Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಸುಮಾರು 60 ದೇಶಗಳ ಜಾಗತಿಕ ನಾಯಕರು ಪಾಲ್ಗೊಂಡಿರುವ ಈ ಶೃಂಗ ಸಭೆಯಲ್ಲಿ ಈ ಯುವ ಪರಿಸರ ಹೋರಾಟಗಾರ್ತಿಯ ಮಾತುಗಳು ಎಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ಮೂಡಿಬಂತು.
ಹವಾಮಾನ ಬದಲಾವಣೆ ವಿಚಾರಕ್ಕೆ ಸೂಕ್ತವಾಗಿ ಸ್ಪಂದಿಸುವಲ್ಲಿ ಜಾಗತಿಕ ನಾಯಕರು ವಿಫಲರಾಗಿದ್ದಾರೆ ಎಂದು ಗ್ರೇಟಾ ತನ್ನ ಭಾಷಣದಲ್ಲಿ ನೇರ ಆರೋಪವನ್ನು ಮಾಡಿದರು. ‘ಹೌ ಡೇರ್ ಯೂ’ (ನಿಮಗೆಷ್ಟು ಧೈರ್ಯ?) ಎಂದು ಆಕೆ ತನ್ನ ಭಾಷಣದಲ್ಲಿ ಅಕ್ಷರಶಃ ಜಾಗತಿಕ ನಾಯಕರ ನಡೆಯನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ಪರಿಸರ ಜಾಗೃತಿ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಗ್ರೇಟಾ ಕಳೆದ ಒಂದು ವರ್ಷದಲ್ಲಿ ಶಾಲಾ ಚಟುವಟಿಕೆಗಳಿಂದ ದೂರವಿದ್ದಾಳೆ. ತನ್ನಂತ ವಿದ್ಯಾರ್ಥಿ ಸಮುದಾಯ ನೆಮ್ಮದಿಯಾಗಿ ಶಾಲೆಗಳಲ್ಲಿ ಪಾಠ ಕಲಿಯುವುದು ಬಿಟ್ಟು ಈ ರೀತಿಯ ಪರಿಸರ ಕಾಳಜಿಯ ಹೋರಾಟಕ್ಕೆ ಬರುವಂತಾಗಲು ವಾತಾವರಣ ಬದಲಾವಣೆಯ ಕುರಿತಾಗಿ ಜಾಗತಿಕ ನಾಯಕರ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದು ಗ್ರೇಟಾ ವಾದ.
ತನ್ನ ಕನಸುಗಳನ್ನು ಹಾಗೂ ಬಾಲ್ಯವನ್ನು ಕಸಿದುಕೊಂಡಿರುವ ಕುರಿತಾಗಿಯೂ ಗ್ರೇಟಾ ವಿಶ್ವಸಂಸ್ಥೆಯಲ್ಲಿ ಜಾಗತಿಕ ನಾಯಕರ ವಿರುದ್ಧ ತನ್ನ ಸಿಟ್ಟನ್ನು ಹೊರಹಾಕಿದ್ದಾಳೆ. ‘ನಾನೊಬ್ಬಳು ಅದೃಷ್ಟವಂತೆ ಇರಬಹುದು’ ಆದರೆ ‘ವಿಶ್ವಾದ್ಯಂತ ಜನರು ಸಂಕಷ್ಟದಲ್ಲಿದ್ದಾರೆ, ಹಲವರು ಸಾಯುತ್ತಿದ್ದಾರೆ, ಭೂಮಿಯ ಪರಿಸರ ವ್ಯವಸ್ಥೆಯೇ ಕುಸಿಯುತ್ತಿದೆ, ನಾವೀಗ ಸಮೂಹ ನಾಶದ ಅಂಚಿನಲ್ಲಿ ಬಂದು ನಿಂತಿದ್ದೇವೆ. ಆದರೆ ನೀವೆಲ್ಲಾ ಹಣಕಾಸು ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತಾಗಿ ಕಟ್ಟುಕತೆಗಳನ್ನು ಹೇಳುತ್ತಲೇ ಕಾಲಕಳೆಯುತ್ತಿದ್ದೀರಿ. ನಿಮಗೆಷ್ಟು ಧೈರ್ಯ!’
‘ಕಳೆದ 30 ವರ್ಷಗಳಿಂದ ಹವಾಮಾನ ವೈಪರಿತ್ಯದ ಕುರಿತು ವಿಜ್ಞಾನ ಸ್ಪಷ್ಟವಾಗಿ ಎಲ್ಲವನ್ನೂ ಹೇಳುತ್ತಿದೆ. ಆದರೆ ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲು ನಿಮಗೆಷ್ಟು ಧೈರ್ಯ?’
