Advertisement
ಈ ತಿಂಗಳಲ್ಲಿನ ಪ್ರತಿ ಮಂಗಳವಾರ ಗುಳ್ಳವ್ವನ ಸಂಭ್ರಮ. ಮಣ್ಣೆತ್ತಿನ ಅಮಾವಾಸ್ಯೆ ಅನಂತರ ಬರುವ ನಾಲ್ಕು ಮಂಗಳವಾರ ಗುಳ್ಳವ್ವಳನ್ನು ಪೂಜೆ ಮಾಡುವ ಪದ್ಧತಿ ವಿಜಯಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದುಬಂದಿದೆ.
ಗ್ರಾಮೀಣ ವೈವಿಧ್ಯ ಆಚರಣೆ, ನಂಬಿಕೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಗುಳ್ಳವ್ವನ ಪೂಜೆ ಮಹತ್ವವೆನಿಸುತ್ತದೆ. ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ರೈತರು ಎತ್ತು ಗಳನ್ನು ಶೃಂಗರಿಸುವ, ಮಣ್ಣಿನ ಮೂರ್ತಿಗಳಿಗೆ ಪೂಜೆ ಸಲ್ಲಿಸುವ
ಸಂಪ್ರದಾಯವಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಕಲಬುರಗಿ, ಧಾರವಾಡ ಮುಂತಾದೆಡೆ ಮಣ್ಣಿನ ಗುಳ್ಳವ್ವ ಮಾಡುವುದು ರೂಢಿ.
Related Articles
ಗುಳ್ಳವ್ವ, ಗುಳಕವ್ವ, ಗೋಲ ಕವ್ವ ಎಂಬ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಗುಳ್ಳವ್ವ ಜಾನಪದರ ದೇವತೆ. ಗುಳ್ಳವ್ವನ ಪೂಜೆಯ ಹಿಂದೆ ಬಹುದೊಡ್ಡ ಐತಿಹ್ಯವಿದೆ. ಒಂದು ಊರಿನಲ್ಲಿ ತೀರಾ ಬಡ ರೈತನಿದ್ದ. ಅವನಿಗೆ ಚಿನ್ನವ್ವ ಎಂಬ ಹೆಣ್ಣು ಮಗಳಿದ್ದಳು.
Advertisement
ಬಡತನದಿಂದಾಗಿ ಆಕೆಯ ಮದುವೆ ಮಾಡಲು ಹೆತ್ತವರಿಗೆ ಸಾಧ್ಯವಾಗಲಿಲ್ಲ. ಅದೇ ಊರಿನಲ್ಲಿ ಆಗರ್ಭ ಶ್ರೀಮಂತನಿಗೆ ಒಬ್ಬನೇ ಮಗನಿದ್ದ. ಕಾರಣಾಂತರಗಳಿಂದ ಮಗನಿಗೆ ಮದುವೆ ಮಾಡಲು ಶ್ರೀಮಂತನಿಗೂ ಆಗಲಿಲ್ಲ. ವಿವಾಹವಾಗದೆ ಮಗ ಸಾವನ್ನಪ್ಪುತ್ತಾನೆ. ಮದುವೆ ಆಗದೆ ಸತ್ತರೆ ಅವರಿಗೆ ಮೋಕ್ಷವಿಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಶ್ರೀಮಂತ ಚಿನ್ನವ್ವನ ಜತೆ ತನ್ನ ಮಗನ ಮದುವೆಯನ್ನು ಮಾಡುತ್ತಾನೆ. ಆ ಬಳಿಕ ಮಗನ ಶವ ಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಪತಿಯನ್ನು ಮಣ್ಣಿನಲ್ಲಿ ಮುಚ್ಚಬೇಡಿ ಎಂದು ಚಿನ್ನವ್ವ ಬೇಡಿಕೊಳ್ಳುತ್ತಾಳೆ.
ಆಗ ಎಲ್ಲರೂ ಆಕೆಯನ್ನು ಶವದ ಬಳಿಯೇ ಬಿಟ್ಟು ತೆರಳುತ್ತಾರೆ. ಮೃತ ಗಂಡನನ್ನು ಜೀವಂತಗೊಳಿಸುವ ಉದ್ದೇಶದಿಂದ ಚಿನ್ನವ್ವ ಹೊಲದಲ್ಲಿರುವ ಮಣ್ಣನ್ನು ತಂದು ಬಸವಣ್ಣನ ಮೂರ್ತಿಯನ್ನು ಮಾಡಿ ಪೂಜಿಸಿದಾಗ ಬಸವಣ್ಣ ಗಂಡನಿಗೆ ಜೀವದಾನ ಮಾಡುತ್ತಾನೆ. ಆ ದಿನ ಅಮಾವಾಸ್ಯೆಯಾಗಿದ್ದು, ಅದನ್ನು ಮಣ್ಣೆತ್ತಿನ ಅಮಾವಾಸ್ಯೆಯೆಂದೇ ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ. ಚಿನ್ನವ್ವ ಮಣ್ಣಿನ ಎತ್ತನ್ನು ಮಾಡಿ ಪೂಜಿಸಿ ಸತ್ತ ಗಂಡನ ಜೀವವನ್ನು ಮರಳಿ ಪಡೆದ ಹಿನ್ನೆಲೆಯಲ್ಲಿ ಮಣ್ಣಿನ ಬಸವಣ್ಣ ಹಾಗೂ ಚಿನ್ನವ್ವನನ್ನು ಗುಳ್ಳವ್ವ ರೂಪದಲ್ಲಿ ಪೂಜಿಸುವ ಸಂಪ್ರದಾಯ ನಡೆದು ಬಂದಿದೆ.
