ಯಾದಗಿರಿ: ಜಿಲ್ಲೆಯಲ್ಲಿ ಸೋಂಕು ಪತ್ತೆ ಪ್ರಮಾಣ ಕಡಿಮೆಯಾಗಿದ್ದು ಜೂನ್ 21ರಿಂದ ಜುಲೈ 5ರ ವರೆಗೆ ಲಾಕ್‌ಡೌನ್ ಸಡಿಲಗೊಳಿಸಿ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಮೊದಲ ದಿನವಾದ ಸೋಮವಾರ ಎಲ್ಲೆಡೆ ಜನರು ಕೊರೊನಾಗೆ ಯಾರು ಸಾಮಾಜಿಕ ಅಂತರ ಪಾಲಿಸದೇ ಇರುವುದು ಕಂಡು ಬಂತು.
ಜಿಲ್ಲಾ ಕೇಂದ್ರದ ಗಾಂಧಿ ವೃತ್ತದಲ್ಲಿ ಜನ ಜಂಗುಳಿಯೇ ಸೇರಿತ್ತು. ಇವರಲ್ಲಿ ಕೆಲವು ಮಾಸ್ಕ್ ಧರಿಸಿದ್ದರೇ ಇನ್ನು ಕೊರೊನಾ ಯಾವ ಲೆಕ್ಕ ಎನ್ನುವಂತೆ ಮಾಸ್ಕ್ ಮತ್ತು ಅಂತರ ಮರೆತಿದ್ದರು. ಕ್ರೂರಿ ಕೊರೊನಾ ಸಾಕಷ್ಟು ಸಾವು-ನೋವುಗಳನ್ನು ನೀಡಿದ್ದರೂ ಜನರು ಮಾತ್ರ ಎಚ್ಚರಿಕೆ ವಹಿಸದೇ ಮೈಮರೆತಿದ್ದರು.
ಅಗತ್ಯ ವಸ್ತುಗಳು, ಹಣ್ಣು ತರಕಾರಿ, ಕಿರಾಣಿ, ಬಟ್ಟೆ ವ್ಯಾಪಾರ, ಚಿನ್ನಾಭರಣ, ಬೀದಿ ವ್ಯಾಪಾರ ಸೇರಿದಂತೆ ಬಹುತೇಕ ಎಲ್ಲ ವ್ಯವಹಾರ ಆರಂಭವಾಗಿದ್ದು, ಆಭರಣ ಅಂಗಡಿಗಳಲ್ಲಿ ಮಹಿಳೆಯರು ಜೀವಕ್ಕಿಂತ ಹೆಚ್ಚು ಆಭರಣಗಳಿಗೆ ಮಹತ್ವ ನೀಡುತ್ತಿದ್ದು ಕಂಡು ಬಂತು. ರೆಸ್ಟೋರೆಂಟ್, ಹೋಟಲ್‌ಗಳಲ್ಲಿ ಶೇ.50 ಜನರಿಗೆ ಕುಳಿತು ಆಹಾರ ಸೇವಿಸುವುದಕ್ಕೆ ಅನುಮತಿಯಿದ್ದು, ಹೆಸರಾಂತ ಹೋಟೆಲ್‌ಗಳು ಕೈಗಳನ್ನು ಶುಚಿಗೊಳಿಸುವ ಬಳಿಕ ಪ್ರವೇಶ ನೀಡಿ ನಿಯಮದಂತೆ ಜನರು ಕುಳಿತು ತಿನ್ನುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದವು.
ಇನ್ನು ಸಾರಿಗೆ ಸೌಕರ್ಯವೂ ಆರಂಭವಾಗಿದ್ದು ಮೊದಲ ದಿನವಾಗಿದ್ದರಿಂದ ಹೆಚ್ಚಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಂಡುಬರಲಿಲ್ಲ. ನೆರೆಯ ತೆಲಂಗಾಣ ಸರ್ಕಾರ ಅಂತರ್ ರಾಜ್ಯ ಸಾರಿಗೆಯನ್ನು ಆರಂಭಿಸಿದ್ದು, ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಪರಗಿ ಘಟಕದ ವಾಹನಗಳು ಹೈದರಾಬಾದ್ ಮಾರ್ಗದಲ್ಲಿ ಸಂಚರಿಸಿದವು. ಖಾಸಗಿ ವಾಹನಗಳಿಗೆ ಯಾವುದೇ ಲಗಾಮು ಇಲ್ಲದಂತಾಗಿದ್ದು ಮನಸೋ ಇಚ್ಚೇ ಪ್ರಯಾಣಿಕರನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದರೂ ಯಾರು ಕೇಳಿವವರಿಲ್ಲದಂತಾಗಿದೆ.