Advertisement

ಗಂಭೀರವಾಗಿದೆಯೇ ಕಿಮ್ ದೇಹಸ್ಥಿತಿ? ಏನಾಗಿದೆ ಉತ್ತರ ಕೊರಿಯಾದ ಸರ್ವಾಧಿಕಾರಿಗೆ?

10:01 AM Apr 22, 2020 | Hari Prasad |

ವಾಷಿಂಗ್ಟನ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ದೇಹ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಮರಣ ಶೈಯೆಯಲ್ಲಿದ್ದಾರೆ ಎಂಬಂತಹ ವರದಿಗಳು ವಿದೇಶಿ ಮಾಧ್ಯಮಗಳಲ್ಲಿ ಇಂದು ಹರಿದಾಡಲಾರಂಭಿಸಿದವು.

Advertisement

ಆ ಬಳಿಕ ವಿಶ್ವದೆಲ್ಲೆಡೆ ಈ ಸರ್ವಾಧಿಕಾರಿ ನಾಯಕನಿಗೆ ಏನಾಗಿದೆ ಎಂಬ ಪ್ರಶ್ನೆಗಳು ರಾಜಕೀಯ ನೇತಾರರ ಸಹಿತ ಜನಸಾಮಾನ್ಯರಲ್ಲಿ ಮೂಡಲಾರಂಭಿಸಿದೆ.

ವಿಶ್ವಾದ್ಯಂತ ಕೋವಿಡ್ 19 ವೈರಸ್ ಕಾಟದ ನಡುವೆಯೂ ಕಿಮ್ ಅನಾರೋಗ್ಯಕ್ಕೊಳಗಾಗಿರುವ ಸುದ್ದಿ ಸದ್ಯಕ್ಕೆ ಪೊಲಿಟಿಕಲ್ ಟ್ರೆಂಡಿಂಗ್ ರೂಪವನ್ನು ಪಡೆದುಕೊಳ್ಳುತ್ತಿದೆ. ಎಪ್ರಿಲ್ 15ರಂದು ನಡೆದ ತನ್ನ ತಾತನ ಜನ್ಮದಿನದ ಅಂಗವಾಗಿ ನಡೆಯಲ್ಪಡುವ ರಾಷ್ಟ್ರೀಯ ಸರಕಾರಿ ಕಾರ್ಯಕ್ರಮದಲ್ಲೂ ಕಿಮ್ ಜಾಂಗ್ ಉನ್ ಕಾಣಿಸಿಕೊಳ್ಳದಿರುವುದು 36 ವರ್ಷದ ಈ ಸರ್ವಾಧಿಕಾರಿ ನಾಯಕನ ಆರೋಗ್ಯ ಸ್ಥಿತಿಯ ಕುರಿತಾಗಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉತ್ತರ ಕೊರಿಯಾದ ನಂಬಲರ್ಹ ಮೂಲಗಳನ್ನು ಆಧರಿಸಿ ಸಿ.ಎನ್.ಎನ್. ಈ ಸುದ್ದಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ಕಿಮ್ ಆರೋಗ್ಯ ಸ್ಥಿತಿಗತಿಗಳ ಮಾಹಿತಿಗಳನ್ನು ಪಡೆದುಕೊಳ್ಳಲು ತಾನು ಸರ್ವ ಮೂಲಗಳ ಮೂಲಕ ಪ್ರಯತ್ನಿಸುತ್ತಿರುವಿದಾಗಿ ಸಿ.ಎನ್.ಎನ್. ತನ್ನ ವರದಿಯಲ್ಲಿ ಹೇಳಿಕೊಂಡಿದೆ.


