ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡೆಹಳ್ಳಿಯವರಾದ ಚೈತ್ರಾ ಮತ್ತು ಮಹಾಲಕ್ಷ್ಮಿ, ಯೋಗ ತರಬೇತಿಯಲ್ಲಿ ಪಿ.ಜಿ. ಡಿಪ್ಲೊಮಾ ಮುಗಿಸಿದ್ದಾರೆ. ಒಂದೇ ಊರು, ಕಾಲೇಜಿನವರಾದ ಇಬ್ಬರೂ ಬಡತನದ ಬೇಗೆ ಕಂಡವರು. ಯೋಗವು ಈಗ ಇವರ ಯೋಗ ಬದಲಿಸುತಿದೆ…
ಬಡತನದಲ್ಲಿ ಬೆಳೆದವರು ಸಾಧನೆ, ಆಸಕ್ತಿಯ ಕ್ಷೇತ್ರ ಅಂತೆಲ್ಲಾ ವಿಭಿನ್ನ ಹಾದಿ ಹಿಡಿಯುವುದು ಕಡಿಮೆಯೇ. ಆದರೆ, ಈ ಇಬ್ಬರು ಗೆಳತಿಯರು ವಿಶೇಷ ಅನ್ನಿಸುವುದು ಇದೇ ಕಾರಣಕ್ಕೆ. ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಹಂಪಿನಕಟ್ಟಿ ಚೈತ್ರಾ ಮತ್ತು ಮಹಾಲಕ್ಷ್ಮಿ ಸೊನ್ನದ್, ಅಡೆತಡೆಗಳನ್ನು ಹಿಮ್ಮೆಟ್ಟಿ ಯೋಗಾಭ್ಯಾಸದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ.
ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡೆಹಳ್ಳಿಯವರಾದ ಈ ಗೆಳತಿಯರು ಯೋಗ ತರಬೇತಿಯಲ್ಲಿ ಪಿ.ಜಿ. ಡಿಪ್ಲೊಮಾ ಮುಗಿಸಿದ್ದಾರೆ. ಒಂದೇ ಊರು, ಕಾಲೇಜಿನವರಾದ ಇಬ್ಬರದ್ದೂ ಬಹುತೇಕ ಒಂದೇ ಕತೆ. ಬಡತನದಲ್ಲೇ ಹುಟ್ಟಿ ಬೆಳೆದ ಚೈತ್ರಾ, ತಂಗಿ ಮಾಡುವ ಯೋಗಾಭ್ಯಾಸವನ್ನು ನೋಡಿ ಯೋಗದತ್ತ ಆಕರ್ಷಿಸಲ್ಪಟ್ಟವಳು. ಮೊದಮೊದಲು, ತಮ್ಮೂರಿನ ನಿರ್ಜನ ಬೆಟ್ಟದ ಮೇಲೆ ಹೋಗಿ ಯೋಗಾಭ್ಯಾಸ ಮಾಡುತ್ತಿದ್ದರು. ನಂತರ ಶ್ರೀ ಬಸವ ಯೋಗಕೇಂದ್ರ ಎಂಬಲ್ಲಿ ಯೋಗ ತರಬೇತಿಗೆ ಸೇರಿದರು. ಅಲ್ಲಿ ಅವರಿಗೆ ಗುರುಗಳಾಗಿ ಸಿಕ್ಕವರು ಮಹಾಂತೇಶ್. ಅವರಿಂದ ಯೋಗದ ವಿವಿಧ ಆಸನಗಳನ್ನು ಕಲಿತ ಚೈತ್ರಾ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ 3ನೇ ಸ್ಥಾನವನ್ನೂ ಪಡೆದಿದ್ದಾರೆ. ಎಂಥ ಕಠಿಣ ಆಸನವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲರು.
ಮಹಾಲಕ್ಷ್ಮಿಯ ಕತೆ ಇದಕ್ಕಿಂತ ಭಿನ್ನವಾಗಿಲ್ಲ. 6ನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ಈಕೆಗೆ, ಅಮ್ಮನೇ ಆಧಾರ. ಹೊಲ, ಗದ್ದೆಯಲ್ಲಿ ಕೆಲಸ ಮಾಡಿಯೇ ಅಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೇ ಯೋಗವನ್ನೂ ಕಲಿಯುತ್ತಾ ಬಂದ ಮಹಾಲಕ್ಷ್ಮಿ, 2015ರಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 4ನೇ ಸ್ಥಾನ ಪಡೆದಿದ್ದರು. ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಈ ಇಬ್ಬರೂ ಹುಡುಗಿಯರು 10ನೇ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇವರ ಆಸಕ್ತಿಗೆ ನೀರೆರೆದು ಪೋಷಿಸುತ್ತಿರುವವರು ಡಾ. ಜ್ಯೋತಿ ಉಪಾಧ್ಯಾಯ. ಹಾಸ್ಟೆಲ್ ಶುಲ್ಕ ಮತ್ತು ಮೆಸ್ ಬಿಲ್ ಪಡೆಯದೆಯೇ ಹಾಸ್ಟೆಲ್‌ನಲ್ಲಿ ವಸತಿ ಕಲ್ಪಿಸಿರುವ ಜ್ಯೋತಿ ಮೇಡಂರನ್ನು, ಈ ಹುಡುಗಿಯರು ನೆನಪಿಸಿಕೊಳ್ಳುತ್ತಾರೆ.
ನಾವು ಇವತ್ತು ಏನೇ ಕಲಿತಿದ್ದರೂ ಅದಕ್ಕೆಲ್ಲಾ ನಮ್ಮ ಗುರುಗಳೇ ಕಾರಣ. ಅವರಿಲ್ಲದಿದ್ದರೆ ಇಲ್ಲಿಯವರೆಗೆ ಬರಲು ನಮಗೆ ಸಾಧ್ಯವೇ ಆಗುತ್ತಿರಲಿಲ್ಲ.
– ಮಹಾಲಕ್ಷ್ಮಿ ಸೊನ್ನದ್
ಬಡ ಕುಟುಂಬದಿಂದ ಬಂದ ನಮಗೆ ಹಲವಾರು ಸವಾಲುಗಳಿದ್ದವು. ಆದರೆ, ನಮ್ಮ ಶಿಕ್ಷಕರು ಬೆನ್ನೆಲುಬಾಗಿ ನಿಂತು, ಎಲ್ಲ ಕೊರತೆಗಳನ್ನು ನೀಗಿಸಿದರು. ನಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ ಶಿಕ್ಷಕರಿಗೆ ಎಂದೆಂದಿಗೂ ಚಿರಋಣಿ.
ಹಂಪಿನಕಟ್ಟಿ ಚೈತ್ರಾ
ಐಶ್ವರ್ಯ ಬ. ಚಿಮ್ಮಲಗಿ