ಹೊಸದಿಲ್ಲಿ: ಮಾರ್ಚ್ ತಿಂಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಬೆದರಿಕೆಯೊಡ್ಡಿದ ಆರೋಪದಡಿ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ತೇಜಿಂದರ್ ಪಾಲ್ ಬಗ್ಗಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು, ವದಂತಿಗಳನ್ನು ಹರಡಿದರು ಮತ್ತು ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದರು ಎಂದು ಆಮ್ ಆದ್ಮಿ ಪಕ್ಷದ ಸನ್ನಿ ಸಿಂಗ್ ದೂರು ನೀಡಿದ್ದರು.
ಮಾರ್ಚ್ 30 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಗ್ಗಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾರೆ. ದೂರುದಾರರು ಬಗ್ಗಾ ಅವರ ಹೇಳಿಕೆಗಳು ಮತ್ತು ವಿಡಿಯೋ ತುಣುಕುಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಧ್ವನಿವರ್ಧಕ ತೆರವುಗೊಳಿಸದಿದ್ದರೆ ಹನುಮಾನ್ ಚಾಲೀಸ್ ಪಠಣ
“ಬೆಳಗ್ಗೆ ಸುಮಾರು 10ರಿಂದ 15 ಮಂದಿ ಪಂಜಾಬ್ ಪೊಲೀಸರು ಮನೆಗೆ ಬಂದರು. ನಾನು ವಿಡಿಯೋ ಮಾಡಲು ಹೋದಾಗ ನನ್ನ ಮುಖಕ್ಕೆ ಹೊಡೆದ ಪೊಲೀಸರು, ಮೊಬೈಲ್ ಫೋನನ್ನು ಕೂಡಾ ಕಸಿದುಕೊಂಡರು. ಸುಮಾರು 8.30ರ ಸುಮಾರಿಗೆ ತೇಜಿಂದರ್ ನನ್ನು ಬಂಧಿಸಿ ಕರೆದೊಯ್ದರು” ಎಂದು ತೇಜಿಂದರ್ ಪಾಲ್ ತಂದೆ ಕೃಪಾಲ್ ಸಿಂಗ್ ಬಗ್ಗಾ ಹೇಳಿದ್ದಾರೆ.
ಬಂಧನದ ಕೆಲವೇ ಕ್ಷಣಗಳಲ್ಲಿ ಬಗ್ಗಾ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಸರ್ಕಾರ ಅಧಿಕಾರದ ದುರುಪಯೋಗ ಮಾಡುತ್ತಿದೆ. ಅರವಿಂದ ಕೇಜ್ರಿವಾಲ್ ಕಾಶ್ಮೀರಿ ಪಂಡಿತರ ಬಳಿ ಕ್ಷಮೆ ಕೇಳುವವರೆಗೆ ಅವರನ್ನು ಟೀಕೆ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.