ನವದೆಹಲಿ: ಏಕದಿನ, ಟಿ20 ಕ್ರಿಕೆಟ್ ವಿಶ್ವಕಪ್ ಟ್ರೋಫಿ ಜಯಿಸುವಂತೆ ಮಾಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವ.
ಧೋನಿ ದಾಖಲೆ ಲೆಕ್ಕವಿಲ್ಲದಷ್ಟು. ಅವರು ಮುಟ್ಟಿದ್ದೆಲ್ಲ ಚಿನ್ನ. ಕ್ರೀಡಾಂಗಣವಾಗಿರಲಿ ಅಥವಾ ಕ್ರೀಡಾಂಗಣದ ಹೊರಗಾಗಿರಲಿ ಧೋನಿಯ ತಾಳ್ಮೆ ಯುವ ಪೀಳಿಗೆಗೆ ಮಾದರಿ. ಬೌಂಡರಿ, ಸಿಕ್ಸರ್‌ಗಳಿಂದ ಅಬ್ಬರಿಸುವ ವೀರ ಬ್ಯಾಟ್ಸ್‌ಮನ್ ಧೋನಿಗೆ ಜಗತ್ತಿನೆಲ್ಲೆಡೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳಿರುವರುವುದು ಇದೇ ಕಾರಣಕ್ಕೆ ಎಂದರೆ ಅತಿಶಯೋಕ್ತಿಯಾಗಲಾರದು.
ಧೋನಿಯ ಅಪ್ರತಿಮ ಆಟ ಕಂಡ ಭಾರತೀಯ ಸೈನ್ಯ ಅವರಿಗೆ ಗೌರವ ಲೆಫ್ಟಿನೆಂಟ್ ಹುದ್ದೆ ನೀಡಿದೆ. ದೇಶಭಕ್ತಿ ವಿಷಯದಲ್ಲಿ ಧೋನಿ ಮಾತ್ರವಲ್ಲ ಇಡೀ ಭಾರತೀಯ ಕ್ರಿಕೆಟಿಗರ ಸಮರ್ಪಣಾ ಭಾವ ಎಲ್ಲರು ಮೆಚ್ಚುವಂತದ್ದೇ ಆಗಿದೆ. ಈ ನಡುವೆ ವಿರಾಟ್ ಕೊಹ್ಲಿ ಮಾಜಿ ನಾಯಕ ಧೋನಿಗಿಂತ ಹೆಚ್ಚು ದೇಶಾಭಿಮಾನ ಹೊಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಕಾರಣ ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ? ಯಾವ ವಿಷಯಕ್ಕೆ ಇಂತಹದೊಂದು ಪ್ರಶ್ನೆ ಎದ್ದಿದೆ? ಏನಿದು ವಿಷಯ? ಅನ್ನುವುದನ್ನು ತಿಳಿಯಬೇಕಾದ ಕುತೂಹಲ ನಿಮಗಿದ್ದರೆ ವರದಿಯನ್ನೊಮ್ಮೆ ಓದಿ.
ಕೊಹ್ಲಿಯಂತೆ ಧೋನಿ ಇಲ್ಲದಿರುವುದು ಏಕೆ?: ಬ್ಯಾಟಿಂಗ್ ಮಾಡಲು ಬರುವಾಗ ತಲೆಗೆ ಹೆಲ್ಮೆಟ್ ತೊಟ್ಟು ಬರುವುದನ್ನು ಎಲ್ಲರೂ ನೋಡಿದ್ದೀರಿ. ಹೀಗೆ ಬರುವಾಗ ವಿರಾಟ್ ಕೊಹ್ಲಿ ಹೆಲ್ಮೆಟ್ ಮುಂಭಾಗಲ್ಲಿ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಚಿಹ್ನೆ ಹಾಕಿಸಿಕೊಂಡಿದ್ದಾರೆ. ಅದರಿಂದ ಸ್ವಲ್ಪ ಮೇಲುಗಡೆಗೆ ಭಾರತದ ರಾಷ್ಟ್ರಧ್ವಜದ ಚಿಹ್ನೆಯಿದೆ. ದೇಶದ ಬಗ್ಗೆ ಅಭಿಮಾನದಿಂದ ಅದನ್ನು ವಿರಾಟ್ ಕೊಹ್ಲಿ ಹಾಕಿಸಿಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಹಲವು ಆಟಗಾರರು ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜದ ಚಿಹ್ನೆಯನ್ನು ಹಾಕಿಸಿಕೊಂಡಿದ್ದರು. ಆದರೆ ಧೋನಿ ಬಿಸಿಸಿಐ ಅಧಿಕೃತ ಚಿಹ್ನೆಯನ್ನು ಮಾತ್ರ ಹಾಕಿಸಿಕೊಂಡಿದ್ದಾರೆ. ರಾಷ್ಟ್ರಧ್ವಜದ ಚಿಹ್ನೆಯನ್ನು ಹಾಕಿಸಿಕೊಂಡಿಲ್ಲ. ಈ ಬಗ್ಗೆ ಚರ್ಚೆಯಾದಾಗ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಏನಿದು ಕುತೂಹಲಕಾರಿ ಅಂಶ?: ಧೋನಿ ವಿಕೆಟ್ ಕೀಪರ್ ಆಗಿರೋದರಿಂದ ಹೆಲ್ಮೆಟ್ ಧರಿಸೋದು ಅನಿವಾರ್ಯ. ಸ್ಪಿನ್ ಬೌಲಿಂಗ್ ಇದ್ದಾಗಲೆಲ್ಲ ಹೆಲ್ಮೆಟ್ ತೆಗೆದು ಅಲ್ಲೆ ನೆಲದ ಮೇಲೆ ಹಾಕಿ ಟೋಪಿ ಧರಿಸುತ್ತಾರೆ. ಹೆಲ್ಮೆಟ್ ಮೇಲೆ ರಾಷ್ಟ್ರ ಧ್ವಜ ಅಳವಡಿಸಿ ನೆಲಕ್ಕೆ ಹಾಕಿದಾಗ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗುತ್ತದೆ. ಇದೇ ಕಾರಣಕ್ಕೆ ಧೋನಿ ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜದ ಚಿಹ್ನೆ ಬಳಸಿಕೊಂಡಿಲ್ಲ ಎನ್ನಲಾಗಿದೆ.