Advertisement
ರಿಕ್ಷಾ ಚಾಲಕನಿಗೆ ಆತ ಬಾಡಿಗೆಯ 960 ರೂ. ವಂಚಿಸಿದ್ದು, ಅವರು ಬರಿಗೈಯಲ್ಲಿ ಸುರತ್ಕಲ್‌ನಿಂದ ಸಂಜೆ ಮಂಗಳೂರಿಗೆ ವಾಪಸು ಬಂದಿದ್ದಾರೆ. ನಗರದ ಲೇಡಿಹಿಲ್‌ನ ರಿಕ್ಷಾಪಾರ್ಕ್‌ಗೆ ಸೋಮವಾರ ಸುಮಾರು ಮಧ್ಯಾಹ್ನ 2.30ರ ವೇಳೆಗೆ ಸುಮಾರು 35 ವರ್ಷದ ಯುವಕನೋರ್ವ ಬಂದು ರಿಕ್ಷಾದಲ್ಲಿ ಕುಳಿತು ಸುರತ್ಕಲ್‌ವರಗೆ ಹೋಗಿ ಬರಲಿಕ್ಕಿದೆ ಎಂದು ಹೇಳಿದ. ಅದರಂತೆ ಚಾಲಕ ರಿಕ್ಷಾವನ್ನು ಸುರತ್ಕಲ್ ಕಡೆಗೆ ಚಲಾಯಿಸಿದರು. ಬೈಕಂಪಾಡಿ ತಲುಪಿದಾಗ ಅಲ್ಲಿ ರಿಕ್ಷಾ ನಿಲ್ಲಿಸುವಂತೆ ಹೇಳಿ ಹೊಟೇಲೊಂದಕ್ಕೆ ಆತ ತೆರಳಿದ. ಅಲ್ಲಿ 2,000 ರೂ. ನೋಟು ಚಿಲ್ಲರೆ ಮಾಡಿಸಿ ಬಳಿಕ ಸುರತ್ಕಲ್‌ಗೆ ಹೋಗುವಂತೆ ಹೇಳಿದ . ಸುರತ್ಕಲ್‌ನಲ್ಲಿ ನನಗೆ ಕೃಷ್ಣಾಪುರಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಅಲ್ಲಿಗೆ ತೆರಳುವಂತೆ ಸೂಚಿಸಿದ. ಅಲ್ಲಿಂದ ಜೋಕಟ್ಟೆಗೆ ಹೋಗಿದ್ದು, ಅಲ್ಲಿ ರಿಕ್ಷಾ ನಿಲ್ಲಿಸಿ ಎರಡು ಅಂಗಡಿಗಳಿಗೆ ತೆರಳಿ 10 ನಿಮಿಷಗಳ ಬಳಿಕ ವಾಪಸು ಬಂದಿದ್ದು ಮರಳಿ ಸುರತ್ಕಲ್‌ಗಳಿಗೆ ಹೋಗುವಂತೆ ಹೇಳಿದ. ರಿಕ್ಷಾ ಚಾಲಕ ಸುರತ್ಕಲ್‌ಗೆ ಬಂದಾಗ ಮೀನು ಮಾರುಕಟ್ಟೆ ಬಳಿ ರಿಕ್ಷಾ ನಿಲ್ಲಿಸುವಂತೆ ತಿಳಿಸಿದ.
