Advertisement
ನಮ್ಮೊಂದಿಗೆ ಸ್ವಲ್ಪ ಸಲುಗೆ ಬೆಳೆದ ಮೇಲಷ್ಟೇ ಅವಳ ಅಮೆರಿಕ ವಾಸದ ನಿಜ ಪರಿಸ್ಥಿತಿಯ ಅರಿವಾದದ್ದು. ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಅಮೆರಿಕದ ಒಳಗೆ ನುಸುಳಿ ಬಂದ ಅಥವಾ ತಾತ್ಕಾಲಿಕ ಪ್ರವಾಸೀ ಪರವಾನಿಗೆಯಲ್ಲಿ ಬಂದು ಇಲ್ಲಿಯ ಪ್ರಜೆಗಳೊಂದಿಗೆ ಲೀನವಾಗಿ ಹೋದ ಲಕ್ಷಾಂತರ ಜನರಲ್ಲಿ ಮಧುಬೆನ್ ಕೂಡ ಒಬ್ಬಳು. ‘ಆಂಟೀ…’ ಎಂದು ಏರು ಸ್ವರದಲ್ಲಿ ಕರೆಯುತ್ತ, ‘ಕೇಮ್ ಚೋ ಆಂಟೀ… ಇಂಡಿಯಾಸೆ ಕಭೀ ಆಯೆ’ ಎಂದು ಗುಜರಾತಿ ಮಿಶ್ರಿತ ಹಿಂದಿಯಲ್ಲಿ ಸಂಭಾಷಿಸುತ್ತಿದ್ದ ಮಧುಬೆನ್ನಳಿಗೆ- ಹದಿನೈದು ವರ್ಷಗಳಿಗೂ ಮಿಕ್ಕಿ ಅಮೆರಿಕದಲ್ಲಿದ್ದರೂ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ.
Related Articles
Advertisement
ಭಾರತೀಯ ಕಿರಾಣಿ ಅಂಗಡಿಯೊಂದರಲ್ಲಿ ಸಾಮಾನು ಎತ್ತಿಡುವ ಕೆಲಸಕ್ಕೆ ಹೋಗುತ್ತಿದ್ದ ಅವಳ ಗಂಡನಿಗೋ ಸದಾ ಅಸೌಖ್ಯ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದರೆ ‘ಜ್ಞಾತ’ವಾಗಿ ಬಿಡುವ ಅಪಾಯದಿಂದಾಗಿ ಶುಶ್ರೂಷೆಯೇ ಆತಂಕವನ್ನು ಸೃಷ್ಟಿಸುವ ವಿಚಿತ್ರ ಸನ್ನಿವೇಶದಲ್ಲಿದ್ದ. ಇಬ್ಬರು ಮಕ್ಕಳು ಗುಜರಾತಿನ ಅಹ್ಮದಾಬಾದಿನ ಹತ್ತಿರದ ಊರಿನಲ್ಲಿ ಕೂಡುಕುಟುಂಬದೊಂದಿಗೆ ಬೆಳೆಯುತ್ತಿದ್ದರು. ಇಲ್ಲಿ ಅಮೆರಿಕದಲ್ಲಿ ಮೈಮುರಿದು ಸಂಪಾದಿಸಿದ ಹಣದ ಸಿಂಹಪಾಲು ಭಾರತಕ್ಕೆ ಹೋಗುತ್ತಿತ್ತು. ತಾನು ಕಳಿಸುವ ಹಣದಿಂದಾಗಿ ಮಕ್ಕಳ ಬದುಕು ಸುಖವಾಗಿರುವುದನ್ನು ಕಲ್ಪಿಸಿಕೊಂಡು ಅವಳಿಲ್ಲಿ ಖುಶಿಪಡುತ್ತಿರುತ್ತಾಳೆ. ವಿಡಿಯೋ ಕಾಲ್ ಬಂದ ಹೊಸತರಲ್ಲಿ ಒಮ್ಮೆ ಮಕ್ಕಳೊಡನೆ ಮಾತನಾಡುವ ಹಂಬಲ ವ್ಯಕ್ತಪಡಿಸಿದ್ದಳು. ಮೊದಲ ಸಲ ಫೋನ್ ಮಾಡಿದಾಗ 18-20 ವರ್ಷದ, ಬೆಳೆದು ನಿಂತ ಮಕ್ಕಳನ್ನು ನೋಡಿ, ಅವಳ ಬಾಯಿ ಕಟ್ಟಿ , ಮುಜುಗರದಿಂದ ಹೆಚ್ಚು ಮಾತನಾಡಲಾಗಿರಲಿಲ್ಲ.
ಈಗ ನಾಲ್ಕು ವರ್ಷಗಳ ಕೆಳಗೆ ಮಗಳ ಮದುವೆಯಾದುದನ್ನು ಹೇಳುವಾಗ ಹರ್ಷದಿಂದ ಅವಳ ಮುಖ ಅರಳಿತ್ತು. ಮದುವೆಗೆ ಹೋಗಲಿಕ್ಕಾಗದ ಬೇಸರವಿದ್ದರೂ, ಅದಕ್ಕೋಸ್ಕರ ಎರಡು ವರ್ಷಗಳಿಂದ ಹೇಗೆ ಹಣ ಕೂಡಿಸಿದೆ, ಅದರಿಂದಾಗಿ ಮದುವೆ ಎಷ್ಟು ಭರ್ಜರಿಯಾಗಿ ಜರಗಿತು ಎಂದು ಹೆಮ್ಮೆಯಿಂದ ವಿವರಿಸಿದ್ದಳು.
