ಹೊಸದಿಲ್ಲಿ: ದೇಶದಲ್ಲಿ ನಿಲುಗಡೆ ರಹಿತ ವಿದ್ಯುತ್ ಸರಬರಾಜಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು 3.03 ಲಕ್ಷ ಕೋಟಿ ರೂ. ಯೋಜನೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ವಿತ್ತೀಯ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಇದು ಐದು ವರ್ಷಗಳ ಯೋಜನೆಯಾಗಿದ್ದು, ಸುಧಾರಣೆ-ಆಧಾರಿತ ಹಾಗೂ ಫಲಿತಾಂಶ-ನಿರೀಕ್ಷಿತ ಯೋಜನೆಯಾಗಿದ್ದು, ಒಟ್ಟು 3,03,058 ಲಕ್ಷ ಕೋಟಿ ರೂ.ಗಳನ್ನು ದೇಶದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ವಿತರಿಸಿ ಮೂಲಸೌಕರ್ಯ, ತಂತ್ರ ಜ್ಞಾನ ಉನ್ನತೀಕರಣ, ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಸೂಚಿಸಲಾಗುತ್ತದೆ.
ರೈತರಿಗೆ ಪ್ರಾಮುಖ್ಯತೆ: ರೈತರಿಗೆ ನೀಡಲಾಗುವ ವಿದ್ಯುತ್‌ಗೆ ಯೋಜನೆಯಲ್ಲಿ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ರೈತರ ಹೊಲಗಳಿಗೆ ಸೋಲಾರ್ ಫಲಕ ಅಳವಡಿಸಿ, ಅದರಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ರೈತರ ಮನೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಹಾಗೂ ಈಗಿರುವ ಫೀಡರ್ ಲೈನ್ ಗಳಿಗೆ ಹೆಚ್ಚುವರಿಯಾಗಿ 10,000 ಫೀಡರ್‌ಗಳ ನಿರ್ಮಾಣ, 4 ಲಕ್ಷ ಕಿ.ಮೀ.ವರೆಗೆ ಲೋ-ಟೆನÒನ್ ವಿದ್ಯುತ್ ಪ್ರಸರಣ ವ್ಯವಸ್ಥೆ, 25 ಕೋಟಿ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಾಮಗಾರಿ ಇದರಡಿ ಜಾರಿಗೊಳ್ಳಲಿವೆ.
ಭಾರತ್‌ನೆಟ್‌ಗೆ 19 ಕೋಟಿ ರೂ.: 16 ರಾಜ್ಯಗಳ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್ ಸೌಕರ್ಯ ಕಲ್ಪಿಸುವ ಸಲುವಾಗಿ, ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೆ ತರಲಿರುವ ಭಾರತ್‌ನೆಟ್ ಯೋಜನೆಗೆ 19,041 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಪ್ಯಾಕೇಜ್‌ಗೆ ಒಪ್ಪಿಗೆ: ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದ 6.29 ಲಕ್ಷ ಕೋಟಿ ರೂ. ಕೊರೊನಾ ಪರಿಹಾರ ಪ್ಯಾಕೇಜ್‌ಗೂ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.