ಬೆಂಗಳೂರು: ಪ್ರತಿಷ್ಠಿತ ವಿಪ್ರೋ ಐಟಿ ಕಂಪನಿಯು ತನ್ನ ಹೊಸ ಉದ್ಯೋಗಿಗಳ ವೇತನದಲ್ಲಿ ಶೇ.50ರಷ್ಟು ಕಡಿತಗೊಳಿಸಲು ನಿರ್ಧಾರ ತೆಗೆದುಕೊಂಡಿದ್ದು, ಇದು ಸ್ವೀಕಾರಾರ್ಹ ವಿಚಾರವಲ್ಲ. ಈ ಬಗ್ಗೆ ವಿಪ್ರೋ ಕಂಪನಿ ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ನೌಕರರ ಒಕ್ಕೂಟ(ಎನ್ ಐಟಿಇಎಸ್) ತಿಳಿಸಿದೆ.
ಇದನ್ನೂ ಓದಿ:ಶಿಡ್ಲಘಟ್ಟ: ಕೌಟುಂಬಿಕ ಕಲಹ: ಒಂದೇ ಕುಟುಂಬದ ಮೂವರು ಸಾವು; ಮತ್ತೊಬ್ಬ ಅಸ್ವಸ್ಥ
ಜಾಗತಿಕ ಆರ್ಥಿಕ ಹಿಂಜರಿಕೆಯ ಅನಿಶ್ಚಿತತೆ ಮತ್ತು ಟೆಕ್ ಕಂಪನಿಗಳ ಬೇಡಿಕೆಯ ಸವಾಲುಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ವಿಪ್ರೋ ಕಂಪನಿ ತೆಗೆದುಕೊಂಡಿರುವುದಾಗಿ ಮಾರ್ಕೆಟ್ ವಾಚರ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರು ಮೂಲದ ಐಟಿ ಸರ್ವೀಸ್ ಕಂಪನಿಯಾದ ವಿಪ್ರೋ ಇತ್ತೀಚೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 6.5 ಲಕ್ಷ ರೂಪಾಯಿ ವೇತನ ಪ್ಯಾಕೇಜ್ ನ ಆಫರ್ ಲೆಟರ್ ಅನ್ನು ಕಳುಹಿಸಿತ್ತು. ಆದರೆ ಇದೀಗ ವಾರ್ಷಿಕ ಪರಿಹಾರ ರೂಪದಲ್ಲಿ 3.5 ಲಕ್ಷ ರೂಪಾಯಿ ವೇತನದ ಆಫರ್ ನೀಡಿದ್ದು, ಆ ನಿಟ್ಟಿನಲ್ಲಿ ಉದ್ಯೋಗಿಗಳು ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದು ವರದಿ ವಿವರಿಸಿದೆ.
ವಿಪ್ರೋ ಕಂಪನಿಯ ಈ ನಿರ್ಧಾರಕ್ಕೆ ಐಟಿ ವಲಯದ ನೌಕರರ ಸಂಘ NITES ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅನ್ಯಾಯ ಮತ್ತು ಪಾರದರ್ಶಕತೆ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದೆ.
ವಿಪ್ರೋ ಕಂಪನಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಜೊತೆಗೆ ಪೂರಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೌಕರರ ವಲಯದ ಒಕ್ಕೂಟದ ಜತೆ ಮಾತುಕತೆ ನಡೆಸಬೇಕೆಂದು ಎನ್ ಐಟಿಇಎಸ್ ಒತ್ತಾಯಿಸಿದೆ.