ವಾಷಿಂಗ್ಟನ್: 2019-20ರ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕಾ ಆಡಳಿತವು ಅತೀ ಹೆಚ್ಚಿನ ಸಂಖ್ಯೆಯ H-1B ವಿಸಾ ಅರ್ಜಿಗಳನ್ನು ತಿರಸ್ಕರಿಸಿರುವುದು ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಗಳಿಗೆ ಹೊಡೆತ ನೀಡಿದೆ.
ಈ ವಿಚಾರವನ್ನು ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದ್ದು ಅದರ ಪ್ರಕಾರ ಅಮೆರಿಕಾ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು ಅತೀ ಹೆಚ್ಚಿನ ಸಂಖ್ಯೆಯಲ್ಲಿ H-1B ಕೋರಿಕೆ ಅರ್ಜಿಗಳನ್ನು ತಿರಸ್ಕರಿಸಿರುವುದು ಬಹಿರಂಗಗೊಂಡಿದೆ.
ಅಮೆರಿಕಾ ನೀತಿಯ ರಾಷ್ಟ್ರೀಯ ವೇದಿಕೆಯು ಸಿದ್ಧಪಡಿಸಿರುವ ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ H-1B ವೀಸಾ ದೂರುಗಳ ವಿಲೇವಾರಿ ನಿರಾಕರಣೆಯ ಪ್ರಮಾಣವು 2015ರಲ್ಲಿ ಕೇವಲ 06 ಪ್ರತಿಶತವಿದ್ದರೆ 2019ರಲ್ಲಿ ಈ ಪ್ರಮಾಣ 24 ಪ್ರತಿಶತಕ್ಕೆ ಏರಿಕೆಯಾಗಿದೆ. ಆರ್ಥಿಕ ವರ್ಷ 10 ರಿಂದ ಆರ್ಥಿಕ ವರ್ಷ 15ಕ್ಕೆ H-1B ವೀಸಾ ಅರ್ಜಿಗಳ ನಿರಾಕರಣೆ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿರುವುದು ಈ ವರದಿಯಲ್ಲಿ ಬಹಿರಂಗವಾಗಿದೆ.
ಈ ಅರ್ಜಿಗಳಲ್ಲಿ ಬಹುತೇಕ ಅರ್ಜಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ಅರ್ಜಿಗಳೇ ಹೆಚ್ಚಾಗಿದೆ. ಒಟ್ಟು 27 ಕಂಪೆನಿಗಳನ್ನು ಒಳಗೊಂಡಂತೆ ಈ ವಿಶ್ಲೇಷಣೆಯನ್ನು ತಯಾರಿಸಲಾಗಿದ್ದು ಇವುಗಳಲ್ಲಿ 12 ಕಂಪೆನಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದೇ ಆಗಿವೆ.
ಈ ಎಲ್ಲಾ 12 ಐಟಿ ಕಂಪೆನಿಗಳಲ್ಲೂ ಸಹ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ವಿಸಾ ಮನವಿ ನಿರಾಕರಣೆಯ ಪ್ರಮಾಣ 30 ಪ್ರತಿಶತ ಇರುವುದು ಈ ವರದಿಯಲ್ಲಿ ಬಹಿರಂಗವಾಗಿದೆ. 2015-16ರ ಅವಧಿಯಲ್ಲಿ ಇದೇ ಕಂಪೆನಿಗಳ ಮೂಲಕ ಸಲ್ಲಿಸಲಾದ ವೀಸಾ ಅರ್ಜಿಗಳ ನಿರಾಕರಣೆಯ ಪ್ರಮಾಣ 07 ಪ್ರತಿಶತವನ್ನೂ ದಾಟಿರಲಿಲ್ಲ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ.
ಅಮೆರಿಕಾ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು ವಿಸಾ ಮನವಿ ಅರ್ಜಿಗಳ ವಿಲೇವಾರಿಗಾಗಿ ಅನುಸರಿಸುತ್ತಿರುವ ಕಾನೂನಾತ್ಮಕ ಮಾನದಂಡಗಳನ್ನು ಹೆಚ್ಚಿಸಿರುವುದೇ ಇಷ್ಟು ಪ್ರಮಾಣದ H-1B ವೀಸಾ ಅರ್ಜಿಗಳ ನಿರಾಕರಣೆಗೆ ಕಾರಣ ಎನ್ನುವ ವಿಚಾರವು ಈ ವರದಿಯಲ್ಲಿದೆ.
ಒಟ್ಟಾರೆ H-1B ವೀಸಾದಲ್ಲಿ 70 ಪ್ರತಿಶತ ಭಾರತೀಯ ಟೆಕ್ಕಿಗಳದ್ದೇ ಆಗಿರುವುದರಿಂದ ಈ ಬೆಳವಣಿಗೆ ನೇರವಾಗಿ ಭಾರತೀಯ ಟೆಕ್ಕಿಗಳ ಮೆಲೆಯೇ ಪರಿಣಾಮವನ್ನು ಬೀರಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇನ್ನು ಅಮೆರಿಕಾದಲ್ಲಿ ತಮ್ಮ ಕಛೇರಿಯನ್ನು ಹೊಂದಿರುವ ಕಾಗ್ನಿಜೆಂಟ್, ಆಕ್ಸೆಂಚರ್, ವಿಪ್ರೋ ಮತ್ತು ಇನ್ಫೋಸಿಸ್ ಸಹಿತ ಪ್ರಮುಖ ಸಾಫ್ಟ್ವೇರ್ ಕಂಪೆನಿಗಳಿಂದ ಸಲ್ಲಿಕೆಯಾಗಿದ್ದ H-1B ವೀಸಾ ಅರ್ಜಿಗಳು ತಿರಸ್ಕೃತಗೊಂಡಿವೆ.