Advertisement
ಥಾಕೊರೆ ಸಮುದಾಯವು ಇತ್ತೀಚಗಷ್ಟೇ ಒಂದು ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಆ ಪಟ್ಟಿಯಲ್ಲಿ ತನ್ನ ಸಮುದಾಯದ ಸದಸ್ಯರಿಗೆ ತಾನು ಹೇರಿರುವ ನಿಷೇಧಗಳನ್ನು ಪಟ್ಟಿಮಾಡಿದೆ. ಇವುಗಳಲ್ಲಿ ಯುವತಿಯರಗೆ ಮೊಬೈಲ್ ಬಳಸದಂತೆ ಮಾಡಿರುವ ನಿಷೇಧವೂ ಒಂದು. ಗುಜರಾತ್ ನ ಬನಸ್ಕಾಂತಾ ಜಿಲ್ಲೆಯಲ್ಲಿರುವ ದಂತಿವಾಡಾ ತೆಹ್ಸಿಲ್ ನ 12 ಗ್ರಾಮಗಳಲ್ಲಿರುವ ಈ ಸಮುದಾಯದ ಜನರಿಗೆ ನಿಷೇಧಗಳ ಬಿಸಿ ತಟ್ಟಿದೆ.
Related Articles
Advertisement
ಒಂದುವೇಳೆ ಥಾಕೋರೆ ಸಮುದಾಯದ ಹೆಣ್ಣುಮಗಳು ಬೇರೆ ಜಾತಿಯ ಗಂಡನ್ನು ವರಿಸಿದಲ್ಲಿ ಆಕೆಯ ಕುಟುಂಬವು 1.5 ಲಕ್ಷ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಇದೇ ಸಮುದಾಯದ ಗಂಡು ಬೇರೆ ಜಾತಿಯ ಹೆಣ್ಣನ್ನು ವರಿಸಿದ್ದೇ ಆದಲ್ಲಿ ಆಗ ಆತನ ಕುಟುಂಬವು 2 ಲಕ್ಷ ರೂಪಾಯಿಗಳ ದಂಡವನ್ನು ತೆರಬೇಕಾಗುತ್ತದೆ.
ಇನ್ನು ಸಮುದಾಯದ ಎಲ್ಲಾ ಸಮಾರಂಭಗಳಲ್ಲಿ ಡಿಜೆ ನೃತ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ್ತು ವರದಕ್ಷಿಣೆ ಕೊಡುವುದು ಅಥವಾ ಪಡೆದುಕೊಳ್ಳುವುದಕ್ಕೂ ಈ ಸಮುದಾಯವು ಕಡ್ಡಾಯ ನಿಷೇಧವನ್ನು ಹೇರಿದೆ ಮಾತ್ರವಲ್ಲದೇ ಶುಭಸಮಾರಂಭಗಳ ಸಂದರ್ಭದಲ್ಲಿ ಸುಡುಮದ್ದುಗಳ ಬಳಕೆಯನ್ನೂ ಸಹ ನಿಷೇಧಿಸಲಾಗಿದೆ.
ಭಾರತೀಯ ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಒತ್ತುಕೊಟ್ಟಂತೆ ಕಾಣುತ್ತಿರುವ ಥಾಕೋರೆ ಸಮುದಾಯವು ತನ್ನ ಸಮುದಾಯದಲ್ಲಿರುವ ಯಾವುದೇ ಕುಟುಂಬದಲ್ಲಿ ಸಹೋದರ ಕಲಹವಿದ್ದಲ್ಲಿ ಅಂತಹ ಕುಟುಂಬಕ್ಕೆ ನಿಷೇಧ ಹೇರುವ ಪದ್ಧತಿಯೂ ಈ ಸುಮದಾಯದಲ್ಲಿ ಚಾಲ್ತಿಯಲ್ಲಿದೆ. ಈ ಸಮುದಾಯದ ಮದುವೆ ಸಮಾರಂಭಗಳಲ್ಲಿ ಮದುಮಗ ಕುದುರೆ ಮೇಲೆ ಬರುವುದಕ್ಕೂ ನಿಷೇಧವಿದೆ.
ಒಟ್ಟಾರೆಯಾಗಿ ಕೌಟುಂಬಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ತಮ್ಮ ಸಮುದಾಯದ ಸದಸ್ಯರಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಥಾಕೋರೆ ಸಮುದಾಯವು ಈ ಎಲ್ಲಾ ನಿರ್ಬಂಧಗಳನ್ನು ತನ್ನ ಸಮುದಾಯ ಸದಸ್ಯರ ಮೇಲೆ ಹೇರಿದಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆಯಾದರೂ ಇಂದಿನ ಆಧುನಿಕ ಯುಗದಲ್ಲಿ ಇವುಗಳ ಪಾಲನೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತದೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.