ಬಗೆ ಬಗೆ ಖಾದ್ಯಗುಳ್ಳವ್ವನ ಆಟದಷ್ಟೇ ಊಟಕ್ಕೂ ಇಲ್ಲಿ ಮೊದಲ ಪ್ರಾಶಸ್ತ್ಯ. ದಪಾಟಿ, ಸಜ್ಜೆ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ, ಬೇಳೆ ಪಲೆÂ, ಶೇಂಗಾ ಹಿಂಡಿ, ಮೊಸರು, ಶೇಂಗಾದ ಹೋಳಿಗೆ ಹೀಗೆ ನಾನಾ ಖಾದ್ಯ ಗಳನ್ನು ಒಟ್ಟಾಗಿ ತಯಾರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮಹಿಳೆಯರ ನೆಚ್ಚಿನ ಆಚರಣೆಯಾಗಿರುವ ಗುಳ್ಳವ್ವನ ಪೂಜೆ ನಿಧಾನವಾಗಿ ಆಧುನಿಕತೆಯ ಪ್ರಭಾವ ದಿಂದ ಕಳೆಗುಂದುತ್ತಿದೆ. ಕೆಸರಲ್ಲರಳಿದ ಗುಳ್ಳವ್ವ
ಹಳ್ಳ, ಗದ್ದೆಯಲ್ಲಿನ ಜಿಗುಟು ಕೆಸರನ್ನು ಗೋಲಾಕಾರದಲ್ಲಿ ಗುಳ್ಳವ್ವನ ಮೂರ್ತಿ ಮಾಡಿ ಮನೆಗೆ ತರುತ್ತಾರೆ. ಮರದ ಹಲಗೆ ಇಲ್ಲವೆ ಮಣೆಯ ಮೇಲೆ ಇರಿಸುತ್ತಾರೆ. ಒಂದೊಂದು ವಾರ ಒಂದು ಬಗೆಯ ಮೂರ್ತಿ ತಯಾರಾಗುತ್ತದೆ. ಮೊದಲ ವಾರ ಮನೆಗೆ ಬಂದಳೆಂದು ಮನೆ ಗುಳ್ಳವ್ವ, ನವಿಲು ಮೇಲೆ ಹೊರಡುವ ನವಿಲು ಗುಳ್ಳವ್ವ, ಲಿಂಗ, ಬಾರಂಗಬಾವಿ, ಕೊನೆ ವಾರ ಕಟ್ಟಿ ಇಳಿದು ಹೋಗುತ್ತಾಳೆ ಎಂದು ಮೆಟ್ಟಿಲು ಮಾಡಿ ಮೇಲೆ ಗುಳ್ಳವ್ವನನ್ನು ಕೂಡಿಸುತ್ತಾರೆ. ಇವುಗಳನ್ನು ಗುಲಗಂಜಿ, ಧಾನ್ಯಗಳಿಂದ ಅಲಂಕರಿಸುತ್ತಾರೆ. ಕೊನೆ ವಾರ ಕುಂಬಾರರ ಮನೆಯಿಂದ ಗುಳ್ಳವ್ವನನ್ನು ತಂದು ಅದರ ಸುತ್ತೆಲ್ಲ ಜವೆ, ಕುಸುಬಿ ಚುಚ್ಚಿ ಸಿಂಗರಿಸುತ್ತಾರೆ. ಅಡುಗೆ ಪದಾರ್ಥ, ಕೋಣ, ಕೊಡಲಿ ಹೀಗೆ ನಾನಾ ಪರಿಕರಗಳು ಕೆಸರಲ್ಲಿಯೇ ತಯಾರಾಗುತ್ತವೆ. ಸೀರೆ, ರವಿಕೆ, ನಡು ಪಟ್ಟಿ, ಕಿವಿಯೋಲೆ, ಕೊರಳ ದಾಗಿಣಿ ಹಾಕಿ ವಿಶಿಷ್ಟವಾಗಿ ಶೃಂಗಾರ ಮಾಡುತ್ತಾರೆ. ಮರುದಿವಸ ಬಗೆ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಿ ನದಿ, ಕೆರೆ, ಹೊಲ ತೋಟಗಳಿಗೆ ತೆರಳಿ ಅಲ್ಲಿಯೇ ಒಟ್ಟಾಗಿ ಕುಳಿತು ಭೋಜನ ಸೇವಿಸುತ್ತಾರೆ. ಹೀಗೆ ಗುಳ್ಳವ್ವನ ಪೂಜೆ ನಾಲ್ಕು ವಾರಗಳಲ್ಲಿ ಜರಗುತ್ತದೆ.
-ದೀಪಾ ಮಂಜರಗಿ, ಅಕ್ಕಮಹಾದೇವಿ, ಮಹಿಳಾ ವಿವಿ ವಿಜಯಪುರ