Advertisement

ಭಿನ್ನಾಭಿಪ್ರಾಯ ಬಿಟ್ಟು ಕಾರ್ಮಿಕರು ಒಂದಾಗಿ

04:39 PM May 02, 2022 | Team Udayavani |

ದಾವಣಗೆರೆ: ದೇಶದ ಎಲ್ಲ ಕಾರ್ಮಿಕ ಸಂಘಟನೆಗಳು ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದೇ ವೇದಿಕೆಯಡಿ ಸಂಘಟಿತವಾಗಬೇಕು ಎಂದು ಭಾರತ್‌ ಕಮ್ಯೂನಿಸ್ಟ್‌ ಪಕ್ಷದ (ಸಿಪಿಐ) ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್‌ ಮನವಿ ಮಾಡಿದರು.

Advertisement

ಭಾನುವಾರ ಜಯದೇವ ವೃತ್ತದಲ್ಲಿ ನಡೆದ 136 ನೇ ಮೇ ದಿನಾಚರಣೆ ಹಾಗೂ ಹುತಾತ್ಮರ 52ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಕಾರ್ಮಿಕ ಸಂಘಟನೆಗಳನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ಮಾತ್ರವಲ್ಲ ಇಡೀ ದೇಶಕ್ಕೆ ಎದುರಾಗುವ ಗಂಡಾಂತರ ತಪ್ಪಿಸಲು ಮತ್ತು ಸಮರ್ಥವಾಗಿ ಎದುರಿಸಲು ಎಲ್ಲ ಕಾರ್ಮಿಕ ಸಂಘಟನೆಗಳು ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಒಂದಾಗುವ ಅನಿವಾರ್ಯತೆ ಇದೆ. ಸಿಪಿಐ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಅನ್ನ ನೀಡುವ ರೈತರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರೇ ನಿಜವಾದ ದೇಶದ ಸಂಪತ್ತನ್ನು ಸೃಷ್ಟಿಮಾಡುವಂತಹವರು. ಸಂಪತ್ತನ್ನು ಸೃಷ್ಟಿ ಮಾಡುವಂತಹ ರೈತರು ಮತ್ತು ಕಾರ್ಮಿಕರಿಗೆ ಮಾತ್ರವೇ ಸಂಪತ್ತನ್ನು ವಿತರಿಸುವ ಅಧಿಕಾರ ಇರುತ್ತದೆ. ಅದಕ್ಕೆ ಅತ್ಯಗತ್ಯವಾದ ರಾಜಕೀಯ ಬಲ ಪಡೆಯ ಬೇಕಾಗಿದೆ. ಹಾಗಾಗಿ ಎಲ್ಲ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಗ ಬರಬೇಕಾಗಿದೆ. ಸಂಪತ್ತನ್ನು ಸೃಷ್ಟಿ ಮಾಡುವಂತಹವರು ರಾಜಕೀಯದಿಂದ ದೂರ ಇರಬೇಕು. ರಾಜಕೀಯ ಅಧಿಕಾರ ಪಡೆಯಬಾರದು ಎಂಬ ಹೇಳಿಕೆ, ಪರೋಕ್ಷ ಒತ್ತಡ ನ್ಯಾಯ ಸಮ್ಮತವಾದುದಲ್ಲ ಎಂದು ಪ್ರತಿಪಾದಿಸಿದರು.

ಕಾರ್ಮಿಕ ಮತ್ತು ರೈತರು ಜಾತಿ, ಮತ, ಧರ್ಮ, ಪಂಥದ ಹೊರತಾಗಿ, ಶಾಂತಿ, ನೆಮ್ಮದಿ, ದೇಶದ ಸಮಗ್ರ ಅಭಿವೃದ್ಧಿಗಾಗಿ ವರ್ಗಪ್ರಜ್ಞೆ ಹೊಂದಿರಬೇಕು. ದುರಂತವೆಂದರೆ ಶೇ. 1 ರಷ್ಟಿರುವಂತಹವರು ಆಳುವಂತಾಗಿದೆ. ಬಹುಸಂಖ್ಯಾತರಾದ ರೈತರು, ಕಾರ್ಮಿಕರು ಆಳಿಸಿಕೊಳ್ಳುವಂತಾಗಿದೆ. ಹಾಗಾಗಿ ಎಲ್ಲರೂ ಒಗ್ಗೂಡಿ ಪರ್ಯಾರ ರಾಜಕೀಯ ಶಕ್ತಿ ಸೃಷ್ಟಿಸುವ ಬಗ್ಗೆ ಯೋಚನೆ ಮಾಡಬೇಕು. ರಾಜಕೀಯವನ್ನು ಕೈಗೆತ್ತಿಕೊಳ್ಳಬೇಕು. ಸಾಮಾಜಿಕ ಬದಲಾವಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗಕ್ಕೆ ಬಹು ದೊಡ್ಡ ಅಪಾಯ ಇದೆ. ಪರ್ಯಾಯ ರಾಜಕೀಯ ಶಕ್ತಿಗೆ ಕಾರ್ಮಿಕರ ದಿನ ಸೂಕ್ತ ವೇದಿಕೆಯಾಗಲಿ ಎಂದು ಆಶಿಸಿದರು.

ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕ ವರ್ಗದ ಹಕ್ಕುಗಳನ್ನು ದಮನಿಸುವ ಸರ್ಕಾರದ ನಡೆ ಖಂಡಿಸಿ ಈ ವರ್ಷದ ಮೇ ದಿನಾಚರಣೆ ಆಚರಿಸಬೇಕಾಗಿದೆ. ಶ್ರಮಿಕ ವರ್ಗಕ್ಕೆ ಕನಿಷ್ಠ ವೇತನ ನೀಡುವಲ್ಲಿ, ಕಾರ್ಮಿಕರ ಹಸಿದ ಹೊಟ್ಟೆಗೆ ನ್ಯಾಯ ಕೊಡುವಲ್ಲಿ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡುವಲ್ಲಿ ನಮ್ಮನ್ನಾಳುವ ಸರ್ಕಾರಗಳು ದಯನೀಯವಾಗಿ ಸೋತಿವೆ ಎಂದು ದೂರಿದರು.

Advertisement

ಕಾರ್ಮಿಕರ ಕೂಗು ಸರ್ಕಾರಗಳಿಗೆ ಕೇಳುತ್ತಲೇ ಇಲ್ಲ. ಕಾರ್ಮಿಕರ ಕುರಿತಾದ ಸಂವೇದನೆಯನ್ನೇ ಕಳೆದುಕೊಂಡ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಾದರೆ ಭಾರತದಲ್ಲಿ ಅಮೇರಿಕಾದಲ್ಲಿ 1886ರಲ್ಲಿ ನಡೆದ ಚಿಕಾಗೋ ಮಾದರಿಯ ಚಳವಳಿ ಪುನರಾವರ್ತನೆ ಆಗಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್‌ ಮಾತನಾಡಿ, ಶ್ರಮಿಕ ವರ್ಗದ ಹಬ್ಬವಾದ ಮೇ ದಿನಾಚರಣೆಗೆ ಮೈಕ್‌ ಹಾಕಲು ಸರ್ಕಾರ ಅನುಮತಿ, ಪರವಾನಿಗೆ ನೀಡದೇ ಇರುವುದು ಸರ್ಕಾರಗಳು ಕಾರ್ಮಿಕ ವರ್ಗವನ್ನು ಎಷ್ಟು ಶೋಷಣೆ ಮಾಡುತ್ತಿವೆ ಎಂಬುದರ ಪ್ರತೀಕ. ಎಲ್ಲ ಕಾರ್ಮಿಕರು ಒಂದಾಗಿ ಇಂತಹ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ನಗರಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ಆವರಗೆರೆ ಚಂದ್ರು, ಎಂ.ಬಿ. ಶಾರದಮ್ಮ, ಟಿ.ಎಚ್. ನಾಗರಾಜ್‌, ಆವರಗೆರೆ ವಾಸು, ವಿ. ಲಕ್ಷ್ಮಣ್‌, ಮಹಮದ್‌ ಬಾಷಾ, ಮಹಮ್ಮದ್‌ ರಫೀಕ್‌, ಟಿ.ಎಸ್. ನಾಗರಾಜ್‌ ಇತರರು ಇದ್ದರು. ಐರಣಿ ಚಂದ್ರು ಮತ್ತು ಸಂಗಡಿಗರು ಜಾಗೃತಿ ಗೀತೆಗಳನ್ನು ಹಾಡಿದರು. ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next