ಧಾರವಾಡ: ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲ ಸಂಗಮದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಮುರುಘಾಮಠದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಬಸವೇಶ್ವರರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೂಡಲ ಸಂಗಮದಲ್ಲಿಯೇ ವಚನ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಬೇಕೆಂಬುದು ಸಮಾಜದ ಎಲ್ಲರ ಬೇಡಿಕೆ ಆಗಿದ್ದು, ಹೀಗಾಗಿ ಸಿಎಂ ಅವರ ಮನವೊಲಿಕೆ ಮಾಡಲು ಅವರೊಂದಿಗೆ ಚರ್ಚಿಸಲಾಗುವುದು ಎಂದರು. ರಾಜ್ಯದ ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವಂತೆ ಈಗಾಗಲೇ ಮುರುಘಾ ಮಠದಿಂದ ಒತ್ತಾಯಿಸಲಾಗಿತ್ತು.
ಅದರನ್ವಯ ಸಿಎಂ ಸಿದ್ದರಾಮಯ್ಯ ಅವರು ಆದೇಶ ಮಾಡಿದ್ದು, ಇಂದಿನಿಂದ ಅದು ಚಾಲನೆ ದೊರೆತಿದೆ. ಇದೇ ನಿಟ್ಟಿನಲ್ಲಿ ವಚನ ವಿಶ್ವವಿದ್ಯಾಲಯ ಆರಂಭಿಸುವಂತೆ ಇಲ್ಲಿಂದಲೇ ಒತ್ತಾಯ ಮಾಡಲಾಗುವುದು ಎಂದರು. ಯುವ ಸಮುದಾಯ ಇಂದು ದಾರಿ ತಪ್ಪುತ್ತಿದೆ. ಅವರನ್ನು ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
ಅಲ್ಲದೇ ಬಸವಣ್ಣವರ ಎಲ್ಲ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಲು ಆಗದಿದ್ದರೂ ಸಹ ಕನಿಷ್ಠ ಪಕ್ಷ ಕಾಯಕ ಮತ್ತು ಶ್ರದ್ಧೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಖಂಡಿತ ಜೀವನದಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದರು. ಇಷ್ಟು ವರ್ಷಗಳವರೆಗೆ ಬಸವಣ್ಣನವರ ಜಯಂತಿಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಿದ್ದಿಲ್ಲ.
ಆದರೆ, ಈ ವರ್ಷ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಅತ್ಯಂತ ಸಂಭ್ರಮದಿಂದ ಬಸವಣ್ಣವರ ಜಯಂತಿ ಆಚರಿಸಲಾಗುತ್ತಿದೆ. ಇದು ಹೆಮ್ಮೆಯ ವಿಷಯ ಎಂದರು. ಸರಕಾರದಿಂದ ಬಸವಣ್ಣನವರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದ್ದು, ಈ ಕುರಿತಂತೆ ಆಮಂತ್ರಣ ಪತ್ರಿಕೆಯಲ್ಲಿದ್ದ ಪ್ರತಿಯೊಬ್ಬರಿಗೂ ಮನೆ ಮನೆಗೆ ಹೋಗಿ ಆಹ್ವಾನ ನೀಡಲಾಗಿದೆ.
ಆದರೆ, ಇಲ್ಲಿ ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಇಲ್ಲ. ಹೀಗೆ ಆದರೆ ಹೇಗೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಬೆಳಗಾವಿಯ ಜ್ಯೋತಿ ಬದಾಮಿ ಸಾಮಾಜಿಕ ಸ್ವಾಸ್ಥ ಮತ್ತು ಬಸವಣ್ಣ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಾಲರಾಜ, ಜಿಲ್ಲಾಧಿಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಧಿಕಾರಿ ಇಬ್ರಾಹಿಂ ಮೈಗೂರ ಇದ್ದರು.