Advertisement

ಚಿನ್ನದ ಪದಕ ನೀಡದ ವಿವಿ: ಅಸಮಾಧಾನ

11:28 AM Feb 09, 2018 | Team Udayavani |

53ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡುವುದಾಗಿ  ಹೇಳಿದಕ್ಕೆ ಹೊರರಾಜ್ಯಗಳಿಂದ ಖುಷಿಯಾಗಿ ಬಂದಿದ್ದ ವಿದ್ಯಾರ್ಥಿಗಳಿಗೆ ಭ್ರಮನಿರಸನವಾಗಿದೆ. ವಿವಿ ಚಿನ್ನದ ಪದಕದ ಬದಲಿಗೆ ಹಣ ನೀಡಿದೆ. ಇದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೇವಲ 500, 750, 1000 ಹೀಗೆ ಜಾಸ್ತಿ ಎಂದರೆ 2250 ರೂ. ವರೆಗೆ ಹಣ ನೀಡಿದ್ದಾರೆ. 9 ನಗದು ಬಹುಮಾನ ಬಂದಿರುವ ವಿದ್ಯಾರ್ಥಿನಿಯೊಬ್ಬಳಿಗೆ ಸಿಕ್ಕಿರುವ 11 ಸಾವಿರ ರೂ. ಹೊರತುಪಡಿಸಿ ಬೇರ್ಯಾರಿಗೂ ಅಷ್ಟು ಹಣ ಸಿಕ್ಕಿಲ್ಲ.

Advertisement

ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ವೇದಿಕೆ ಇಳಿಯುತ್ತಿದ್ದಂತೆ ಅಸಮಾಧಾನ ಹೊರ ಹಾಕಿದರು. ಚಿನ್ನದ ಪದಕಕ್ಕಾಗಿ ನಮ್ಮಿಂದಲೇ 500 ರೂ. ತೆಗೆದುಕೊಂಡಿರುವ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡದೇ ಅದೇ 500 ರೂ.ಗಳನ್ನು ಚೆಕ್‌ ಮೂಲಕ ನಗದು ಬಹುಮಾನದ ರೂಪದಲ್ಲಿ ವಾಪಾಸ್‌ ನೀಡಿದ್ದಾರೆ. ವಿಶ್ವವಿದ್ಯಾಲಯ ಇಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತದೆ ಎಂಬುದು ಗೊತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಂಧಾನಕ್ಕೆ ಯತ್ನ: ಘಟಿಕೋತ್ಸವದಲ್ಲೇ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದರಿಂದ ಕಾರ್ಯಕ್ರಮ ಲೋಪ ಆಗಬಾರದು ಎಂದು ಬೆಂವಿವಿ ಮೌಲ್ಯಮಾಪನ ಕುಲಸಚಿವ ಸಿ.ಶಿವರಾಜು ಸೇರಿದಂತೆ ವಿವಿ ಅಧಿಕಾರಿಗಳು ಅಸಮಾಧಾನಗೊಂಡ ವಿದ್ಯಾರ್ಥಿಗಳನ್ನು ಬೋರ್ಡ್‌ರೂಮ್‌ಗೆ ಕರೆಸಿ ಮಾತುಕತೆ ಮಾಡಿದ್ದಾರೆ. ಪದವಿ ಪ್ರಮಾಣದ ಪತ್ರದಲ್ಲಿ ಆಗಿರುವ ತಪ್ಪುಗಳನ್ನು ಒಂದೆರೆಡು ದಿನದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ಊಟದ ಸ್ಥಳಕ್ಕೆ ಮುತ್ತಿಗೆ: ವಿವಿಯ ಕುಲಪತಿ, ಕುಲಸಚಿವರು ಹಾಗೂ ಘಟಿಕೋತ್ಸವದ ಮುಖ್ಯ ಅತಿಥಿಯಾಗಿದ್ದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಊಟ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿಗಳ ತಂಡ ನಮಗೆ ಚಿನ್ನದ ಪದಕವೇಬೇಕು. ನಗದು ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಡಿಸಿದರು.

268 ವಿದ್ಯಾರ್ಥಿಗಳಿಗೆ ವಿವಿ ತಾತ್ಕಾಲಿಕ ಪಟ್ಟಿಯಲ್ಲಿ ಚಿನ್ನದ ಪದಕ ಘೋಷಣೆ ಮಾಡಿ ಕೊನೆ ಕ್ಷಣದಲ್ಲಿ ಪದಕವನ್ನು 500 ರೂ.ನಗದು ಬಹುಮಾನವಾಗಿ ಮಾರ್ಪಾಡು ಮಾಡಿತ್ತು. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನದ ಪದಕ ಘೋಷಣೆ ಮಾಡಿರುವ ಪಟ್ಟಿ ಹಿಡಿದುಕೊಂಡು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು.

Advertisement

ಯುವಿಸಿಇಯಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿ ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿನ್ನದ ಪದಕ ಬಂದಿದೆ ಎಂದು ವಿವಿಯಿಂದಲೇ ಪತ್ರ ಕಳುಹಿಸಿದ್ದರು. ಅದರಂತೆ ತಿರುಪತಿಯಿಂದ ಮನೆಯವರು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಿಲ್ಲ. ಬದಲಾಗಿ ಅಲ್ಪಮೊತ್ತದ ಹಣ ನೀಡಲಾಗಿದೆ. ಬೇರೆ ಯಾರಿಗೂ ಈ ಅನ್ಯಾಯವಾಗಬಾರದು.
-ಸಿದ್ದಲವಿಹಾರಿ, ಎಂಜಿನಿಯರಿಂಗ್‌ ರ್‍ಯಾಂಕ್‌ ವಿದ್ಯಾರ್ಥಿ.

ಬಿ.ಕಾಂ ಪದವಿಯ ಜತಗೆ ವಿವಿಧ ಕ್ರೀಡೆಯಲ್ಲಿ ಸಕ್ರಿಯವಾಗಿದ್ದೆ. ಅಲ್ಲದೇ ಅಂತರ್‌ ವಿವಿ ಕ್ರೀಡಾಕೂಟದಲ್ಲಿ ಪದಕ ತಂದಿದ್ದೇನೆ. ಈ ಸಾಧನೆಗೆ ಚಿನ್ನದ ಪದಕ ನೀಡಲಾಗುತ್ತದೆ ಎಂದು ವಿವಿಯಿಂದ ಸಂದೇಶ ನೀಡಿದ್ದರು. ಘಟಿಕೋತ್ಸವದಲ್ಲಿ ಬಿ.ಕಾಂನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಎಂದು ಬರೆದಿದ್ದಾರೆ.
-ಮಿನಿಷಾ ಬಿ.ಕಾಂ.

5 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಬಂದಿದೆ ಎಂದು ವಿವಿಯಿಂದ ಪ್ರಕಟಿಸಿರುವ ಪಟ್ಟಿಯಲ್ಲಿ ಸ್ಪಷ್ಟವಾಗಿದೆ. ಕಾರ್ಯಕ್ರಮದಲ್ಲಿ ಒಂದೂ ಚಿನ್ನದ ಪದಕ ನೀಡಿಲ್ಲ.
-ಕೆ.ಎಸ್‌.ನರೇಶ್‌, ಬಿ.ಎಸ್ಸಿ

Advertisement

Udayavani is now on Telegram. Click here to join our channel and stay updated with the latest news.

Next