ಮನೋಧರ್ಮ ಸಂಗೀತದಲ್ಲಿ ಶಾಸ್ತ್ರ ಪ್ರಮೇಯವನ್ನು ಮೀರದೆ ಎಲ್ಲೆಯನ್ನು ಅನುನಯಿಸಿ, ಸ್ವರ ಲಯ ವರ್ಣಾಲಂಕಾರಗಳನ್ನು ವಿಸ್ತರಿಸುವ ಪ್ರೀತಿಯ ಪ್ರತಿಭಾ ಸೆಲೆಯು ಕಲಾವಿದನಲ್ಲಿರುವುದು ಕಾಣಬಹುದು. ಯಾವುದೇ ಪೂರ್ವಸಿದ್ಧತೆ ಇಲ್ಲದೆಯೂ ಮನೋಧರ್ಮವೊಂದು ಕಲಾವಿದರಲ್ಲಿ ಮೇಳೈಸಿದರೆ ಕಛೇರಿ ಕಳೆಗಟ್ಟುವುದರಲ್ಲಿ ಸಂಶಯವಿಲ್ಲ.
ಭಾರತೀಯ ಸಂಗೀತದ ಬೆಲೆ ಕಟ್ಟಲಾಗದ ಆಸ್ತಿಯೆಂದರೆ ಮನೋಧರ್ಮ ಕಲ್ಪನೆ ಎಂಬುದು. ಕಲಾವಿದನ ಪ್ರತಿಭೆ-ವ್ಯುತ್ಪತ್ತಿ ಪ್ರಕಾಶವಾಗಲು ಮನೋಧರ್ಮಸಂಗೀತವು ಪೂರಕವಾಗಿ ಕೆಲಸಮಾಡುತ್ತದೆ. ಮನೋಧರ್ಮ ಸಂಗೀತದಲ್ಲಿ ಶಾಸ್ತ್ರ ಪ್ರಮೇಯವನ್ನು ಮೀರದೆ ಎಲ್ಲೆಯನ್ನು ಅನುನಯಿಸಿ, ಸ್ವರ ಲಯ ವರ್ಣಾಲಂಕಾರಗಳನ್ನು ವಿಸ್ತರಿಸುವ ಪ್ರೀತಿಯ ಪ್ರತಿಭಾ ಸೆಲೆಯು ಕಲಾವಿದನಲ್ಲಿರುವುದು ಕಾಣಬಹುದು. ಯಾವುದೇ ಪೂರ್ವಸಿದ್ಧತೆ ಇಲ್ಲದೆಯೂ ಮನೋಧರ್ಮವೊಂದು ಕಲಾವಿದರಲ್ಲಿ ಮೇಳೈಸಿದರೆ ಕಛೇರಿ ಕಳೆಗಟ್ಟುವುದರಲ್ಲಿ ಸಂಶಯವಿಲ್ಲ. ಆದುದರಿಂದಲೇ ಮಹಾಮಹೋಪಾಧ್ಯಾಯ ಡಾ| ರಾ.ಸತ್ಯನಾರಾಯಣ ಅವರು ತಮ್ಮ ಸಂಗೀತರತ್ನಾಕರ ಗ್ರಂಥಕ್ಕೆ ಬರೆದ ನಿಶ್ಶಂಕಹೃದಯ ಎಂಬ ಭಾಷ್ಯದಲ್ಲಿ ಹೇಳಿದುದು :
ಗೀತವಾದ್ಯಗಳೆನ್ನುವ ಕಲೆ ಕ್ಷಣಿಕ ಸೌಂದರ್ಯಾನುಭವವನ್ನು ಹೆಣೆದು ಮಾಡಿದ ಮಾಲೆ ಎಂಬುದಾಗಿ. ಅಂದರೆ ಆ ಕ್ಷಣಕ್ಕೆ ಕಲಾವಿದರಿಗೆ ದಕ್ಕಿದ ಮನೋಧರ್ಮದ ಸ್ಫೂರ್ತಿಯನ್ನು ಹಿಡಿದು ಅಭಿವ್ಯಕ್ತಿಸುವ ವಿಧಾನ. ಇದು ಕೊಡುವ ಕಲಾನುಭವ ಮಾತ್ರ ಶಾಶ್ವತವಾಗಿ ಸಹೃದಯನಲ್ಲಿ ಇರುವಂತಹಾದ್ದು. ಇದು ಹಿಂದುಸ್ಥಾನಿ-ಕರ್ನಾಟಕ ಸಂಗೀತ ಸಂಗಮವಾದ ಕಛೇರಿಗೂ ಅನ್ವಯಿಸುವ ಸತ್ಯವೇ ಹೌದು. ಇದು ಸಾಧಿಸಲ್ಪಟ್ಟದ್ದು ಫೆ.18ರಂದು ಕರ್ಣಾಟಕ ಬ್ಯಾಂಕ್ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಪಂ| ವಿಶ್ವಮೋಹನ್ ಭಟ್ (ಮೋಹನವೀಣೆ) ಮತ್ತು ವಿ| ಮೈಸೂರು ಮಂಜುನಾಥ್ (ಪಿಟೀಲು) ಅವರ ಜುಗಲ್‌ಬಂದಿ ಕಛೇರಿಯಲ್ಲಿ. ಯಾವುದೇ ಪೂರ್ವತಯಾರಿ ಅಥವಾ ಪೂರ್ವ ಮಾತುಕತೆಯನ್ನೂ ಆಡದೆ ವೇದಿಕೆಗೆ ಏರುವಾಗಲೇ ನಿರ್ಧಾರವಾದ ನಟಭೈರವಿ – ಸರಸಾಂಗಿ ರಾಗಗಳ ಪ್ರಸ್ತುತಿಯು ಆ ರಾಗಗಳ ನಾದದ ಅಲೆಗಳು ಮಂಗಳೂರಿನ ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಪ್ರೇಕ್ಷಕರನ್ನು ತೋಯಿಸಿದ್ದು ಸತ್ಯ. ಬ್ಯಾಂಕಿನ ಅಧ್ಯಕ್ಷ ಜಯರಾಮ ಭಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಮ್ಎಸ್. ಇವರ ಸಂಗೀತಾಸಕ್ತಿಯಿಂದಾಗಿ ನೆರವೇರಿತು.
ಸ್ವರಕಲ್ಪನೆ- ಪ್ರಸ್ತುತಿಯು ಮನೋಧರ್ಮ ಸಂಗೀತದ ಬಹುಮುಖ್ಯ ಅಂಶ. ಇದಕ್ಕೆ ಪೂರಕವಾಗಿ ಸಹಕಲಾವಿದರೂ ಸಹೃದಯರಾಗಿ ಪರಸ್ಪರರಿಗೆ ಸ್ಫೂರ್ತಿಯನ್ನು ಒದಗಿಸಬೇಕು. ನಟಭೈರವ್‌ನ ಒಂದೊಂದೇ ಸ್ವರಗಳನ್ನು ಅನುಸಂಧಾನ ಮಾಡಿ ಗಂಭೀರವಾದ ನಾದಾವರಣ ಎಂಬ ಸರೋವರದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟ ಮೋಹನವೀಣೆಯ ನಾದ -ಸಲಿಲಗುಂಫನಕ್ಕೆ ಸಂವಾದಿಯಾಗಿ ಸರಸಾಂಗಿ ರಾಗವನ್ನು ಎತ್ತಿಕೊಂಡ ವಿ| ಮೈಸೂರು ಮಂಜುನಾಥ್‌ರವರ ಪ್ರಸ್ತುತಿ ಈಗಾಗಲೇ ಕಟ್ಟಿದ ಆ ರಾಗದ ಗಂಭೀರ ಸರಸ್ಸಿನಲ್ಲಿ ಚುರುಕಾಗಿ ಸಂಚರಿಸುವಂತೆ ಭಾಸವಾಗುತ್ತಿದ್ದ ಎಳೆಯ ಮತ್ಸ್ಯಗಳ ಚಲನೆಗಳಂತೆ ಪ್ರೇಕ್ಷಕರ ಮನದ ಭಾವಕ್ಕೆ ಕಚಗುಳಿ ಇಡುತ್ತಿದ್ದ ರೀತಿಯಂತಿತ್ತು. ರಾಗದ ಸ್ವರಾಲಂಕಾರಗಳ ಗುಂಪುಗಳನ್ನು ಏರುವ, ಇಳಿಯುವ, ಆ ಸ್ವರದಲ್ಲೇ ನಿಂತು ಅನುನಯಿಸುವ ಪ್ರಕ್ರಿಯೆಗಳು ನಟಭೈರವ್-ಸರಸಾಂಗಿಯ ಪ್ರಸ್ತುತಿಯಲ್ಲಿ ಪ್ರತಿಭಾಪೂರ್ಣವಾಗಿ ಮೂಡಿಬಂದಿತು. ಸೌಂದರ್ಯ ಮೀಮಾಂಸಕಾರ ಭಟ್ಟತೌತನು ಪ್ರತಿಭೆಯ ಕುರಿತು ಹೇಳಿದ ಮಾತು ನೆನಪಾಗುತ್ತದೆ:ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ ಅಂದರೆ ಹೊಸ ಹೊಸ ಭಾವವನ್ನು ಸಂತತವಾಗಿ ಕಾಣುವ, ಕಟ್ಟುವ ಪ್ರಜ್ಞೆ ಪ್ರತಿಭೆ (ಪ್ರೊ| ತೀ.ನಂ.ಶ್ರೀ ಅನುವಾದ) ಪ್ರತಿಭೆ ಮತ್ತು ವ್ಯುತ್ಪತ್ತಿ (ನಿಪುಣತೆ) ಈ ಎರಡೂ ಗುಣಗಳು ಸಮಾಹಿತಗೊಂಡ ಮಿಂಚಿನ ಸಂಚಾರವನ್ನು ಪ್ರೇಕ್ಷಕರಿಗೆ ಕೊಟ್ಟ ಅಪೂರ್ವ ಕಛೇರಿ ಇದು. ಮುಂದೆ ತನಿಯಾಗಿ ನುಡಿಸಲು ಅಂದಿನ ತಬಲ ವಾದಕರಾದ ಪಂ| ಘಾಟೆ ಮತ್ತು ವಿ| ಪತ್ರಿ ಸತೀಶ್ ಕುಮಾರ್ ಅವರಿಗೆ ವೇದಿಕೆ ತೆರೆದಿಟ್ಟರು ಪ್ರಧಾನ ಕಲಾವಿದರು. ಮೃದಂಗ ಮತ್ತು ತಬಲಾ ವಾದನ ನಟಭೈರವ್-ಸರಸಾಂಗಿಯ ಮನೋಧರ್ಮೀಯ ಓಘವನ್ನು ಮುಂದುವರಿಸಿದ ಭಾಗದಂತಿತ್ತು.
ಮುಂದೆ ಮೈಸೂರು ಮಂಜುನಾಥ್ ಅವರು ದಾಸರ ಹಾಡಾದ ಆಡಿಸಿದಳೆಶೋದಾ ಜಗದೋದ್ಧಾರನಾ… ಪ್ರಸ್ತುತಿ ಮಾಡಿದರು. ಪಂ| ವಿಶ್ವಮೋಹನ ಭಟ್ ತಮಗೆ ಗ್ರ್ಯಾಮಿ ಪ್ರಶಸ್ತಿ ದೊರಕಿಸಿ ಕೊಟ್ಟ ತಮ್ಮದೇ ರಚನೆಯನ್ನು ಪ್ರಸ್ತುತಿಗೊಳಿಸಿ ಕೊನೆಯದಾಗಿ ವಂದೇ ಮಾತರಮ್… ಮೂಲಕ ಕಛೇರಿಗೆ ಮಂಗಲಗೀತೆಯನ್ನು ಹಾಡಿದರು.
ಕೃಷ್ಣಪ್ರಕಾಶ ಉಳಿತ್ತಾಯ