Advertisement

ವಿವಿಗಳು ವಿಶ್ವದ ಜ್ಞಾನ ವಿಸ್ತರಿಸಲಿ: ಡಾ|ಅಪ್ಪ

02:31 PM Sep 06, 2017 | Team Udayavani |

ಕಲಬುರಗಿ: ವಿಶ್ವವಿದ್ಯಾಲಯಗಳು ವಿಶ್ವ ಜ್ಞಾನದ ತಳಹದಿ ವಿಸ್ತರಿಸಬೇಕು. ಬರೀ ಬೋಧನೆ ಹಾಗೂ ಅನುದಾನ ಪಡೆಯುವಂತೆ ಆಗಬಾರದು. ಜ್ಞಾನದ ಸಂಕಿರಣತೆ ಹೊಂದಿರಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆಗಿರುವ ಶರಣಬಸವ ವಿಶ್ವವಿದ್ಯಾಲಯದ
ಕುಲಾಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ನುಡಿದರು. 

Advertisement

ಮಂಗಳವಾರ ಸಂಜೆ ಸಂಸ್ಥೆಯ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದಕ್ಕಾಗಿ
ವಿದ್ಯಾವರ್ಧಕ ಸಂಘದಡಿ ಬರುವ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಹಾಗೂ ಅಭಿನಂದನೆ
ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯ ಎಂದರೆ ಜ್ಞಾನದ ಸಂಕೇತವಾಗಬೇಕು. ವಿವಿಯಲ್ಲಿ ವಿಶ್ವದ ಜ್ಞಾನಾರ್ಜನೆ ಆಗಬೇಕು. ಜತೆಗೆ ಬದುಕಿಗೂ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಶರಣಬಸವ ವಿವಿ ಕಾರ್ಯಸೂಚಿ ರೂಪಿಸಲಿದೆ. ಪ್ರಸಕ್ತ ವರ್ಷವೇ ಶರಣಬಸವ ವಿವಿ ಕಾರ್ಯಾರಂಭ ಮಾಡುತ್ತಲಿದೆ ಎಂದು ಪ್ರಕಟಿಸಿದರು.

ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಸರ್ಕಾರ ಮಾಡದ ಶೈಕ್ಷಣಿಕ ಅಭಿವೃದ್ಧಿ ಕಾರ್ಯವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮಾಡಿದೆ. ಹಿಂದುಳಿದ ಈ ಭಾಗದಲ್ಲಿ ಮಹಿಳಾ ಶಿಕ್ಷಣ ಸರಾಸರಿ ಹೆಚ್ಚಿಸಲು ಸಂಸ್ಥೆ ತನ್ನದೆ ಆದ ಕೊಡುಗೆ ನೀಡಿದೆ. ಹೀಗಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಾಡಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ ಎಂದು ಬಣ್ಣಿಸಿದರು. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಡಾ| ಅಪ್ಪಾಜಿ ಯಾವುದೇ ಕೆಲಸ ಹಿಡಿದರೂ ಪರಿಪೂರ್ಣವಾಗಿ ಮಾಡ್ತಾರೆ. ಶರಣಬಸವ ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತಮ್ಮ ಬೆಂಬಲ ಸದಾ ಇರುತ್ತದೆ ಎಂದರು. ಮಹಾಪೌರ ಶರಣಕುಮಾರ ಮೋದಿ ಹಾಜರಿದ್ದರು.

ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ, ಸಹಕುಲಪತಿಗಳಾದ ಡಾ| ವಿ.ಡಿ. ಮೈತ್ರಿ, ಡಾ| ಎನ್‌.ಎಸ್‌. ದೇವರಕಲ್‌, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಹಣಕಾಸು ಅಧಿಕಾರಿ ಶಿವಲಿಂಗಪ್ಪ ನಿರಗುಡಿ ಅವರನ್ನು ಡಾ| ಅಪ್ಪ ಅವರ ವತಿಯಿಂದ ಹಾಗೂ ಸಂಸ್ಥೆಯ ಸಿಬ್ಬಂದಿ ವತಿಯಿಂದ ಸನ್ಮಾನಿಸಲಾಯಿತು. ಡಾ| ಅಪ್ಪ ಅವರಿಗೆ ಹರ್ಷೋದ್ಘಾರದ ನಡುವೆ ಅಭಿನಂದನೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next