ಕಳೆದ ಸಲ ಬಂದಾಗ ಮಧುಬೆನ್ನಳ ಒತ್ತಾಯಕ್ಕೆ ಒಂದು ಮಧ್ಯಾಹ್ನ ಅವಳ ಮನೆಗೆ ಭೇಟಿ ಕೊಟ್ಟೆವು. ಕೆಳಗೆ ಅಂಗಡಿಗಳ ಸಾಲು, ಅಂಗಡಿಗಳ ನಡುವೆ ಅಗಲಕಿರಿದಾದ ಮೆಟ್ಟಿಲುಗಳನ್ನು ಹತ್ತಿಹೋದರೆ ಎರಡು ಕೋಣೆಗಳ ಮನೆ. ಹೊರಕೋಣೆಯ ಒಂದು ಬದಿಯಲ್ಲಿ ಅಡುಗೆಯ ಕಟ್ಟೆ. ಮನೆಯ ಒಪ್ಪ-ಓರಣ ನೋಡಿ ಬೆರಗಾದೆವು. ಎಂಟು ಚದರಡಿಯ ಒಳಕೋಣೆಯೊಳಗೆ ಇಣುಕಿದಾಗ ಅಲ್ಲಿ ಒಂದಷ್ಟು ಜನ ಸಾಲಾಗಿ, ನೆಲದ ಮೇಲೆ ಹಾಸಿಗೆ ಹಾಕಿ ಮಲಗಿದ್ದು ಕಣ್ಣಿಗೆ ಬಿತ್ತು.
‘ಹಗಲು ಹೊತ್ತಿನ ಬಾಡಿಗೆದಾರರು, ಎಂದು ನಿದ್ದೆಯಲ್ಲಿದ್ದ ವ್ಯಕ್ತಿಗಳ ಕಿರುಪರಿಚಯ ಮಾಡಿಕೊಟ್ಟಳು, ‘ರಾತ್ರಿಯಾಗುತ್ತಲೇ ಎದ್ದು ಕೆಲಸಕ್ಕೆ ಹೋಗುತ್ತಾರೆ’ ಎಂದಳು.
‘ಅಂದರೆ, ರಾತ್ರಿ ಬಾಡಿಗೆದಾರರು ಬೇರೆಯೇ ಇದ್ದಾರೆಯೇ?’ ಎಂದು ಕೇಳಿದಾಗ, ‘ಹೌದು ಅವರು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವವರು,’ ಎಂದು ಸ್ಪಷ್ಟೀಕರಿಸಿದಳು. ತಾನೇ ಬಾಡಿಗೆಯಲ್ಲಿದ್ದೂ ಆ ಬಾಡಿಗೆಯ ಖರ್ಚಿನಲ್ಲೊಂದು ಆದಾಯ ಹುಟ್ಟಿಸಿಕೊಂಡಿದ್ದಳು.
ಮಗಳ ಮದುವೆಯ ಆಲ್ಬಮ್
ಮಗಳ ಮದುವೆಯ ಅಮೂಲ್ಯವಾದ ಆಲ್ಬಮ್ ಹೊರಬಂತು. ಮದುಮಕ್ಕಳ ವಿವಿಧ ಭಂಗಿಗಳನ್ನು ನೋಡಿದ್ದಾಯಿತು, ಒಬ್ಬೊಬ್ಬರದಾಗಿ ಮನೆಯವರೆಲ್ಲರ ಪರಿಚಯವೂ ಆಯ್ತು. ಮತ್ತೆ ನಮಗೊಂದು ಆಶ್ಚರ್ಯ ಕಾದಿತ್ತು. ಮದುಮಕ್ಕಳೊಟ್ಟಿಗೆ ನಿಂತ ಮಧುಬೆನ್ ದಂಪತಿಗಳು! ನವದಂಪತಿಗಳ ಹಿಂದೆ ನಿಂತು ತಮ್ಮ ಕೈಗಳನ್ನು ಅವರ ಮೇಲೆ ಚಾಚಿ ಹರಸುವ ಆತ್ಮೀಯ ಪೋಟೋ. ಮದುವೆಗೆ ಹೋಗಲಿಲ್ಲವೆಂದು ಪರಿತಪ್ಪಿಸುತ್ತಿದ್ದುದು ನೆನಪಿತ್ತು. ಹೋದರೆ ಇಮಿಗ್ರೇಶನ್ ಅಧಿಕಾರಿಗಳ ಕೈಗೆ ತಮ್ಮನ್ನು ತಾವೇ ಒಪ್ಪಿಸಿಕೊಂಡಂತಾಗಿ ಕಾರಾಗೃಹದ ದಾರಿ ಹಿಡಿಯಬೇಕಾಗುತ್ತಿತ್ತೆಂಬುದೂ ತಿಳಿದಿತ್ತು.
‘ಅವರೇ ಇಲ್ಲಿಗೆ ಬಂದರೇ ಅಥವಾ ನೀವೇ….?’ ಎಂದು ಪ್ರಶ್ನಿಸಿದಾಗ, ‘ಅವರೂ ಬಂದಿಲ್ಲ, ನಾವೂ ಹೋಗಿಲ್ಲ, ಇದು ಫೋಟೋಗ್ರಾಫರನ ಕೈಚಳಕವಷ್ಟೇ’ ಎಂದು ಮಧುಬೆನ್ ನೆಗಾಡಿದಾಗ, ಗೊತ್ತಿದ್ದೂ ಎಂಥ ಬೆಪ್ಪು ಪ್ರಶ್ನೆ ಕೇಳಿದೆವಲ್ಲ ಎಂದು ನಾವೇ ಪರಿತಪಿಸುವ ಹಾಗಾಯ್ತು.
– ಮಿತ್ರಾ ವೆಂಕಟ್ರಾಜ