Advertisement

ಅಪರಿಚಿತ ವಾಹನ ಡಿಕ್ಕಿ: ಮೂವರ ಸಾವು

08:28 PM Mar 05, 2020 | Lakshmi GovindaRaj |

ಶ್ರೀನಿವಾಸಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟು, ಮತ್ತೂಬ್ಬ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಹೊಗಳಗೆರೆ ಸಮೀಪದ ಮಾವು ಅಭಿವೃದ್ಧಿ ಸಂಶೋಧನಾ ತೋಟಗಾರಿಕೆ ಕ್ಷೇತ್ರದ ಬಳಿ ಗುರುವಾರ ಮುಂಜಾನೆ ನಡೆದಿದೆ.

Advertisement

ತಾಲೂಕಿನ ಯಲ್ದೂರು ಹೋಬಳಿ ವ್ಯಾಪ್ತಿಯ ಗಾಂಧಿನಗರದ ಯಲ್ಲಯ್ಯ (21), ಯಶವಂತ (22), ವೆಂಕಟೇಶಪ್ಪ (48) ಮೃತ ದುರ್ದೈವಿಗಳು. ಮೋಹನ್‌ಕುಮಾರ್‌ (22)ಗೆ ತಲೆ, ಮೈ, ಕಾಲಿಗೆ ತೀವ್ರ ಪೆಟ್ಟಾಗಿದ್ದು, ಬೆಂಗಳೂರು ನಿಮ್ಹಾನ್ಸ್‌ಗೆ ದಾಖಲಾಗಿದೆ.

ಬೆಂಗಳೂರಿನಲ್ಲಿ ಕಲ್ಲು ಹೊಡೆಯುವ, ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ಇವರು, ಎಂದಿನಂತೆ ಮುಂಜಾನೆಯೇ ಸ್ವಗ್ರಾಮ ಗಾಂಧಿ ನಗರದಿಂದ ದ್ವಿಚಕ್ರ ವಾಹನದಲ್ಲಿ ಹೊಗಳಗೆರೆ ಮೂಲಕ ಶ್ರೀನಿವಾಸಪುರಕ್ಕೆ ಬಂದು ರೈಲಿನಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋಗಲು ಬರುತ್ತಿರುವಾಗ, ಮುಂಜಾನೆ ಮಂಜು ಕವಿದ ವಾತಾವರಣ ಇದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದೆ. ಮೃತಪಟ್ಟ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಘಟನೆಯನ್ನು ನೋಡಿದರ ಕರುಳು ಕಿತ್ತುಬರುವಂತಿತ್ತು.

ಸಂಬಂಧಿಕರ ರೋದನ: ಅದೇ ದಾರಿಯಲ್ಲಿ ಬೆಂಗಳೂರಿಗೆ ಕೆಲಸಕ್ಕೆಂದು ಬರುತ್ತಿದ್ದವರು ಈ ಘಟನೆಯನ್ನು ಕಂಡು ಪೊಲೀಸ್‌ ಠಾಣೆಗೆ ಹಾಗೂ ಮೃತಪಟ್ಟವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸುದ್ದಿ ತಿಳಿದು ಸಂಬಂಧಿಕರು, ಸುತ್ತಮುತ್ತಲ ಗ್ರಾಮಗಳ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಕುಟುಂಬ ಸದಸ್ಯನೊಬ್ಬನ ಕಳೆದುಕೊಂಡ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು.

ಪೊಲೀಸರ ಭೇಟಿ: ಅಪಘಾತ ಸ್ಥಳಕ್ಕೆ ಎಎಸ್ಪಿ ಜಾಹ್ನವಿ, ಡಿವೈಎಸ್ಪಿ ಬಿ.ಎಂ.ನಾರಾಯಣಸ್ವಾಮಿ, ಸಿಪಿಐ ರಾಘವೇಂದ್ರ ಪ್ರಕಾಶ್‌ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ತರುವಾಯ ಮೃತದೇಹಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರು ಬೋವಿ ಸಮುದಾಯಕ್ಕೆ ಸೇರಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದ ಸಮುದಾಯದ ಜನರುಅಪಾರ ಸಂಖ್ಯೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಸೇರಿದ್ದರು.

Advertisement

ಡಿಕ್ಕಿ ಹೊಡೆದದ್ದು ಬೊಲೆರೋ ವಾಹನ: ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ಕೂ ಮಂದಿ ಶ್ರೀನಿವಾಸಪುರಕ್ಕೆ ಬಂದು 3 ಮಂದಿಯನ್ನು ರೈಲಿಗೆ ಕಳಿಸಿ ಮತ್ತೂಬ್ಬರು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುವುದು ಎಂಬ ಆಲೋಚನೆಯಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಅಪಘಾತವಾಗಿದೆ. ಆದರೆ, ಮೃತಪಟ್ಟ ಸಂಬಂಧಿಕರು ಇಬ್ಬರು ದ್ವಿಚಕ್ರ ವಾಹನದಲ್ಲಿ ಶ್ರೀನಿವಾಸಪುರಕ್ಕೆ ಬರುತ್ತಿದ್ದರು. ಆದರೆ, ಹಣ ತೆಗೆದುಕೊಂಡು ಹೋಗುವುದನ್ನು ಮರೆತಿದ್ದು, ಗ್ರಾಮದಲ್ಲಿದ್ದ ಸ್ನೇಹಿತರಿಗೆ ಮೊಬೈಲ್‌ ಕರೆ ಮಾಡಿ ಹಣ ತೆಗೆದುಕೊಂಡು ಬರುವಂತೆ ಹೇಳಿದ್ದರು.

ಅದೇ ರೀತಿ ಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದು ಹಣ ಕೊಟ್ಟು, ಅಲ್ಲೇ ಮಾತನಾಡುತ್ತಿದ್ದಾಗ ಈ ಅಪಘಾತವಾಗಿದೆ ಎಂದು ಹೇಳಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿಗಳು ಎಷ್ಟು ಗಂಟೆಯಲ್ಲಿ ಗ್ರಾಮಕ್ಕೆ ಫೋನಾಯಿಸಿದ್ದರೂ ಅದನ್ನು ಕೊಡಿ ಎಂದಾಗ ತಬ್ಬಿಬ್ಟಾದಾಗ ನಿಜಾಂಶ ಬಾಯಿಬಿಟ್ಟಿದ್ದಾರೆ. ಕೆಲಸ ಸ್ಥಳೀಯರು ಹೇಳುವ ಪ್ರಕಾರ ಈ ಘಟನೆ ನಡೆದ ಸಮಯದಲ್ಲಿ ಬೊಲೆರೊ ವಾಹನ ಆ ರಸ್ತೆಯಲ್ಲಿ ಹೋಗಿದ್ದು, ಅದೇ ಡಿಕ್ಕಿ ಹೊಡಿದೆ ಎಂದು ಹೇಳುತ್ತಿದ್ದಾರೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ: ಬೆಂಗಳೂರು ನಿಮ್ಹಾನ್ಸ್‌ನಲ್ಲಿ ದಾಖಲಾಗಿರುವ ಮೋಹನ್‌ಕುಮಾರ್‌ ಕೋಮಾ ಸ್ಥಿತಿಯಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ ಹದಿಹರೆಯದ ಯುವಕರು, ಈಗ ಇಹಲೋಕ ತ್ಯಜಿಸಿದ್ದು, ಇವರನ್ನೇ ನಂಬಿಕೊಂಡಿದ್ದವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next