ಇನ್ನಷ್ಟು ಕ್ರೋಧರಿಂದ ಮಾತನಾಡಿದ ಗ್ರೇಟಾ, ‘ನಿಮಗೆ ನಿಜವಾಗಿಯೂ ಪರಿಸ್ಥಿತಿಯ ತೀವ್ರತೆಯ ಅರಿವಿದ್ದರೆ ಮತ್ತು ಇನ್ನೂ ನೀವು ಈ ವಿಚಾರದಲ್ಲಿ ಕ್ರಮಕೈಗೊಳ್ಳಲು ವಿಫಲರಾದರೆ, ನೀವೆಲ್ಲಾ ಕೆಡುಕಿನ ಪ್ರತಿರೂಪಗಳಾಗುತ್ತೀರಿ ಮತ್ತು ನಾನು ನಿಮ್ಮನ್ನು ಯಾವತ್ತೂ ನಂಬುವುದಿಲ್ಲ’ ಎಂದು ಈ ಯುವ ಪರಿಸರ ಹೋರಾಗಾರ್ತಿ ತನ್ನ ನೋವನ್ನು ಹೊರಹಾಕಿದರು.
ಇನ್ನು ಪ್ರತೀ ಬಾರಿ ನಡೆಯುವ ಇಂತಹ ಸಮಾವೇಶಗಳಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲವಾಗುತ್ತಿರುವ ಕುರಿತಾಗಿಯೂ ಗ್ರೇಟಾ ಸಿಟ್ಟು ಹೊರಹಾಕಲ್ಪಟ್ಟಿತು. ‘ವಾಸ್ತವ ಅಂಕಿ ಅಂಶಗಳು ಬಹಳ ಕಠೋರವಾಗಿರುವುದರಿಂದ ಇಂತಹ ಸಭೆಗಳಲ್ಲಿ ಯಾವುದೇ ಪರಿಣಾಮಕಾರಿ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಲೇ ಇಲ್ಲ. ನೀವು ನಮ್ಮನ್ನು ಪ್ರತೀ ಸಲ ವಿಫಲಗೊಳಿಸುತ್ತಿದ್ದೀರಿ ಆದರೆ ಒಂದು ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಿ, ಯುವ ಜನತೆ ನಿಮ್ಮ ಮೋಸವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಭಾವೀ ಜನಾಂಗದ ದೃಷ್ಟಿ ನಿಮ್ಮೆಲ್ಲರ ಮೇಲಿದೆ. ಒಂದುವೇಳೆ ನೀವು ನಮ್ಮನ್ನು ಸೋಲಿಸಲು ಪ್ರಯತ್ನಿಸಿದರೆ ನಾವು ನಿಮ್ಮನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ’ ಎಂದು ಗ್ರೇಟಾ ವಿಶ್ವನಾಯಕರಿಗೆ ಎಚ್ಚರಿಕೆ ರೂಪದ ಸಂದೇಶವನ್ನು ನೀಡಿದರು.
ಒಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ವಿಶ್ವ ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದಂತೆ ಏಕಾಂಗಿ ಹೋರಾಟವನ್ನು ನಡೆಸುತ್ತಿದ್ದ ಸ್ವೀಡನ್ ದೇಶದ ಈ 16ರ ಬಾಲೆ ತನ್ನ ಛಲಬಿಡದ ಹೋರಾಟದಿಂದಾಗಿ ಇವತ್ತು ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾಳೆ ಮತ್ತು ಆಕೆಯ ಈ ಅಭಿಯಾನಕ್ಕೆ ವಿಶ್ವದ ಪರಿಸರ ಪ್ರೇಮಿಗಳೆಲ್ಲರೂ ಬೆಂಬಲವನ್ನು ಸೂಚಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ಪರಿಸರ ಬದಲಾವಣೆ ಶೃಂಗ ಸಭೆಯಲ್ಲಿ ಮಾತನಾಡುವ ಅವಕಾಶವನ್ನು ಗ್ರೇಟಾ ಸಮರ್ಥವಾಗಿಯೇ ಬಳಸಿಕೊಳ್ಳುವ ಮೂಲಕ ಮುಂದಿನ ಜನಾಂಗ ಈ ಪರಿಸರದ ಕುರಿತಾಗಿ ಹೊಂದಿರುವ ಕಾಳಜಿಯನ್ನು ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ಗ್ರೇಟಾ ಯಶಸ್ವಿಯಾಗಿದ್ದಾಳೆ ಎನ್ನಬಹುದು.