ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅಂಗೀಕಾರ ನೀಡಿದೆ. ಮೊದಲಿಗೆ ಈ ಮಸೂದೆ ಮೆಲಿನ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಗಿತ್ತು. ಕೊನೆಯಲ್ಲಿ ಮಸೂದೆಯ ಪರವಾಗಿ 147 ಮತಗಳು ಬಿದ್ದರೆ ವಿರುದ್ಧವಾಗಿ 42 ಮತಗಳು ಬಿದ್ದವು.
ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಯನ್ನು ಉಗ್ರಗಾಮಿ ಎಂದು ಘೋಷಿಸುವ ಅಧಿಕಾರವನ್ನು ಈ ಮಸೂದೆಗೆ ತಿದ್ದುಪಡಿ ಮೂಲಕ ಸೇರಿಸಲಾಗಿದೆ. ಈ ತಿದ್ದುಪಡಿಯನ್ನು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಇಂದು ರಾಜ್ಯಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಉಗ್ರಗಾಮಿ ಎಂಬ ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ನಿಷೇಧ ಹೇರಿದರೆ ಅಂತಹ ವ್ಯಕ್ತಿಗಳು ಮುಂದೆ ತಮ್ಮದೇ ಆಗಿರುವ ಉಗ್ರ ಸಂಘಟನೆಗಳನ್ನು ಕಟ್ಟಿ ಬೆಳೆಸುತ್ತಾರೆ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದರು.
ಹಾಗೆಯೇ ಉಗ್ರಗಾಮಿಗಳಿಗೆ ಯಾವುದೇ ಧರ್ಮ ಇರುವುದಿಲ್ಲ ಮತ್ತು ಕಾಲಕ್ಕೆ ಸರಿಯಾಗಿ ಕಾನೂನುಗಳು ತಿದ್ದುಪಡಿಯಾಗುತ್ತಿರಬೇಕು ಎಂಬ ಅಭಿಪ್ರಾಯವನ್ನು ಗೃಹ ಸಚಿವರು ತಮ್ಮ ಮಾತಿನ ವೇಳೆ ಉಲ್ಲೇಖಿಸಿದರು.
ಈ ಮಸೂದೆಯು ಎರಡು ವಿಭಿನ್ನ ಚಟುವಟಿಕೆಗಳ ಮೇಲೆ ಕಣ್ಗಾವಲನ್ನು ಇರಿಸುತ್ತದೆ. ಮೊದಲನೆಯದಾಗಿ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಎರಡನೆಯದ್ದು ಉಗ್ರ ಚಟುವಟಿಕೆಗಳು. ಇವೆರಡೂ ಒಂದೇ ಅಲ್ಲ, ಇವುಗಳನ್ನು ಪ್ರತ್ಯೇಕವಾಗಿಯೇ ವ್ಯಾಖ್ಯಾನಿಸಬೇಕಾಗುತ್ತದೆ.
ಈ ತಿದ್ದುಪಡಿಗೂ ಮುಂಚೆ, ವ್ಯಕ್ತಿಗಳೂ ಸಹ ಈ ಕಾಯ್ದೆಯ ಅಡಿಯಲ್ಲಿ ಬರುತ್ತಿದ್ದರು ಮತ್ತು ವ್ಯಕ್ತಿಗಳು ನಡೆಸುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಈ ಕಾನೂನಿನ ಅಡಿಯಲ್ಲೇ ಶಿಕ್ಷಯಾಗುತ್ತಿತ್ತು. ಹಾಗಿದ್ದರೂ ಈ ಮಸೂದೆಗೆ ಇದೀಗ ತಿದ್ದುಪಡಿ ತಂದಿರುವ ಅಗತ್ಯವಾದರೂ ಏನೆಂದು ತಿಳಿಯುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಚಿದಂಬರಂ ಅವರು ಮಸೂದೆಯ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಈ ತಿದ್ದುಪಡಿಯ ಔಚಿತ್ಯವನ್ನು ಪ್ರಶ್ನಿಸಿದರು.