್ಯ: ಅನುದಾನವನ್ನು ಏಕಕಾಲಕ್ಕೆ ನೀಡುವ ಬದಲಿಗೆ ಬೆಳವಣಿಗೆ, ವಿಸ್ತರಣೆಗೆ ಅನುಗುಣವಾಗಿ ಹಂತ ಹಂತವಾಗಿ ಬಿಡುಗಡೆ ಮಾಡುವುದು ಸೂಕ್ತ ಎನಿಸುತ್ತದೆ. ಹಾಗೆಯೇ ಅನುದಾನ ಬಳಕೆಗೆ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ (ಮೆಂಟರಿಂಗ್‌- ಮಾನಿಟರಿಂಗ್‌) ಬಹಳ ಮುಖ್ಯ. ಸಂಶೋಧನೆ ಮತ್ತು ಅಭಿವೃದ್ಧಿ ಮಾತ್ರವಲ್ಲದೆ, ಮಾರುಕಟ್ಟೆ, ವ್ಯವಹಾರ ವೃದ್ಧಿಯತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.

ವಿಮಾ ವಲಯದ ಉದ್ಯಮಿ ಮಲ್ಲೇಶ್‌ರೆಡ್ಡಿ ಮಾತನಾಡಿ, ಯುವ ಉದ್ಯಮಿಗಳು, ನವೋದ್ಯಮ ಆರಂಭಿಸಿರುವವರು, ದೌರ್ಬಲ್ಯಗಳು ಹಾಗೂ ಅಪಾಯಗಳನ್ನು ಎದುರಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯ. ಅನುದಾನ ದುರ್ಬಳಕೆಯಾದರೆ ಆ ಮೊತ್ತವನ್ನು ಫ‌ಲಾನುಭವಿಗಳೇ ಇಲಾಖೆಗೆ ಭರಿಸುವ ಅಂಶವನ್ನು ಸೇರ್ಪಡೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಫ‌ಲಾನುಭವಿಗಳ ಮೇಲೆ ಹೊಣೆಗಾರಿಕೆ ಹೆಚ್ಚು: ಫ‌ಲಾನುಭವಿಗಳು ಇಲಾಖೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಸಾಧಿಸಿದರೆ ಇತರಿಗೆ ಮಾದರಿಯಾಗುವ ಜತೆಗೆ ಸ್ಫೂರ್ತಿಯಾಗಲಿದೆ. ಹಾಗಾಗಿ ಪ್ರಥಮ ಬಾರಿಗೆ ಅನುದಾನ ಪಡೆಯುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಒಂದೊಮ್ಮೆ ಪ್ರಥಮ ಬಾರಿಗೆ ಪಡೆದವರು ಹಣ ದುರ್ಬಳಕೆ ಮಾಡಿಕೊಂಡರೆ ಯೋಜನೆಯ ಅನುಷ್ಠಾನವೇ ಕಷ್ಟವಾಗಿ ಅನುದಾನದ ಅಗತ್ಯವಿರುವವರು, ಅರ್ಹರು ಆರ್ಥಿಕ ನೆರವಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರೊಬ್ಬರು ಹೇಳಿದರು.

ನಿರೀಕ್ಷೆಗೂ ಮೀರಿ 307 ಸ್ಟಾರ್ಟ್‌ಅಪ್‌ಗ್ಳು ಅರ್ಜಿ ಸಲ್ಲಿಸಿದ್ದು, ಉದ್ಯಮಿಗಳಾಗುವ ಉತ್ಸಾಹವನ್ನು ತೋರಿಸುತ್ತದೆ. ಆ ಹಿನ್ನೆಲೆಯಲ್ಲಿ ಯೋಜನೆಯಡಿ 20 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಮುಂದಿನ ವರ್ಷ ಅನುದಾನ ಪ್ರಮಾಣ ಹೆಚ್ಚಿಸುತ್ತೇವೆ.
– ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

“ಉನ್ನತಿ’ ಯೋಜನೆಯಡಿ 307ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, 188 ಸ್ಟಾರ್ಟ್‌ಅಪ್‌ಗ್ಳು ಎರಡನೇ ಹಂತಕ್ಕೆ ಆಯ್ಕೆಯಾಗಿದ್ದವು. ಈ ಪೈಕಿ ಸುಮಾರು 150 ಸ್ಟಾರ್ಟ್‌ಅಪ್‌ಗ್ಳು ಪ್ರಾತ್ಯಕ್ಷಿಕೆ ನೀಡಿವೆ.
– ಶ್ರೀನಿವಾಸುಲು, ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next