Advertisement

ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ: ರಾಜ್ಯಸಭೆ ಖಂಡನೆ

09:41 AM Dec 06, 2019 | Team Udayavani |

ಹೊಸದಿಲ್ಲಿ/ಲಕ್ನೋ: ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಬಗ್ಗೆ ರಾಜ್ಯಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 30 ನಿಮಿಷಗಳ ಕಾಲ ಕೋಲಾಹಲ ಉಂಟಾಗಿದೆ. ಬೇರೊಂದು ವಿಷಯದ ಚರ್ಚೆಯಿದ್ದರೂ, ಅದರ ಬದಲು ಘಟನೆಯ ಬಗ್ಗೆ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು.

Advertisement

ಘಟನೆಯನ್ನು ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು, ಕಠಿಣ ಶಬ್ದಗಳಲ್ಲಿ ಖಂಡಿಸಿದರು. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಇಡೀ ದೇಶಕ್ಕೆ ನಾವು ಪ್ರಬಲವಾದ ಸಂದೇಶ ರವಾನಿಸಬೇಕು. ಘಟನೆಯ ವಿರುದ್ಧ ಶೀಘ್ರವಾಗಿ, ಕಠಿಣವಾಗಿ, ಪ್ರಾಮಾಣಿಕವಾಗಿ, ಬಲವಾಗಿ ಕ್ರಮ ತೆಗೆದುಕೊಳ್ಳಬೇಕು. ಇಡೀ ರಾಜ್ಯಸಭೆ ಘಟನೆಯನ್ನು ಖಂಡಿಸುತ್ತದೆ ಎಂದು ವೆಂಕಯ್ಯನಾಯ್ಡು ಹೇಳಿದರು.

15ಕ್ಕೆ ತೀರ್ಪು?: ಇದೇ ವೇಳೆ ಉತ್ತರಪ್ರದೇಶ ಬಿಜೆಪಿಯ ಉಚ್ಛಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ ಮತ್ತು ಶಶಿ ಸಿಂಗ್‌ ಆರೋಪಿಗಳಾಗಿರುವ, ಉನ್ನಾವ್‌ ಅತ್ಯಾಚಾರ ತೀರ್ಪು ಡಿ.15ಕ್ಕೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಹಿಂದೆಯೂ ಹತ್ಯೆ ಯತ್ನ
ಇದೇ ವರ್ಷ ಜು. 28ರಂದು ಪ್ರಕರಣದ ಸಂತ್ರಸ್ತೆಯನ್ನು ಕೊಲ್ಲುವ ಪ್ರಯತ್ನ ನಡೆಸಲಾಗಿತ್ತು. ಸಂತ್ರಸ್ತೆಯು ತನ್ನ ಕುಟುಂಬ ಸದಸ್ಯರು ಹಾಗೂ ವಕೀಲರೊಬ್ಬರ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಾಯ್‌ಬರೇಲಿ ಜಿಲ್ಲೆಯಲ್ಲಿ ಎದುರಿನಿಂದ ಬಂದ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದಿತ್ತು.

ಆ ಅಪಘಾತದಲ್ಲಿ ಸಂತ್ರಸ್ತೆಯ ಕುಟುಂಬದ ಇಬ್ಬರು ಸದಸ್ಯರು ಬಲಿಯಾಗಿ, ಸಂತ್ರಸ್ತೆ ಹಾಗೂ ಆಕೆಯ ವಕೀಲ ಗಂಭೀರವಾಗಿ ಗಾಯಗೊಂಡಿದ್ದರು. ಪೊಲೀಸರ ತನಿಖೆಯಲ್ಲಿ ಇದು ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತ ಎಂಬುದು ಬಹಿರಂಗವಾಗಿತ್ತು.