ಉತ್ತರ ಕೊರಿಯಾದ ಈ ಜನಪ್ರಿಯ ನಾಯಕನ ಆರೋಗ್ಯ ಸ್ಥಿತಿಯನ್ನು ಶ್ವೇತಭವನವೂ ಸಹ ನಿಕಟವಾಗಿ ಅವಲೋಕಿಸುತ್ತಿದೆ. ಮಾಧ್ಯಮ ನಿಯಂತ್ರಣ ಇರುವ ಮತ್ತು ವಿದೇಶಿ ಮಾಧ್ಯಮಗಳಿಗೆ ಪ್ರವೇಶ ನಿಷೇಧವಿರುವ ಉತ್ತರ ಕೊರಿಯಾದಲ್ಲಿ ಸುದ್ದಿಗಳನ್ನು ಪಡೆದುಕೊಳ್ಳುವುದು, ಅದರಲ್ಲೂ ಆಡಳಿತ ವಿಚಾರಕ್ಕೆ ಸಂಬಂಧಿಸಿದ ಹಾಗೂ ಇಲ್ಲಿನ ಸರ್ವಾಧಿಕಾರಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆದುಕೊಳ್ಳುವುದು ಹರ ಸಾಹಸದ ಕೆಲಸವೇ ಸರಿ.

Advertisement

ಏನಾಗಿತ್ತು ಕಿಮ್ ಗೆ?
ಸ್ಥೂಲಕಾಯ, ಮಿತಿ ಮೀರಿದ ಧೂಮಪಾನ, ಹೃದಯ ಹಾಗೂ ಮಿದುಳು ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಕಿಮ್ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕಿಮ್ ಅವರು ಇತ್ತೀಚೆಗೆ ಹೃದಯದ ರಕ್ತನಾಳ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಬಳಿಕ ಕಿಮ್ ಕೋಮಾಗೆ ಜಾರಿದ್ದರು ಎಂಬ ಸುದ್ದಿಯನ್ನು ಉತ್ತರ ಕೊರಿಯಾ ಸುದ್ದಿಗಳನ್ನು ಮುಖ್ಯವಾಗಿ ಪ್ರಕಟಿಸುವ ದಕ್ಷಿಣ ಕೊರಿಯಾದ ನ್ಯೂಸ್ ವೆಬ್ ಸೈಟ್ ಡೈಲಿ ಎನ್ ಕೆ ಎಪ್ರಿಲ್ 12ರಂದು ಪ್ರಕಟಿಸಿತ್ತು.

ಶಸ್ತ್ರಚಿಕಿತ್ಸೆಯ ಬಳಿಕ ಕಿಮ್ ಅವರು ಹ್ಯಾಂಗ್ಸಾನ್ ನಲ್ಲಿರುವ ಬಂಗಲೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಈ ವೆಬ್ ಸೈಟ್ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಅತೀಯಾದ ಕೆಲಸ, ಸ್ಥೂಲಕಾಯತೆ ಮತ್ತು ಮಿತಿ ಮೀರಿದ ಧೂಮಪಾನದ ಕಾರಣದಿಂದ ಕಿಮ್ ಅವರು ತನ್ನ ಹೃದಯ ರಕ್ತನಾಳದ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಡೈಲಿ ಎನ್.ಕೆ. ತನ್ನ ವರದಿಯಲ್ಲಿ ತಿಳಿಸಿತ್ತು.

ಕಿಮ್ ಆರೋಗ್ಯ ಗಂಭೀರ ವರದಿ ನಿರಾಕರಿಸಿದ ದಕ್ಷಿಣ ಕೊರಿಯಾ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಶಸ್ತ್ರಚಿಕಿತ್ಸೆಯ ಬಳಿಕ ಬಿಗಡಾಯಿಸಿದೆ ಎಂಬ ವರದಿಗಳನ್ನು ಆ ದೇಶದ ನೆರೆ ರಾಷ್ಟ್ರವಾಗಿರುವ ದಕ್ಷಿಣ ಕೊರಿಯಾ ನಿರಾಕರಿಸಿದೆ. ಈ ಸರ್ವಾಧಿಕಾರಿಯ ಆರೋಗ್ಯದಲ್ಲಿ ಯಾವುದೇ ‘ಅಸಹಜ ಸ್ಥಿತಿ’ಗಳು ಕಾಣಿಸಿಕೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಎಂದು ದಕ್ಷಿಣ ಕೊರಿಯಾ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next