ಸುರತ್ಕಲ್‌ನಲ್ಲಿ ಅಂಗಡಿಯೊಂದರ ಹೆಸರು ಹೇಳಿ ಅಲ್ಲಿಗೆ ಹೋಗಿ ಕೆಲವು ವಸ್ತುಗಳನ್ನು ಖರೀದಿಸಲಿಕ್ಕಿದೆ. “ಈರ್ ಉಂತುಲೆ ಇತ್ತೆ ಬರ್ಪೆ’ (ನೀವು ನಿಲ್ಲಿ… ಈಗ ಬರುತ್ತೇನೆ) ಎಂದು ಹೇಳಿ ಹೋದ. ಅಂಗಡಿಗೆ ಹೋಗಿ ಬಹಳಷ್ಟು ವೇಳೆಯಾದರೂ ಆತ ಹಿಂದಿರುಗಿ ಬರದಿರುವುದನ್ನು ಕಂಡು ರಿಕ್ಷಾ ಚಾಲಕ ಆತ ಹೇಳಿದ ಹೆಸರಿನ ಅಂಗಡಿಗೆ ಹೋಗಿ ವ್ಯಕ್ತಿಯ ಚಹರೆ ತಿಳಿಸಿ ವಿಚಾರಿಸಿದರು. ಅಂತಹ ವ್ಯಕ್ತಿ ಇಲ್ಲಿಗೆ ಬಂದಿಲ್ಲ ಎಂದು ಅಂಗಡಿಯವರು ತಿಳಿಸಿದಾಗ ಗೊಂದಲಕ್ಕೀಡಾದ ಅವರು ಹೊರಗಡೆ ಬಂದು ಮತ್ತೆ ಆತನಿಗಾಗಿ ಕಾಯುತ್ತಾ ನಿಂತರು.
ರಿಕ್ಷಾ ಚಾಲಕ ಮೀನುಮಾರುಕಟ್ಟೆ ಬಳಿ ಬಹಳ ಹೊತ್ತಿನಿಂದ ಕಾಯುತ್ತಾ ನಿಂತಿದ್ದಾಗ ಅಲ್ಲಿ ಬಂದ ಮೂವರು ಮೀನುಗಾರ ಮಹಿಳೆಯರು ಅವರಲ್ಲಿ ನೀವು ಯಾರಿಗಾಗಿ ಕಾಯುತ್ತಿರುವುದು ಎಂದು ವಿಚಾರಿಸಿದರು. ಚಾಲಕ ಅವರಲ್ಲಿ ವಿಷಯ ತಿಳಿಸಿದಾಗ ಇದೇ ಚಹರೆಯ ವ್ಯಕ್ತಿ ಈ ಕೆಲವು ಸಮಯದ ಹಿಂದೆ ಇದೇ ರೀತಿಯಾಗಿ ಇಲ್ಲಿನ ಹಿರಿಯ ಮೀನುಗಾರ ಮಹಿಳೆಯೋರ್ವರಿಂದ 500 ರೂಪಾಯಿ ಮೀನು ಖರೀದಿಸಿ ಈಗ ಹಣ ತರುತ್ತೇನೆ ಎಂದು ಹೇಳಿ ಪರಾರಿಯಾಗಿದ್ದ ಎಂಬ ವಿಚಾರವನ್ನು ತಿಳಿಸಿದರು. ರಿಕ್ಷಾ ಚಾಲಕನಿಗೆ ಆಗ ತಾನು ಮೋಸಹೋಗಿರುವುದು ಅರಿವಿಗೆ ಬಂತು.
Related Articles
ಯುವಕ ಬಿಳಿ ಪ್ಯಾಂಟ್ ಹಾಗೂ ಬಿಳಿ ಅಂಗಿಧರಿಸಿದ್ದು ಎಣ್ಣೆಕಪ್ಪು ಶರೀರ ಹಾಗೂ ಗಡ್ಡ ಹೊಂದಿದ್ದ. ಕುತ್ತಿಗೆಯಲ್ಲಿ ದಪ್ಪದ ಚಿನ್ನದ ಸರದಂತೆ ಕಾಣುವ ಸರವನ್ನು ಧರಿಸಿದ್ದನು. ತಾನು ನಗರದಲ್ಲಿ ಫೈನಾನ್ಸ್‌ವೊಂದನ್ನು ಹೊಂದಿರುವುದಾಗಿ ತಿಳಿಸಿದ್ದ ಎಂದು ಚಾಲಕ ವಿವರಿಸಿದ್ದಾರೆ. ಈತ ರಿಕ್ಷಾದಲ್ಲಿ ಹೋಗುವಾಗ ಮಾರ್ಗ ಮಧ್ಯದಲ್ಲಿ ಒಂದೆರಡು ಬಾರಿ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದ. ಆದರೆ ಇದನ್ನು ನಾನು ನಿರಾಕರಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ವಂಚನೆ ಬಗ್ಗೆ ರಿಕ್ಷಾ ಚಾಲಕ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement