ಹನ್ನೊಂದು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಭಾಗಶಃ ಅನ್ ಲಾಕ್ ಘೋಷಿಸಲಾಗಿದೆ. ಇದು ಸೋಮವಾರ ಜಾರಿಗೆ ಬರಲಿದೆ. ಹಾಗೆಂದು ಇದು ಸಂಪೂರ್ಣ ಓಡಾಟಕ್ಕೆ ನೀಡಿರುವ ಅನುಮತಿಯಲ್ಲ. ಕಳೆದ ಎರಡು ದಿನಗಳನ್ನು ಗಮನಿಸಿದರೆ, ಜನ ಈಗಾಗಲೇ ಕೊರೊನಾವನ್ನು ಲಘುವಾಗಿ ಪರಿಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಕೊರೊನಾ 2ನೇ ಅಲೆ ಪೂರ್ವದಲ್ಲಿ ಓಡಾಡಿದ ಹಾಗೆಯೇ ಜನ ಬೀದಿಗಿಳಿಯಲು ಮುಂದಾಗಿದ್ದಾರೆ.
ಗುರುವಾರ ಸರಕಾರ ಘೋಷಿಸಿರುವ ಅನ್ ಲಾಕ್ ಆಧಾರದ ಮೇಲೆ ಹೇಳುವುದಾದರೆ, ಇದು ಈಗಿರುವ ಲಾಕ್ ಡೌನ್‌ಅನ್ನು ಒಂದಷ್ಟು ಸಡಿಲಿಕೆ ಮಾಡಿರುವುದು ಮಾತ್ರ. ಅಂದರೆ ಬೆಳಗ್ಗೆ 6ರಿಂದ 10ರ ವರೆಗೆ ತೆರೆಯುತ್ತಿದ್ದ ದಿನಸಿ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆವರೆಗೆ ತೆರೆಯುವುದು. ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ನೀಡಿರುವುದು, ಕಾರ್ಖಾನೆಗಳಲ್ಲಿ ಶೇ.50 ಕಾರ್ಮಿಕರೊಂದಿಗೆ ಕೆಲಸ ಮಾಡುವುದು, ಗಾರ್ಮೆಂಟ್ಸ್ ಗಳಲ್ಲಿ ಶೇ.30ರ ಹಾಜರಾತಿಯೊಂದಿಗೆ ಕೆಲಸ ಮಾಡುವುದು ಈಗ ನೀಡಿರುವ ಸಡಿಲಿಕೆಯಲ್ಲಿ ಸೇರಿದೆ.
ಹಾಗೆಯೇ ಬಸ್ ಸಂಚಾರ, ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿಲ್ಲ. ಟ್ಯಾಕ್ಸಿಗಳು ಮತ್ತು ಆಟೋಗಳಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಓಡಾಡಲು ಅವಕಾಶ ನೀಡಲಾಗಿದೆ. ಈ ಎಲ್ಲ ಸಡಿಲಿಕೆ ಮಧ್ಯೆ ಪ್ರಮುಖವಾದ ಅಂಶವೊಂದು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಶುಕ್ರವಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಇಳಿದಿದೆ. ಆದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚೇ ಇದೆ. ಹೀಗಾಗಿ ಜನ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದದ್ದು ಮುಖ್ಯ.
ಏಕೆಂದರೆ ಹರಡುವಿಕೆ ವಿಚಾರದಲ್ಲಿ ಕೊರೊನಾ ಹೆಚ್ಚು ಅಪಾಯಕಾರಿ. ಒಂದೇ ಒಂದು ಪ್ರಕರಣವಿದ್ದರೂ, ಅದು ಐದು ಮಂದಿಗೆ ಹಬ್ಬಿಸಬಹುದು. ಹೀಗಾಗಿ ಕೊರೊನಾ ಸಂಪೂರ್ಣವಾಗಿ ತಹಬದಿಗೆ ಬರುವ ವರೆಗೆ ಅದರ ಬಗ್ಗೆ ಎಚ್ಚರಿಕೆಯಿಂದ ಇರಲೇಬೇಕಾದದ್ದು ಜನರ ಕರ್ತವ್ಯ. ಈಗ ಸಡಿಲಿಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಜನ ಸುಖಾಸುಮ್ಮನೆ ಬೀದಿಗೆ ಇಳಿಯಬಾರದು. ಆವಶ್ಯಕವಿದ್ದರಷ್ಟೇ ಮನೆಯಿಂದ ಆಚೆ ಬರಬೇಕು.
ಸದ್ಯ ಕಾರ್ಖಾನೆಗಳು ಮತ್ತು ಗಾರ್ಮೆಂಟ್ ಗಳಿಗೆ ಷರತ್ತಿನ ಮೇರೆಗೆ ಅನುಮತಿ ನೀಡಲಾಗಿದೆ. ಸರಕಾರಿ ಕಚೇರಿಗಳನ್ನು ಪ್ರಮುಖವಾದ ಮತ್ತು ಅತ್ಯಗತ್ಯ ಸೇವೆ ಒದಗಿಸುವ ಕಚೇರಿಗಳಿಗೆ ಅನುಮತಿ ನೀಡಲಾಗಿದೆ. ಉಳಿದ ಕಚೇರಿಗಳು, ಖಾಸಗಿ ಸಂಸ್ಥೆಗಳನ್ನು ತೆರೆಯಲು ಇನ್ನೂ ಅನುಮತಿ ನೀಡಿಲ್ಲ.
ಹೀಗಾಗಿ ಜನ ಮನೆಯಿಂದ ಆಚೆ ಬರಬೇಕಾಗಿಲ್ಲ. ಮನೆಯಿಂದ ಹೊರಗೆ ಬಂದರೂ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರಿಸಬೇಕು. ಗುಂಪು ಸೇರಬಾರದು. ಮದುವೆಯಲ್ಲಿ 40 ಜನ ಹಾಗೂ ಅಂತ್ಯ ಸಂಸ್ಕಾರದಲ್ಲಿ 5 ಜನರಿಗೆ ಅವಕಾಶ ನೀಡಲಾಗಿದೆ. ಸರಕಾರ ನೀಡಿರುವ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಮದುವೆಯಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು.