Advertisement

ಮೂರ್ನಾಲ್ಕು ತಿಂಗಳಲ್ಲಿ ವಿವಿ ಶತಮಾನೋತ್ಸವ ವಸ್ತುಸಂಗ್ರಹಾಲಯ ಆರಂಭ

09:39 PM Sep 16, 2019 | Lakshmi GovindaRaju |

ಮೈಸೂರು: ಮೈಸೂರು ವಿಶ್ವವಿದ್ಯಾಲಯ ನಡೆದುಬಂದ ದಾರಿ ಕುರಿತು ಶತಮಾನೋತ್ಸವ ವಸ್ತುಸಂಗ್ರಹಾಲಯವನ್ನು ಕೆಲವೇ ದಿನಗಳಲ್ಲಿ ಆರಂಭಿಸಲು ಚಿಂತನೆ ನಡಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಹೇಳಿದರು.

Advertisement

ಕ್ರಾಫ‌ರ್ಡ್‌ ಭವನದ ಶಿಕ್ಷಣ ಮಂಡಳಿಯ ಸಭಾಂಗಣದಲ್ಲಿ ಸೋಮವಾರ ನಡೆದ ಶೈಕ್ಷಣಿಕ ವರ್ಷದ ಶಿಕ್ಷಣ ಮಂಡಳಿ ಮೊದಲನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿ 1916ರಲ್ಲಿ ಪ್ರಾರಂಭವಾಗಿ ಶತಮಾನೋತ್ಸವ ಆಚರಿಸಿಕೊಂಡಿದ್ದು, ನೂರನೇ ಘಟಿಕೋತ್ಸವ ಸಂಭ್ರಮಾಚರಣೆಯ ವಸ್ತಿಲಿನಲ್ಲಿದೆ. ಈ ನಿಟ್ಟಿನಲ್ಲಿ ಮೈಸೂರು ವಿವಿ ವಸ್ತುಸಂಗ್ರಹಾಲಯಕ್ಕಾಗಿ ಈಗಾಗಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ.

ವಸ್ತು ಸಂಗ್ರಹಾಲಯ ನಿರ್ಮಾಣ ಸಂಬಂಧ ಸಮಿತಿ ರಚಿಸಲಾಗುವುದು. ಜತೆಗೆ ಮಹಾರಾಷ್ಟ್ರದ ವಿವಿಯೊಂದರಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯದ ಮಾದರಿ ಅಧ್ಯಯನ ಮಾಡಲು ಚಿಂತನೆ ನಡೆದಿದೆ. ಅಂದುಕೊಂಡಂತೆ ಎಲ್ಲ ಕಾರ್ಯಗಳು ಪೂರ್ಣಗೊಂಡರೆ ಮೂರ್‍ನಾಲ್ಕು ತಿಂಗಳಲ್ಲಿ ಶತಮಾನೋತ್ಸವ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಸಮಗ್ರ ಕೋರ್ಸ್‌: ಮೈಸೂರು ವಿವಿ ಕಾನೂನು ಶಾಲೆಯಲ್ಲಿ ಬಿಕಾಂ ಎಲ್‌ಎಲ್‌ಬಿ ಐದು ವರ್ಷದ ಸಮಗ್ರ ಕೋರ್ಸನ್ನು ಪ್ರಾರಂಭಿಸಿರುವುದಕ್ಕೆ ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಬಿಎ ಎಲ್‌ಎಲ್‌ಬಿ ಮಾದರಿಯಲ್ಲಿ ಬಿಕಾಂ ವಿಷಯದಲ್ಲಿಯೂ ಎಲ್‌ಎಲ್‌ಬಿ ಪದವಿ ಪಡೆಯಲು ಅನುಮತಿ ಇದೆ ಎಂದು ಕಾನೂನು ಅಧ್ಯಯನ ವಿಭಾಗದ ಪ್ರೊ.ಸಿ.ಬಸವರಾಜು ಸಭೆಗೆ ಮಾಹಿತಿ ನೀಡಿದರು.