Advertisement

ಕ್ಷಮಾದಾನ ಅರ್ಜಿ ತಿರಸ್ಕರಿಸಿ
ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದ ವಿರುದ್ಧ ಯಾವುದೇ ಕರುಣೆ ಅಗತ್ಯವಿಲ್ಲ. ಗಲ್ಲು ಶಿಕ್ಷೆ ರದ್ದು ಮಾಡಬೇಕೆಂದು ಅವರು ಸಲ್ಲಿಸಿದ ಕ್ಷಮಾದಾನ ಬೇಡುವ ಅರ್ಜಿ ತಿರಸ್ಕರಿಸಿ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಮಾಡಿದ್ದಾರೆ. ಇದರ ಜತೆಗೆ ಮಹಿಳೆಗೆ ಬೆಂಕಿ ಹಚ್ಚಿದವರ ವಿರುದ್ಧ ಗಲ್ಲು ಶಿಕ್ಷೆ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತೆ ಹೈದರಾಬಾದ್‌ ಮಾದರಿ ಪ್ರಕರಣ?
ಮಾಲ್ಡಾ: ಹೈದರಾಬಾದ್‌ ಅತ್ಯಾಚಾರ ಪ್ರಕರಣ ಬಳಿಕ ಪಶ್ಚಿಮ ಬಂಗಾಳದಲ್ಲಿ ಅಂಥದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಮಾಲ್ಡಾ ಜಿಲ್ಲೆಯ ಮಾವಿನ ತೊಪ್ಪಲಿನಲ್ಲಿ ಗುರುವಾರ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಯುವತಿ ವಿರುದ್ಧ ಅತ್ಯಾಚಾರ ನಡೆಸಿ, ಆಕೆಯನ್ನು ನೇಣುಹಾಕಿ ಹತ್ಯೆಗೈಯಲಾಗಿದೆ ಬಳಿಕ ದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯ ದೇಹದ ಮೇಲೆ ಹಲವಾರು ಗಾಯಗಳಿವೆ. ದೇಹ ಸುಟ್ಟಿರುವುದರಿಂದ ಆಕೆಯ ಗುರುತು ಪತ್ತೆಯಾಗಿಲ್ಲ.

ಟೀವಿ-ಮೊಬೈಲಿಂದ ಅತ್ಯಾಚಾರ ಹೆಚ್ಚಳ
ಜೈಪುರ: ಟೀವಿ ಮತ್ತು ಮೊಬೈಲ್‌ ಫೋನ್‌ಗಳು ಬಳಕೆಗೆ ಬರುವ ಮೊದಲು ಸಮಾಜದಲ್ಲಿ ಅತ್ಯಾಚಾರ ಇರಲಿಲ್ಲ. ಅವುಗಳನ್ನು ನೋಡಿ ನೋಡಿ ಯುವಜನರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ರಾಜಸ್ಥಾನ ಸಮಾಜ ಕಲ್ಯಾಣ ಸಚಿವ ಬನ್ವರ್‌ಲಾಲ್‌ ಮೇಘ್ವಾಲ್‌ ಹೇಳಿದ್ದಾರೆ. ಜೈಪುರದಲ್ಲಿ ಮಾತನಾಡಿದ ಅವರು, ಅತ್ಯಾಚಾರ ದೋಷಿಗಳಿಗೆ ಕೋರ್ಟ್‌ಗಳು ಮೂರು ತಿಂಗಳ ಒಳಗಾಗಿ ಶಿಕ್ಷೆ ವಿಧಿಸಬೇಕು. ಅವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದಿದ್ದಾರೆ.

ಚಿತ್ರಕೂಟ ಠಾಣೆಯಲ್ಲಿ ನಡೆದಿರುವ ಘಟನೆಯನ್ನು ಸಂಸತ್ತಿನಲ್ಲಿ ಖಂಡಿಸುವಂತೆ ಇಲ್ಲ ಎಂಬುದು ನಾಚಿಕೆಯ ವಿಷಯ. ಇಷ್ಟೆಲ್ಲಾ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ಕಠಿಣ ಪದಗಳನ್ನು ಬಳಸಿದರೆ ತಪ್ಪು ಎನ್ನಲಾಗುತ್ತದೆ.
– ಜಯಾ ಬಚ್ಚನ್‌, ರಾಜ್ಯಸಭಾ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next