ಮುಂಬೈ:ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಲಾಕ್ ಡೌನ್ ಹೇರಿದ್ದ ವೇಳೆಯಿಂದ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳಗಳು, ಯೋಗ ತರಗತಿಗಳು ಬಂದ್ ಆಗಿದ್ದು, ಇವುಗಳ ಪುನರಾರಂಭಕ್ಕೆ ಮಹಾರಾಷ್ಟ್ರ ಸರ್ಕಾರ ಬುಧವಾರ (ನವೆಂಬರ್ 04, 2020) ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಹೋಟೆಲು, ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿತ್ತು. ದೈಹಿಕ ಅಂತರ ಮತ್ತು ಸ್ಯಾನಿಟೈಜೇಶನ್ ಕಡ್ಡಾಯವಾಗಿ ಪಾಲಿಸಬೇಕು ಎಂಬ ಷರತ್ತಿನೊಂದಿಗೆ ಹೋಟೆಲು, ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು.
ಕೋವಿಡ್ ಸೋಂಕು ಪೀಡಿತ ವಲಯದ ಹೊರಪ್ರದೇಶದಲ್ಲಿ ಸಿನಿಮಾ ಮಂದಿರಗಳು, ನಾಟಕ ಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳ ಹಾಗೂ ಯೋಗ ತರಗತಿಗಳನ್ನು ನವೆಂಬರ್ 5ರಿಂದ ಪುನರಾರಂಭಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿರುವುದಾಗಿ ತಿಳಿಸಿದೆ. ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಸಿನಿಮಾ ಮಂದಿರದಲ್ಲಿ ಅವಕಾಶ ನೀಡಲಾಗಿದ್ದು, ಚಿತ್ರಮಂದಿರದೊಳಗೆ ಯಾವುದೇ ತಿನ್ನುವ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ.
ಇದನ್ನೂ ಓದಿ:ಹಾರುವ ಕಾರನ್ನು ಆವಿಷ್ಕರಿಸಿದ ಕ್ಲೈನ್ ವಿಷನ್ ಕಂಪನಿ! 30 ವರ್ಷಗಳ ಪ್ರಯತ್ನಕ್ಕೆ ಯಶಸ್ಸು
ಸರ್ಕಾರದ ನೂತನ ನಿಯಮಾವಳಿ ಪ್ರಕಾರ, ಈಜುಕೊಳಗಳನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧಿಗಳಿಗೆ ತರಬೇತಿ ನೀಡಲು ಉಪಯೋಗಿಸಬೇಕು. ನವೆಂಬರ್ 5ರಿಂದ ಬ್ಯಾಡ್ಮಿಂಟನ್ ಹಾಲ್ಸ್, ಟೆನ್ನಿಸ್ ಕೋರ್ಟ್ಸ್, ಒಳಾಂಗಣ ಶೂಟಿಂಗ್ ತರಬೇತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.