Advertisement

Sagara: ಮಹಾಶಿವರಾತ್ರಿಗೆ ವಿಶಿಷ್ಟ ವಿಕ್ರಮ; 8 ಶಿವಾಲಯಗಳಲ್ಲಿ ನಿರಂತರ ನೃತ್ಯ ಪ್ರದರ್ಶನ

04:01 PM Mar 09, 2024 | Kavyashree |

ಸಾಗರ: ನಗರದ ನಾಟ್ಯ ತರಂಗ ಸಂಸ್ಥೆ ಕಲಾವಿದರು ವಿದ್ವಾನ್ ಜಿ.ಬಿ. ಜನಾರ್ದನ್ ಅವರ ಮಾರ್ಗದರ್ಶನದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ  ಶಿವಾಲಯಗಳಲ್ಲಿ ಶುಕ್ರವಾರ ಸಂಜೆ 6. 30 ರಿಂದ ಶನಿವಾರದ ಬೆಳಿಗ್ಗೆ 5 ರವರೆಗೆ ನಿರಂತರವಾಗಿ ನೃತ್ಯ ಪ್ರದರ್ಶನ ನೀಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

Advertisement

ಸಂಸ್ಥೆಯ ಮುಖ್ಯಸ್ಥ ವಿದ್ವಾನ್ ಜಿ.ಬಿ. ಜನಾರ್ಧನ್ ಅವರ ಹೊಸ ಪರಿಕಲ್ಪನೆಯಾಗಿ ಶಿವ ಸಂಚಾರ ನೃತ್ಯ ಜಾಗರಣೆ ಕಾರ್ಯಕ್ರಮ ಸಫಲವಾಗಿ ನಡೆಯಿತು.

ಮಹಾಶಿವರಾತ್ರಿಯಂದು ಜಾಗರಣೆ ಮಾಡಿ ನೃತ್ಯದ ಮೂಲಕ ಶಿವನನ್ನು ಪೂಜಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಕಾರ್ಯಕ್ರಮವೇ ಶಿವಸಂಚಾರ ನೃತ್ಯ ಜಾಗರಣೆ.

ಶಿವರಾತ್ರಿ ಜಾಗರಣೆ ಸಂದರ್ಭ 12 ಗಂಟೆಗಳ ನಿರಂತರ ನೃತ್ಯ ಪ್ರದರ್ಶನ ಮಾಡಿದ ದಾಖಲೆ ಎಲ್ಲಿಯೂ ಇಲ್ಲ. ನಾಟ್ಯ ತರಂಗ ಸಂಸ್ಥೆ ಅಂತಹದ್ದೊಂದು ದಾಖಲೆ ನಿರ್ಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Advertisement

ನಗರದ ಗಣಪತಿ ದೇವಸ್ಥಾನದಲ್ಲಿ ಸಂಜೆ 6ಕ್ಕೆ ಪ್ರಾರಂಭವಾದ ನೃತ್ಯ ಪ್ರದರ್ಶನ, ನಂತರ ಭೀಮನ ಕೋಣೆಯ ತ್ರಯ್ಯಂಬಕೇಶ್ವರ ದೇವಸ್ಥಾನ, ಯಲಗಳಲೆ ಶಿವಾಲಯ, ಇಕ್ಕೇರಿ ಅಘೋರೇಶ್ವರ ದೇವಸ್ಥಾನ, ಗೋಳಗೋಡು ತ್ರಯ್ಯಂಬಕೇಶ್ವರ ದೇವಸ್ಥಾನ, ಸಿರಿವಂತೆ ತ್ರಿಪುರಾಂತಕೇಶ್ವರ ದೇವಸ್ಥಾನ, ನಗರದ ನಗರೇಶ್ವರ ದೇವಸ್ಥಾನದಲ್ಲಿ ನಿರಂತರ ಪ್ರದರ್ಶನ ನೀಡಿದೆ.

ಬೆಳಿಗ್ಗೆ 5ರ ಸುಮಾರಿಗೆ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಶಿವ ಜಾಗರಣೆ ನೃತ್ಯ ಸಂಚಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿದ್ವಾನ್ ಜಿ.ಬಿ.ಜನಾರ್ದನ್, ನಮ್ಮ ಸಂಸ್ಥೆಯಿಂದ ಇದೊಂದು ಹೊಸ ಪ್ರಯೋಗ. ನಗರ ವ್ಯಾಪ್ತಿಯ 2 ಹಾಗೂ ಗ್ರಾಮೀಣ ಭಾಗದ 6 ಸೇರಿದಂತೆ ಒಟ್ಟು 8 ದೇವಸ್ಥಾನಗಳಲ್ಲಿ ಸತತ 12 ಗಂಟೆಗಳ ನೃತ್ಯ ಪ್ರದರ್ಶನ ನೀಡಲಾಗಿದೆ. ರಾಜ್ಯದಲ್ಲಿ ಯಾವ ನೃತ್ಯ ಸಂಸ್ಥೆಯೂ ಈ ತನಕ ಇಂತಹದ್ದೊಂದು ಪ್ರಯೋಗ ನಡೆಸಿಲ್ಲ ಎಂದು ಹೇಳಿದರು.

ಶಿವನನ್ನು ನೃತ್ಯದ ಮೂಲಕ ಆರಾಧಿಸುವ ಈ ಕಾರ್ಯಕ್ರಮ ಅತ್ಯಂತ ಸಂತೋಷ ತಂದಿದೆ. ನನ್ನ ನೇತೃತ್ವದಲ್ಲಿ ಸಂಸ್ಥೆಯ ನೃತ್ಯಪಟುಗಳಾದ ಸಮನ್ವಿತಾ, ರಾಜಲಕ್ಷ್ಮೀ, ಕಾವ್ಯ, ಪೂಜಾ, ನಂದಿನಿ, ಸೌಖ್ಯಾ ಶಿವಸಂಚಾರ ನೃತ್ಯ ಜಾಗರಣೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವಿಶೇಷ ಸಂದರ್ಭದಲ್ಲಿ ಇನ್ನಷ್ಟು ನೃತ್ಯ ಪ್ರದರ್ಶನ ಮಾಡುವ ಉದ್ದೇಶ ಹೊಂದಿದೆ ಎಂದರು.

ನಾಟ್ಯ ತರಂಗ ಸಂಸ್ಥೆ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಜಾನಪದ, ಪುರಾಣ, ಮಹಾಭಾರತ, ರಾಮಾಯಣ, ಶ್ರೀಕೃಷ್ಣನ ವಿವಿಧ ವಿನೋದಾವಳಿ ಹೀಗೆ ಹಲವು ಪ್ರಾಕರಗಳನ್ನು ನೃತ್ಯದ ಮೂಲಕ ರಂಗಕ್ಕೆ ತಂದ ಹೆಗ್ಗಳಿಕೆ ಇವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next