Advertisement

ಭಾರತ ಮತ್ತು ಪಾಕಿಸ್ಥಾನ ನಡುವೆ ಮಧ್ಯಸ್ಥಿಕೆ ವಹಿಸುವೆ: ಟ್ರಂಪ್‌

09:23 AM Jan 23, 2020 | Hari Prasad |

ದಾವೋಸ್‌: ಭಾರತ ಮತ್ತು ಪಾಕಿಸ್ಥಾನ ನಡುವೆ ಕಾಶ್ಮೀರ ವಿಚಾರ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಮತ್ತೂಮ್ಮೆ ಹೇಳಿಕೆ ನೀಡಿದ್ದಾರೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗ ಸಮ್ಮೇಳನದ ಸಂದರ್ಭದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಜತೆಗೆ ಭೇಟಿಯಾಗಿದ್ದ ವೇಳೆ ಅವರು ಈ ಅಂಶ ಸ್ಪಷ್ಟಪಡಿಸಿದ್ದಾರೆ. ಜತೆಗೆ ಕೇಂದ್ರಾಡಳಿತ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ.

Advertisement

ಕೇಂದ್ರ ಸರಕಾರ ಹಿಂದೆ ಹಲವು ಬಾರಿ ಅಂಥ ನೆರವನ್ನು ಟ್ರಂಪ್‌ ನೀಡಲು ಮುಂದಾಗಿದ್ದರೂ ಅದನ್ನು ಒಪ್ಪಿಕೊಂಡಿರಲಿಲ್ಲ ಮತ್ತು ದ್ವಿಪಕ್ಷೀಯ ವಿಚಾರವಾದ್ದರಿಂದ ಎರಡೂ ರಾಷ್ಟ್ರಗಳೇ ಅವು ಗಳನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿತ್ತು. ಪಾಕ್‌ ಪ್ರಧಾನಿ ಜತೆಗೆ ವೈಯಕ್ತಿಕ ಭೇಟಿ ನಡೆಸುವುದಕ್ಕೆ ಮುನ್ನ ಇಬ್ಬರು ನಾಯಕರು ಸುದ್ದಿಗೋಷ್ಠಿ ನಡೆಸಿದರು.

‘ಪಾಕ್‌ ಪ್ರಧಾನಿ ನನ್ನ ಸ್ನೇಹಿತ’ ಎಂದು ಬಣ್ಣಿಸಿದ ಅಧ್ಯಕ್ಷ ಟ್ರಂಪ್‌ ವಾಣಿಜ್ಯ ಮತ್ತು ಗಡಿಯಲ್ಲಿನ ಪರಿಸ್ಥಿತಿ ಪ್ರಧಾನ ಚರ್ಚೆಯ ಅಂಶ ಎಂದು ಹೇಳಿದ್ದಾರೆ.
‘ನಮ್ಮ ಮತ್ತು ಭಾರತದ ನಡುವಿನ ಬಾಂಧವ್ಯ ಪಾಕಿಸ್ಥಾನಕ್ಕೆ ಪ್ರಮುಖ ವಿಚಾರವಾಗಿದೆ. ಅಮೆರಿಕ ಈ ಬಗ್ಗೆ ನೆರವು ನೀಡಲಿದೆ’ ಎಂದು ಇಮ್ರಾನ್‌ ಖಾನ್‌ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರನೆಯವರು ಬೇಡ: ಕೇಂದ್ರ
ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಹ್ವಾನವನ್ನು, ಕೇಂದ್ರ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಆಸ್ಪದವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದೆ. ಕಳೆದ 5 ತಿಂಗಳಲ್ಲಿ ನಾಲ್ಕನೇ ಬಾರಿಗೆ ಅವರು ಹೀಗೆ ಹೇಳುತ್ತಿರುವುದು ಗಮನಾರ್ಹ. ವಿಶೇಷವೆಂದರೆ ಅಷ್ಟೂ ಬಾರಿ ಭಾರತ ಟ್ರಂಪ್‌ ಮಾತಿಗೆ ತಿರಸ್ಕಾರ ಸೂಚಿಸಿದೆ.

ಫೆ. 24, 25ಕ್ಕೆ ಟ್ರಂಪ್‌ ಭೇಟಿ?
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ. 24, 25ರಂದು ತಮ್ಮ ಮೊತ್ತ ಮೊದಲ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಅಮೆರಿಕದ ವಿದೇಶಾಂಗ ಖಾತೆ ಸಹಾಯಕ ಸಚಿವೆ ಅಲಿಸ್‌ ವೆಲ್ಸ್‌ ಕಳೆದ ವಾರ ಹೊಸದಿಲ್ಲಿಗೆ ಭೇಟಿ ನೀಡಿದ್ದರು.

Advertisement

ಹ್ಯೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯ ಕ್ರಮದಂತೆಯೇ ಅಹಮದಾಬಾದ್‌ನಲ್ಲಿ ಟ್ರಂಪ್‌ಗಾಗಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಮಾತುಕತೆ – ಸಿದ್ಧತೆಗಳು ನಡೆಯುತ್ತಿವೆ. ಈ ಭೇಟಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರಕಾರದ ನಿರ್ಧಾರಕ್ಕೆ ಸಮರ್ಥನೆ ದೊರೆತಂತಾಗುತ್ತದೆ ಎಂಬ ವಿಶ್ಲೇಷಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next