ಹಾವೇರಿ: ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡದಿದ್ದರೆ ಸಿದ್ದರಾಮಯ್ಯಗೆ ತಿಂದಿರುವ ಅನ್ನ ಕರಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಅವರಿಗೆ ಬುದ್ಧಿ ಬರಲಿಲ್ಲ.
ಬಿಜೆಪಿಗೆ ಒಂದೇ ಒಂದು ಎಂಪಿ ಸೀಟು ಬರಲ್ಲ ಅಂದರು, 25 ಸ್ಥಾನ ಬಂದವು. ಉಪಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚಿನ ಸೀಟು ಬಂದವು. ಈಗಲೂ ಅವರಿಗೆ ಬುದ್ಧಿ ಬರಲಿಲ್ಲ. ಎಷ್ಟು ಸಲ ಸೋತ ಮೇಲೆ ಬುದ್ಧಿ ಬರುತ್ತದೆ ಎನ್ನುವುದನ್ನು ಸಿದ್ದರಾಮಯ್ಯವರೇ ಹೇಳಬೇಕು.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆಗೆ ಸಂಬಂಧಿಸಿ ಗೃಹ ಸಚಿವ ಸೇರಿ ಯಾರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಜನರು ನಮ್ಮ ಜತೆಗಿದ್ದಾರೆ. ಇದನ್ನು ಕಾಂಗ್ರೆಸ್-ಜೆಡಿಎಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗೋ ರಾಜಕಾರಣದಲ್ಲಿ ಬದುಕಬೇಕು ಎಂದು ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಇಂದು ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಮನಮೋಹನ ಸಿಂಗ್ ಇದ್ದಾಗಲೇ ಪೌರತ್ವ ತಿದ್ದುಪಡಿ ಬಗ್ಗೆ ಹೇಳಿದ್ದರು. ಆದರೆ, ಕಾಂಗ್ರೆಸ್‌ನವರೇ ಈಗ ದೇಶದಲ್ಲಿ ಹಿಂದೂ-ಮುಸ್ಲಿಂ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಋಣ ತೀರಿಸಬೇಕಿದೆ: ಶಾಸಕರಾದದವರು ಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುವುದು ತಪ್ಪಲ್ಲ. ರಾಜೀನಾಮೆ ಕೊಟ್ಟು ನಮಗೆ ಬೆಂಬಲ ಸೂಚಿಸಿ ಬಂದವರ ಋಣ ತೀರಿಸಬೇಕಾಗಿದೆ. ಎಲ್ಲ ಜಾತಿಯ ಸ್ವಾಮೀಜಿಗಳೂ ಅವರವರ ಜಾತಿಯವರು ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಬಿಜೆಪಿ ಸರ್ಕಾರದಲ್ಲಿ ಏನೇನು ಮಾಡಬೇಕೋ ಅದೆಲ್ಲಾ ನಡೆಯುತ್ತದೆ ಎಂದರು.