ಕ್ರೀಡಾ ನೀತಿ ಕೈಪಿಡಿ: ಮೈಸೂರು ವಿವಿ ದೂರ ಶಿಕ್ಷಣಕ್ಕೆ ಪ್ರಿನ್ಸಿಪಲ್ಸ್‌ ಆಫ್ ಜೆನೆಟಿಕ್ಸ್‌ ಅಂಡ್‌ ಹ್ಯೂಮನ್‌ ಜೆನೆಟಿಕ್ಸ್‌ ಪತ್ರಿಕೆಗಳನ್ನು ಸೇರಿಸಲು ಸಭೆಯಲ್ಲಿ ಅನುಮೋದನೆ ದೊರೆಯಿತು. ಶೈಕ್ಷಣಿಕ ವರ್ಷದಲ್ಲಿ ಮಂಡ್ಯದ ಸಂತ ಜೋಸೆಫ್, ಎಇಟಿ, ಮಾಂಡವ್ಯ ಬಿಇಡಿ ಕಾಲೇಜುಗಳಿಗೆ 100 ವಿದ್ಯಾರ್ಥಿಗಳ ಪ್ರವೇಶಾತಿಗೆ ಒಪ್ಪಿಗೆ ನೀಡಲಾಯಿತು. ಮೈಸೂರು ವಿವಿ ನ್ಪೋರ್ಟ್ಸ್ ಕೋಟಾದ ಅರ್ಹತಾ ನಿಯಮಗಳನ್ನು ಮಾರ್ಪಡಿಸಿ ರೂಪಿಸಿರುವ ಕ್ರೀಡಾ ನೀತಿ ಕೈಪಿಡಿಗೆ ಅನುಮೋದನೆ ಸಿಕ್ಕಿತು.

Advertisement

ಚಿನ್ನದ ಪದಕ ದತ್ತಿ ಸ್ಥಾಪನೆ: ಪ್ರೊ.ಎಚ್‌.ಎನ್‌.ಯಜುರ್‌ವೆದಿ ನಗದು ಬಹುಮಾನ ದತ್ತಿ, ಜಿ.ಸುಧಾ ಮತ್ತು ಪ್ರೊ.ಕೊಟ್ರೇಶ್ವರ ಚಿನ್ನದ ಪದಕ ದತ್ತಿ, ಸಕ್ಕರೆ ತಂತ್ರಜ್ಞಾನ ವಿಭಾಗದ ರಜತ ಮಹೋತ್ಸವ ಹೆಸರಿನ ನಗದು ಬಹುಮಾನ, ಚಿನ್ನದ ಪದಕ ದತ್ತಿ, ದಿ.ಜಿ.ಎಸ್‌.ದೊಡ್ಡ ಅರ್ಕೇಶ್ವರ ಮೂರ್ತಿ ನಗದು ಬಹುಮಾನ, ದಿ.ದೇವೀರಮ್ಮ ಸಿ.ಶಿವಣ್ಣ ಚಿನ್ನದ ಪದಕ ದತ್ತಿ, ಬಿ.ಕೆ.ಶಿವಣ್ಣ ಹೆಸರಿನಲ್ಲಿ ದತ್ತಿ ಉಪನ್ಯಾಸ, ಪ್ರೊ.ಬಿ.ನಾಗಪ್ಪ ಅಭಿನಂದನಾ ನಗದು ಬಹುಮಾನ, ಪ್ರೊ.ಪಿ.ಕೆ.ಪಾಟೀಲ್‌ ವಿಶ್ವವಿದ್ಯಾನಿಲಯದ ಗ್ರಂಥಪಾಲಕರ, ಅಧ್ಯಕ್ಷರು ಗ್ರಂಥಾಲಯ ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಹೆಸರಿನ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಸಭೆ ಅನುಮೋದಿಸಿತು.

