ಹೊಸದಿಲ್ಲಿ: ಚೀನದ ಮೇಲೆ ಮತ್ತಷ್ಟು ಕಣ್ಣಿಡಲು ಭಾರತಕ್ಕೆ ಅಮೆರಿಕ ಮಾನವ ರಹಿತ ಡ್ರೋನ್‌ಗಳ ಮೇಲಿನ ನಿರ್ಬಂಧ ಸಡಿಲಗೊಳಿಸಿದೆ.
ಚೀನದ ಸಶಸ್ತ್ರ ಡ್ರೋನ್‌ಗಳ ಭೀತಿಗೆ ಪ್ರತ್ಯುತ್ತರಿಸಲೂ ಯುಎಸ್ ಡ್ರೋನ್‌ಗಳ ನೆರವು ಸಿಗಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 35 ಮಿತ್ರ ರಾಷ್ಟ್ರಗಳಿಗೆ ನೆರವಾಗಲು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟದ (ಎಂಟಿಸಿಆರ್) ನಿಯಮ ಸಡಿಲಿಸಿದ್ದಾರೆ. ಇದರಿಂದಾಗಿ ಅಮೆರಿಕ ಸೇನೆಯ ಎರಡು ಕಣ್ಣುಗಳೆಂದೇ ಕರೆಯಲ್ಪಡುವ “ಪ್ರಿಡೇಟರ್- ಬಿ’ ಸಶಸ್ತ್ರ ಡ್ರೋನ್ ಮತ್ತು “ಗ್ಲೋಬಲ್ ಹಾಕ್ ಕಣ್ಗಾವಲು ಡ್ರೋನ್’ಗಳ ಖರೀದಿ ಭಾರತಕ್ಕೆ ಸುಗಮವಾಗಿದೆ. ಇವೆರಡೂ ಡ್ರೋನ್‌ಗಳು 800 ಕಿ.ಮೀ. ವೇಗ ಸಾಮರ್ಥ್ಯ ಹೊಂದಿವೆ.
‘ಎಂಟಿಸಿಆರ್ ನೀತಿಯ ಸಡಿಲಿಕೆ ನಮ್ಮ ಮಿತ್ರ ರಾಷ್ಟ್ರಗಳ ಸಾಮರ್ಥ್ಯ ಹೆಚ್ಚಿಸಲು ನೆರವಾಗಲಿದೆ’ ಎಂದು ಶ್ವೇತಭವನ ಹೇಳಿದೆ. ಭಾರತ, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ರಾಷ್ಟ್ರಗಳಿಗೆ ಮುಖ್ಯವಾಗಿ ಈ ಪ್ರಯೋಜನ ಸಿಗಲಿದೆ.
ಪ್ರಿಡೇಟರ್- ಬಿ, ಗಾರ್ಡಿಯನ್ ಡ್ರೋನ್‌ಗಳ ಸಶಸ್ತ್ರ ಆವೃತ್ತಿ. ಒಟ್ಟು 22 ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ಒಪ್ಪಿಗೆ ನೀಡಿದೆ. ಹೆಲ್-ಫೈರ್ ಕ್ಷಿಪಣಿಗಳನ್ನು ಹಾಗೂ 500 ಪೌಂಡ್‌ನ 2 ಲೇಸರ್ ಗೈಡೆಡ್ ಬಾಂಬ್‌ಗಳನ್ನೂ ಇವು ಹೊತ್ತೂಯ್ಯಬಲ್ಲವು. ಲಡಾಖ್‌ನಂಥ ಅತ್ಯುನ್ನತ ನೆಲೆಗಳಿಗೆ ಹೇಳಿಮಾಡಿಸಿರುವ ಡ್ರೋನ್‌ಗಳಿವು.