Advertisement
ಇದು ಕಾಮಿಡಿ-ಹಾರರ್ ಚಿತ್ರ. ಹಾಗಾಗಿ, ಇಲ್ಲಿ ಹಾರರ್ ಫೀಲ್‌ಗಿಂತ ಹಾಸ್ಯದ ಪಾಲೇ ಹೆಚ್ಚು. ದೆವ್ವಗಳೆಂದ ಮೇಲೆ ಭಯ ಸಹಜ. ಆದರೆ, ಇಲ್ಲಿ ತೆರೆ ಮೇಲೆ ಇರೋರಿಗೂ, ತೆರೆ ಮುಂದೆ ಇರೋರಿಗೂ ಆತ್ಮಗಳು ಉಣಬಡಿಸುವ ಹಾಸ್ಯದೌತಣದ ಅನುಭವ ಅನನ್ಯ. ನಿರ್ದೇಶಕರು ಸಾಕಷ್ಟು ರಿಸ್ಕ್ನಲ್ಲಿಯೇ ಕೆಲಸ ಮಾಡಿದ್ದಾರೆ ಎಂಬುದಕ್ಕೆ ತೆರೆಮೇಲಿನ “ಸಾಹಸ’ ಗೊತ್ತಾಗುತ್ತೆ. ಅದೆಷ್ಟೇ ರಿಸ್ಕ್ ತಗೊಂಡಿದ್ದರೂ, ನೋಡುಗರ ಮೊಗದಲ್ಲಿ ಮೂಡುವ ನಗುವಿನ ಮುಂದೆ ಏನೂ ಇಲ್ಲ.
Related Articles
Advertisement
ತನ್ನ ಹೆತ್ತವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದುಬೈನಲ್ಲಿ ವಾಸಿಸುವ ಮಗ ಇಂಡಿಯಾಗೆ ಬಂದು ತನ್ನ ಮನೆ ಮಾರಾಟ ಮಾಡಲು ಮುಂದಾಗುತ್ತಾನೆ. ಅಲ್ಲೊಂದಷ್ಟು ಕಾಣದ ಕೈಗಳು, ಮನೆಯಲ್ಲಿ ದೆವ್ವಗಳಿವೆ ಎಂಬ ಸುದ್ದಿ ಹಬ್ಬಿಸಿ, 5 ಕೋಟಿ ಬೆಲೆ ಬಾಳುವ ಮನೆಯನ್ನು 1 ಕೋಟಿಗೆ ಫಿಕ್ಸ್ ಮಾಡುತ್ತವೆ. ಆಗ ಅಲ್ಲಿ ಮಜವಾದ ಡ್ರಾಮ ಶುರುವಾಗುತ್ತೆ. ಅದೇ ಚಿತ್ರದ ಸಸ್ಪೆನ್ಸ್. ಆ ಮನೆಯಲ್ಲಿ ನಿಜಕ್ಕೂ ದೆವ್ವಗಳಿವೆಯಾ?
ಇದ್ದರೂ ಆ ಆತ್ಮಗಳು ಯಾಕೆ ಅಲ್ಲಿವೆ, ಆ ಮನೆಗೆ ಹೋದವರನ್ನು ಅವು ಬೆಚ್ಚಿಬೀಳಿಸುತ್ತವೆಯಾ, ಇಲ್ಲವೋ ಎಂಬ ಕುತೂಹಲವಿದ್ದರೆ, ಚಿತ್ರ ನೋಡಬೇಕು. ಸಾಧುಕೋಕಿಲ ಅವರು ಎಂದಿಗಿಂತಲೂ ತುಸು ಹೆಚ್ಚಾಗಿಯೇ ನಗಿಸುವ ಮೂಲಕ ಇಷ್ಟವಾಗುತ್ತಾರೆ. ಚಿಕ್ಕಣ್ಣ ಕೂಡ ವಿಶೇಷ ಗಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ರವಿಶಂಕರ್‌ಗೌಡ ಅವರ ಪಾತ್ರದಲ್ಲಿ ಒಂದು ರೀತಿಯ ಮಜ ಅಡಗಿದ್ದರೆ, “ಕುರಿ’ ಪ್ರತಾಪ್ ಪಾತ್ರದಲ್ಲಿ ಹೊಸತನ ತುಂಬಿದೆ. ಇವರಿಬ್ಬರೂ ನಗಿಸುವಲ್ಲಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ.
ಹಾಗಾಗಿ, ಆ ಮನೆಯ ಆಕರ್ಷಣೆ ಇವರೆನ್ನಬಹುದು. ಉಳಿದಂತೆ ಆತ್ಮಗಳಾಗಿ ಶಿವರಾಮ್, ಶ್ರುತಿಹರಿಹರನ್, ಗಿರಿ ಮತ್ತು ಬೇಬಿ ಅಶ್ವಿತ ಇಷ್ಟವಾಗುತ್ತಾರೆ. ರಾಜೇಶ್ ನಟರಂಗ ಯಾರೂ ಊಹಿಸದ ಪಾತ್ರ ನಿರ್ವಹಿಸಿ ಸೈ ಎನಿಸಿಕೊಳ್ಳುತ್ತಾರೆ. “ನೀನಾಸಂ’ ಅಶ್ವತ್ಥ್ ಸೇರಿದಂತೆ ತೆರೆ ಮೇಲೆ ಮೂಡುವ ಪ್ರತಿ ಪಾತ್ರಕ್ಕೂ ವಿಶೇಷತೆ ಇದೆ. ಹಾರರ್ ಕಾಮಿಡಿ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮತ್ತು ಹಾಡು ಜೀವಾಳವಾಗಿರಬೇಕು. ಅದನ್ನು ಅಭಿಮನ್ ರಾಯ್ ನೀಗಿಸಿದ್ದಾರೆ. ಸುರೇಶ್ ಬಾಬು ಅವರ ಛಾಯಾಗ್ರಹಣ ಕೂಡ ನಗುವಿನ ಸೌಂದರ್ಯ ಹೆಚ್ಚಿಸಿದೆ.
ಚಿತ್ರ: ಮನೆ ಮಾರಾಟಕ್ಕಿದೆನಿರ್ಮಾಣ: ಎಸ್.ವಿ.ಬಾಬು
ನಿರ್ದೇಶನ: ಮಂಜು ಸ್ವರಾಜ್
ತಾರಾಗಣ: ಸಾಧುಕೋಕಿಲ, ಚಿಕ್ಕಣ್ಣ, ರವಿಶಂಕರ್‌ಗೌಡ, ಕುರಿ ಪ್ರತಾಪ್, ರಾಜೇಶ್, ಶಿವರಾಂ, ಶ್ರುತಿಹರಿಹರನ್, ಗಿರಿ ಇತರರು. * ವಿಜಯ್ ಭರಮಸಾಗರ