Advertisement

ಅನ್‌ಲಾಕ್‌: ಸಾರಿಗೆ ಸಂಚಾರ ಆರಂಭ

09:49 AM Jun 22, 2021 | Team Udayavani |

ಬಳ್ಳಾರಿ: ರಾಜ್ಯಸರ್ಕಾರ ಅನ್‌ಲಾಕ್‌ 2.0ನಿಂದ ಕೈಬಿಟ್ಟಿದ್ದ ಗಣಿನಾಡು ಬಳ್ಳಾರಿ/ವಿಜಯನಗರ ಜಿಲ್ಲೆಗಳನ್ನು ಕೊನೆಗೂ ಮೊದಲ ಪಟ್ಟಿಯಲ್ಲಿ ಸೋಮವಾರ ಸೇರ್ಪಡೆಗೊಳಿಸಿದ್ದು, ಕೆಎಸ್ಸಾರ್ಟಿಸಿ ಬಸ್‌ಗಳು ಸೇರಿ ಎಲ್ಲವೂ ರೀತಿಯ ವ್ಯಾಪಾರ ವಹಿವಾಟಿಗೂ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ.

Advertisement

ಜೂ. 19ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀಡಿದ್ದ ಮೊದಲ ಪಟ್ಟಿಯಲ್ಲಿ ಬಳ್ಳಾರಿ/ವಿಜಯನಗರ ಜಿಲ್ಲೆಗಳನ್ನು ಕೈಬಿಡಲಾಗಿತ್ತು. ಈ ಮೊದಲು ಜೂ. 14ರಂದು ನಿಗದಿಪಡಿಸಿದ್ದ ಷರತ್ತುಗಳ ಅನ್ವಯ ಆಗುವಂತೆ ಲಾಕ್‌ಡೌನ್‌ ಮುಂದುವರಿಸಲಾಗಿತ್ತು. ಅಂದರೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಇದೀಗ ಅನ್‌ಲಾಕ್‌ ಮಾಡಿದ್ದ 17 ಜಿಲ್ಲೆಗಳ ಮೊದಲ ಪಟ್ಟಿಯಲ್ಲಿ ಬಳ್ಳಾರಿ/ವಿಜಯನಗರ ಜಿಲ್ಲೆಗಳನ್ನು ಸೇರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್‌, ಬಟ್ಟೆ ಸೇರಿ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಸಂಜೆ 5 ಗಂಟೆವರೆಗೆ ವಹಿವಾಟು ನಡೆಸಿದವು. ಬಸ್‌, ಆಟೋ ಸೇರಿದಂತೆ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗುತ್ತದೆ. ಹೋಟೆಲ್‌, ಬಾರ್‌ ಸೇರಿದಂತೆ ಎಲ್ಲ ಸವಲತ್ತುಗಳು ಸಂಜೆ 5 ಗಂಟೆಯವರೆಗೆ ಇರಲಿವೆ. ಸಂಜೆ 7 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಜಾರಿಯಲ್ಲಿ ಇರದಲಿದೆ.

ಶೇ. 50ರಷ್ಟು ಮಾನವ ಸಂಪನ್ಮೂಲದೊಂದಿಗೆ ಉತ್ಪಾದನಾ ಘಟಕಗಳು ಕೆಲಸ ಆರಂಭಿಸಬಹುದು. ಶೇ.30ರಷ್ಟು ಸಂಪನ್ಮೂಲದೊಂದಿಗೆ ಗಾರ್ಮೆಂಟ್ಸ್‌ಗಳು ಕೆಲಸ ಮಾಡಬಹುದು. ಹೋಟೆಲ್‌ಗ‌ಳಲ್ಲಿ ಕುಳಿತು ತಿಂಡಿ ತಿನ್ನಲು ಶೇ. 50ರಷ್ಟು ಆಸನದೊಂದಿಗೆ ವ್ಯವಸ್ಥೆ ಮಾಡಬಹುದು. ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಊಟಕ್ಕೆ ಶೇ. 50ರ ಆಸನ ವ್ಯವಸ್ಥೆ ಮಾಡಬಹುದು. ಆದರೆ, ಮದ್ಯ ಸರಬರಾಜು ಮಾಡುವಂತಿಲ್ಲ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ಕೈಗೊಳ್ಳಬಹುದು. ಸರ್ಕಾರಿ ಕಚೇರಿಗಳು ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡಬಹುದು.

ಈ ಎಲ್ಲ ಸೇವೆ, ವ್ಯಾಪಾರಗಳ ಆರಂಭದ ವೇಳೆ ಕೋವಿಡ್‌ ಸಂಬಂಧಿತ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಆಗಿಂದಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಸೋಂಕು ಹರಡದಂತೆ ತಡೆಯಲು ಬೇಕಾದ ಎಲ್ಲ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

Advertisement

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ: ಕಳೆದ ಎರಡು ತಿಂಗಳುಗಳಿಂದ ಸಂಚಾರ ಸ್ಥಗಿತಗೊಳಿಸಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳು ಸೋಮವಾರ ರಸ್ತೆಗಿಳಿದಿದ್ದು, ದ್ವಿಚಕ್ರ ವಾಹನ, ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದ ಜನರು ನಿಟ್ಟುಸಿರು ಬಿಟ್ಟರು. ಬೆಳಗ್ಗೆ ಸಂಚಾರ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು, ಹೊಸಪೇಟೆ, ಸಿರುಗುಪ್ಪ, ರಾಯಚೂರು, ಗಂಗಾವತಿ ಸೇರಿ ಇನ್ನಿತರೆಡೆಗಳಿಗೆ ಒಟ್ಟು 45ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಸುಮಾರು 100 ಟ್ರಿಪ್‌ ಸಂಚರಿಸಿವೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ರಾಜಗೋಪಾಲ್‌ ಪುರಾಣಿಕ್‌ ತಿಳಿಸಿದರು.

ಸಿಬ್ಬಂದಿ ಕೊರತೆ: ಬಸ್‌ ಸಂಚಾರ ಆರಂಭವಾಗಿದೆ ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಮೊದಲ ದಿನವೇ ಬಸ್‌ಗಳ ಕೊರತೆ ಎದುರಾಯಿತು. ಬಸ್‌ಗಳನ್ನುಚಲಾಯಿಸುವ ಚಾಲಕ, ನಿರ್ವಾಹಕರಿಬ್ಬರೂ ಕೋವಿಡ್‌ ಲಸಿಕೆಯನ್ನು ಎರಡು ಡೋಸ್‌ ಪಡೆದಿರಬೇಕು. ಅಥವಾ ಒಂದು ಡೋಸ್‌ ಪಡೆದಿದ್ದರೆ ಕೋವಿಡ್‌ ನೆಗೆಟಿವ್‌ ವರದಿಯನ್ನು ಪಡೆದಿರಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಪರಿಣಾಮ ಇಲಾಖೆಯಲ್ಲಿ ಶೇ. 90ಕ್ಕೂ ಹೆಚ್ಚು ಸಿಬ್ಬಂದಿಗಳು ಮೊದಲ ಡೋಸ್‌ ಪಡೆದಿದ್ದು, ಎರಡನೇ ಡೋಸ್‌ ಪಡೆದಿಲ್ಲ. ಪರಿಣಾಮ ಮೊದಲ ದಿನ ಸಿಬ್ಬಂದಿ ಕೊರತೆ ಎದುರಾಗಿ ನಿರೀಕ್ಷಿತ ಪ್ರಮಾಣದದಲ್ಲಿ ಬಸ್‌ ಓಡಿಸಲು ಆಗಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಲಿವೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next