ವರದಿಯಲ್ಲಿ ದೋಷ: ವಿಶ್ವವಿದ್ಯಾನಿಲಯದ 2018-19ರ ಸಾಲಿನ ವಾರ್ಷಿಕ ವರದಿ ಅನುಮೋದನೆಗೆ ಸಿಂಡಿಕೇಟ್‌ ಸದಸ್ಯ ಪ್ರೊ.ನಾಗೇಂದ್ರಪ್ಪ ವಿರೋಧಿಸಿದರು. ವರದಿಯ ಮೂಲಪ್ರತಿಯನ್ನು ನೀಡಬೇಕು. ನಮಗೇ ನೀಡಿರುವ 20 ಪುಟಗಳಲ್ಲಿ ಅನೇಕ ದೋಷಗಳಿವೆ. 260 ಪುಟಗಳಲ್ಲಿ ಎಷ್ಟು ದೋಷಗಳಿರಬಹುದು ಎಂದು ಸಭೆಯ ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಸೆ. 30ರೊಳಗೆ ಸರ್ಕಾರಕ್ಕೆ ವರದಿ ಕಳುಹಿಸಬೇಕಾಗಿರುವುದರಿಂದ ಸಭೆಯ ಗಮನಕ್ಕೆ ತರಲಾಗಿದೆ. ವರದಿಯ ತಪ್ಪು ಸರಿ ಮಾಡಲು ಸಮಿತಿ ರಚಿಸಲಾಗಿದೆ. ಇದು ಅಂತಿಮ ಅಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಕುಲಸಚಿವ ಡಾ.ಆರ್‌.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್‌, ಹಣಕಾಸು ಅಧಿಕಾರಿ ಸೇರಿದಂತೆ ಮತ್ತಿತರರು ಇದ್ದರು.

ಗುಣಮಟ್ಟದ ಸಂಶೋಧನೆಗೆ ಪ್ರೋತ್ಸಾಹಧನ: ವರ್ಷದಿಂದ ವರ್ಷಕ್ಕೆ ಸಂಶೋಧನೆ ಪ್ರಬಂಧಗಳು ಕಡಿಮೆಯಾಗಿವೆ. ಆ ಹಿನ್ನೆಲೆಯಲ್ಲಿ ಗುಣಮಟ್ಟದ ಸಂಶೋಧನೆಗೆ ಉತ್ತೇಜನ ನೀಡುವ ಸಲುವಾಗಿ 20 ವಿದ್ಯಾರ್ಥಿಗಳಿಗೆ ತಲಾ 12 ಸಾವಿರ ರೂ.ಗಳಂತೆ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಪ್ರಾರಂಭ ಸಂಬಂಧ ಕಟ್ಟಡ ನಿರ್ಮಾಣಕ್ಕೆ 3 ತಿಂಗಳಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ತಿಳಿಸಿದರು.

ಮೈಸೂರು ವಿವಿ ದೂರ ಶಿಕ್ಷಣ ಬೋರ್ಡ್‌ ಆಫ್ ಸ್ಟಡಿ ಸ್ಥಾಪಿಸುವಂತೆ ಯುಜಿಸಿ ಸೂಚಿಸಿದೆ. ಬಯೋ ಟೆಕ್ನಾಲಜಿ ಮತ್ತು ಕಂಪ್ಯೂಟರ್‌ ಅಧ್ಯಯನ ವಿಭಾಗ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗಳಿಗೆ ಕೊಠಡಿ ಕೊರತೆಯಿದ್ದು, ಹೆಚ್ಚಿನ ಕೊಠಡಿಗಳನ್ನು ರೂಪಿಸಲಾಗುವುದು. ಹೊಸ ಕಟ್ಟಡಗಳ ನಿರ್ಮಾಣ ಇಲ್ಲ. 15 ವಿಭಾಗಗಳು ಹೆಚ್ಚುವರಿ ಕೊಠಡಿಗಳಿಗೆ ಮನವಿ ಮಾಡಿದ್ದು ಪರಿಶೀಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next